ಬೆಂಗಳೂರು: ಸ್ಯಾಂಡಲ್‌ವುಡ್ ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನ ಅಗಲಿ ಇವತ್ತಿಗೆ 11 ದಿನಗಳು ಆಗಿವೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂದಿನಿಂದಲೂ ಆಹಾರ ಪ್ರಿಯರು.. ಫುಡ್ ಅಂದ್ರೆ ಪುನೀತ್ ರಾಜ್‌ಕುಮಾರ್‌ಗೆ ಪಂಚ ಪ್ರಾಣ.. ರಸ್ತೆಯ ಮೇಲಿನ ಅಂಗಡಿಯಿಂದ ಹಿಡಿದು, ಪಂಚತಾರಾ ಹೋಟೆಲ್‌ಗಳಲ್ಲಿ ಸಿಗುವ ಖಾದ್ಯಗಳೆಲ್ಲವನ್ನೂ ಅಪ್ಪು ಸವಿದಿದ್ದಾರೆ. ಇಂದು ಕೂಡ ರಾಜಕುಮಾರನಿಗೆ ತರೇಹವಾರಿ ಖಾದ್ಯಗಳನ್ನ, ವಿವಿಧ ತಿಂಡಿ-ತಿನಿಸುಗಳನ್ನ ಇಡಲಾಗಿತ್ತು.
ಅದರಲ್ಲೂ ನಾನ್‌ವೆಜ್ ಅಂದ್ರೆ ಪುನೀತ್ ಅವರಿಗೆ ಸಿಕ್ಕಾಪಟ್ಟೆ ಇಷ್ಟ, ಹೀಗಾಗಿ ಬಿರಿಯಾನಿ, ವೆರೈಟಿ ಚಿಕನ್ ಐಟಮ್ಸ್, ಮಟನ್ ಸಾಂಬಾರ್, ಇಡ್ಲಿ, ದೋಸೆ ಸೇರಿದಂತೆ ಅನೇಕ ರುಚಿಕರ ಭಕ್ಷ್ಯಗಳನ್ನ ಇಡಲಾಗಿತ್ತು. ಪುನೀತ್ ರಾಜ್‌ಕುಮಾರ್ ಅವರಿಗೆ ನಾನ್ ವೆಜ್ ಎಷ್ಟು ಪ್ರೀತಿಯೋ.. ಸಿಹಿ ತಿನಿಸುಗಳ ಮೇಲೂ ಕೂಡ ಅಷ್ಟೇ ಆಸೆ. ಅವರಿಗೆ ಇಷ್ಟವಾದ ಸಿಹಿ ತಿನಿಸುಗಳಾದ ಮೈಸೂರು ಪಾಕ್, ಲಾಡು, ದೂದ್ ಪೇಡಾ, ಕಾಜು ಬರ್ಫಿ, ಜಾಮೂನು, ಹೋಳಿಗೆ, ಬೇಸನ್ ಲಾಡು, ಕರ್ಜಿಕಾಯಿ, ಪಾಯಸ ಸೇರಿದಂತೆ ಸಾಕಷ್ಟು ಸಿಹಿ ಪದಾರ್ಥಗಳನ್ನ ಇಟ್ಟು ನೈವೇದ್ಯ ಮಾಡಲಾಯಿತು.
ಪ್ರಮುಖವಾಗಿ ಒಬ್ಬಟ್ಟು, ಚಕ್ಕುಲಿ, ಕೋಡ್ ಬಳೆ, ಕಡ್ಲೆಪುರಿ, ಚಪಾತಿ, ಪಾಯಸ, ಕರ್ಜಿಯಾಯಿ, ರಾಗಿ ಮುದ್ದೆ, ಮೊಸರನ್ನ, ಅನ್ನ ನಾಟಿ ಕೋಳಿ ಸಾರು, ಮಟನ್ ಬಿರಿಯಾನಿ, ಮಟನ್ ಸಾರು, ಬೋಟಿಗೊಜ್ಜು, ಹಣ್ಣುಗಳಿಟ್ಟು ಎಡೆ ಇಟ್ಟಿದ್ದರು. ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಆಗಮಿಸಿದ್ದವರಿಗೆ ಹೋಳಿಗೆ, ರೂಮಾಲಿ ರೋಟಿ, ವೆಜ್ ಪಲಾವ್, ಅನ್ನ-ಸಾಂಬರ್, ರಸಂ, ಹಪ್ಪಳ, ಉಪ್ಪಿನಕಾಯಿ, ಬಾಳೆ ಹಣ್ಣು ಊಟ ನೀಡಲಾಗಿತ್ತು.
ಇನ್ನು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಾಮಾಧಿಗೆ ಪತ್ನಿ ಅಶ್ವಿನಿ ಆಗಮಿಸಿ, ಮಕ್ಕಳ ಸಮೇತರಾಗಿ ಪೂಜೆ ಸಲ್ಲಿಸಿದ್ರು. ಮೊದಲಿಗೆ ಸಮಾಧಿ ಬಳಿ ಬಂದ ಅಶ್ವಿನಿ, ಪ್ರದಕ್ಷಿಣೆ ಹಾಕಿ, ನಮಸ್ಕರಿಸಿದ್ರು. ಮಕ್ಕಳಾದ ಧೃತಿ ಮತ್ತು ವಂದಿತಾರೂ ಕೂಡ ಅಚ್ಚುಮೆಚ್ಚಿನ ಅಪ್ಪನಿಗೆ ಮಂಗಳಾರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿದರು.