ಬೆಂಗಳೂರು: ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ ಎಂಟು ದಿನಗಳಾಗಿವೆ. ಈ ನಡುವೆ ತಮಿಳು ಸ್ಟಾರ್ ನಟ ಸೂರ್ಯ ಅವರು ಶಿವಣ್ಣನ ಜೊತೆ ಕಠೀರವ ಸ್ಟುಡಿಯೋಗೆ ಭೇಟಿ ನೀಡಿ ಪುನೀತ್ ರಾಜ್ಕುಮಾರ್ ಸಮಾಧಿ ದರ್ಶನ ಪಡೆದು ಕಣ್ಣಿರಿಟ್ಟಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪ್ಪು ಅಗಲಿಕೆ ಸಹಿಸಲಾಗದು. ಅಣ್ಣಾವ್ರ ಕುಟುಂಬದೊಂದಿಗೆ ನಮ್ಮ ಕುಟುಂಬವು ತುಂಬಾ ಒಡನಾಟವಿತ್ತು. ಅಣ್ಣಾವ್ರು ನನಗೆ ಮಾದರಿಯಾಗಿದ್ರು. ನಾನು ನನ್ನ ತಾಯಿ ಹೊಟ್ಟೆಯಲ್ಲಿ 4 ತಿಂಗಳು ಇದ್ದಾಗ ಅಪ್ಪುಗೆ 7 ತಿಂಗಳು. ಪುನೀತ್ ಅಗಲಿಕೆಯಿಂದ ನಮ್ಮ ಕುಟುಂಬಕ್ಕೂ ನೋವಾಗಿದೆ. ನಮ್ಮ ತಂದೆ ತಾಯಿ ಇನ್ನು ಆ ನೋವಿನಿಂದ ಹೊರ ಬಂದಿಲ್ಲ. ನಮ್ಮ ಹೃದಯಗಳಲ್ಲಿ ಅಪ್ಪು ಯಾವಾಗಲೂ ನಗುತ್ತಲೇ ಇರ್ತಾರೆ ಎಂದು ಸೂರ್ಯ ಭಾವುಕರಾಗಿದ್ದಾರೆ.
ಎಲ್ಲ ಫೋಟೊಗಳಲ್ಲೂ ಪುನೀತ್ ನಗ್ತಿದ್ರು. ಆದರೆ ಅವರು ಇಲ್ಲ ಎಂಬುದು ಸಹಿಸಲಾಗುತ್ತಿಲ್ಲ. ಆದರೆ ಅವರ ನಗು ಫೋಟೋಗಳಲ್ಲಿ ಜೀವಂತವಾಗಿರುತ್ತೆ ಎಂದರು. ಈ ಸಂದರ್ಭದಲ್ಲಿ ಕನ್ನಡಿಗರಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಧೈರ್ಯವನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಸೂರ್ಯ ಹೇಳಿದ್ದಾರೆ.