ಪುನೀತ್ ಅವರಿಗಿದ್ದಷ್ಟು ಪುಟಾಣಿ ಅಭಿಮಾನಿಗಳು ಭಾರತದ ಬೇರೆ ಯಾವುದೇ ನಟನಿಗೆ ಇರಲಿಕಿಲ್ಲ! | Puneeth Rajkumar was popular among kids, probably no other actor had so many young fans!


ನೀವು ಸಹ ಈ ವಿಷಯವನ್ನು ಗಮನಿಸಿರಬಹುದು. ಕಳೆದ ವಾರ ಆಕಸ್ಮಿಕ ಮತ್ತು ಅಕಾಲಿಕ ಮರಣವನ್ನಪ್ಪಿದ ಪುನೀತ್ ರಾಜಕುಮಾರ್ ಅವರನ್ನು ಮಕ್ಕಳು ಅಗಾಧವಾಗಿ ಇಷ್ಟಪಡುತ್ತಿದ್ದರು. ಪ್ರಾಯಶ: ಅವರಿಗಿದ್ದಷ್ಟು ಪುಟಾಣಿ ಅಭಿಮಾನಿಗಳು ಭಾರತದ ಯಾವುದೇ ಭಾಷೆಯ ಸೂಪರ್ ಸ್ಟಾರ್ಗೆ ಇರಲಿಲ್ಲ. ಅಪ್ಪುಗೂ ಅಷ್ಟೇ, ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಶೂಟಿಂಗ್ನಲ್ಲಿರಲಿ ಅಥವಾ ಬೇರೆ ಯಾವುದೋ ಕೆಲಸದಲ್ಲಿರಲಿ, ಮಕ್ಕಳು ಕಂಡರೆ ಸಾಕು, ಅವರೊಂದಿಗೆ ಪ್ರೀತಿಯಿಂದ ಮಾತಾಡಿ, ಬಿಸ್ಕತ್ತು, ಚಾಕೊಲೇಟ್ ಮತ್ತು ಐಸ್ಕ್ರೀಮ್ ಕೊಡಿಸುತ್ತಿದ್ದರು. ಅವರನ್ನು ನೆನೆದು ಅಳುತ್ತಿರುವ ಈ ಮುದ್ದು ಹುಡುಗಿಯನ್ನು ನೋಡಿ. ಮಗುವಿನ ಹೆಸರು ಸ್ಫೂರ್ತಿ ಮತ್ತು ಅವಳ ತಂದೆ ಸಾಗರ್ ಮೈಸೂರಿನಲ್ಲಿ ಟೇಲರ್ ಆಗಿದ್ದಾರೆ.

ಪುನೀತ್ ರಾಜಕುಮಾರ ಅವರ ‘ಪೃಥ್ವಿ’ ಸಿನಿಮಾದ ಹೆಚ್ಚಿನ ಭಾಗದ ಚಿತ್ರೀಕರಣ ಮೈಸೂರಿನಲ್ಲಾಗಿತ್ತು. ಈ ಚಿತ್ರದಲ್ಲಿ ಅಪ್ಪು ಐ ಎ ಎಸ್ ಅಧಿಕಾರಿಯೊಬ್ಬನ ಪಾತ್ರದಲ್ಲಿ ನಟಿಸಿದ್ದರು. ಪಾತ್ರಕ್ಕೆ ತಕ್ಕ ಉಡುಪು ಧರಿಸುವುದು ಅವರ ಜಾಯಾಮಾನವಾಗಿತ್ತು. ಸದರಿ ಪಾತ್ರಕ್ಕೆ ಅವರಿಗೆ ಡೀಸೆಂಟ್ ಅನಿಸುವ ಬಟ್ಟೆಗಳನ್ನು ಸಾಗರ್ ಹೊಲಿದು ಕೊಟ್ಟಿದ್ದರು.

ಹಾಗಾಗಿ, ಅಪ್ಪು ಅವರು ಸಾಗರ್ರ ಶಾಪ್ ಗೆ ಬಂದು ಹೋಗುವುದನ್ನು ಮಾಡುತ್ತಿದ್ದರು. ಅಪ್ಪನೊಟ್ಟಿಗೆ ಶಾಪ್ ಗೆ ಬರುತ್ತಿದ್ದ ಸ್ಫೂರ್ತಿಗೆ ಅಪ್ಪು ಅವರೊಂದಿಗೆ ಬಾಂಧವ್ಯ ಬೆಳೆಯಿತು.

ಪುನೀತ್ ಗೆ ಈ ಮಗು ಮೇಲೆ ಅದೆಷ್ಟು ಪ್ರೀತಿಯೆಂದರೆ, ಅಂಗಡಿಗೆ ಬರುವಾಗಲೆಲ್ಲ ಅವಳಿಗಾಗಿ ಚಾಕೊಲೇಟ್ ಮತ್ತು ಐಸ್ ಕ್ರೀಮ್ ತರುತ್ತಿದ್ದರು ಮತ್ತು ಅವಳನ್ನು ತಮ್ಮ ತೊಡೆ ಮೇಲೆ ಕೂರಿಸಿಕೊಂಡು ತಿನ್ನಿಸುತ್ತಿದ್ದರು. ಹಾಗೆ ಅವಳೊಂದಿಗೆ ಮಾತಾಡುವಾಗ, ಮುಂದೆ ನೀನು ನಟಿಯಾಗಬೇಕು, ನನ್ನೊಂದಿಗೆ ನಟಿಸಬೇಕು ಅಂತ ಅವರ ಹೇಳಿದ್ದರಂತೆ.

ಅಪ್ಪು ತನ್ನೊಂದಿಗೆ ಕಳೆದ ಸಮಯವನ್ನೆಲ್ಲ ನೆನೆನೆದು ಈ ಪುಟ್ಟ ಬಾಲೆ ರೋದಿಸುತ್ತಿದ್ದಾಳೆ. ತನಗೆ ಅವರು ಬೇಕು ಆಂತ ಹೇಳುತ್ತಿದ್ದಾಳೆ. ಮಕ್ಕಳಿಗೆ ಅಪ್ಪು ಮೇಲಿದ್ದ ಪ್ರೀತಿ ನಿಜಕ್ಕೂ ದಂಗು ಬಡಿಸುತ್ತದೆ.

ಇದನ್ನೂ ಓದಿ:  ಬೆಂಗಳೂರಿನ ಎಸ್​ಆರ್​ವಿ ಥಿಯೇಟರ್​ನಲ್ಲಿ ಕೊನೆಯದಾಗಿ ಅಟೆಂಡ್​ ಮಾಡಿದ್ದ ಪುನೀತ್​; ಇಲ್ಲಿದೆ ಸಿಸಿಟಿವಿ ವಿಡಿಯೋ

TV9 Kannada


Leave a Reply

Your email address will not be published. Required fields are marked *