‘ಪುನೀತ್ ಇಲ್ಲದಿದ್ದಾಗ ದೂರು ಏಕೆ? ದಯವಿಟ್ಟು ಬೇಡ’: ಶಿವರಾಜ್​ಕುಮಾರ್​ ಮನವಿ | Puneeth rajkumar death shivarajkumar says no need of police complaint mdn


‘ಪುನೀತ್ ಇಲ್ಲದಿದ್ದಾಗ ದೂರು ಏಕೆ? ದಯವಿಟ್ಟು ಬೇಡ’: ಶಿವರಾಜ್​ಕುಮಾರ್​ ಮನವಿ

ಪುನೀತ್​ ರಾಜ್​ಕುಮಾರ್​, ಶಿವರಾಜ್​ಕುಮಾರ್

ಪುನೀತ್​​ ರಾಜ್​ಕುಮಾರ್​ ನಿಧನದಿಂದ ಅವರ ಅಭಿಮಾನಿ ಬಳಗ ಶೋಕಸಾಗರದಲ್ಲಿ ಮುಳುಗಿದೆ. ಬೆಳಕಿನ ಹಬ್ಬದಲ್ಲೂ ಕತ್ತಲು ಆವರಿಸಿದೆ. ಅಪ್ಪು ಹೃದಯಾಘಾತದಿಂದ ಮೃತಪಟ್ಟ ಸತ್ಯವನ್ನು ನಂಬಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಈ ನಡುವೆ ಅವರ ನಿಧನದ ಬಗ್ಗೆ ಕೆಲವರಿಗೆ ಅನುಮಾನ ಕೂಡ ವ್ಯಕ್ತವಾಗಿದೆ. ಹಾಗಾಗಿ ತನಿಖೆ ಆಗಬೇಕು ಎಂದು ಪೊಲೀಸರಿಗೆ ದೂರು ನೀಡಲು ಕೆಲವರು ಮುಂದಾಗಿದ್ದಾರೆ. ಈ ಬಗ್ಗೆ ನಟ ಶಿವರಾಜ್​ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ಸಹೋದರನ ನಿಧನದಿಂದ ತೀವ್ರ ನೋವು ಅನುಭವಿಸುತ್ತಿರುವ ಶಿವಣ್ಣ, ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಸಿದ್ದಾರೆ.

‘ಪುನೀತ್ ಇಲ್ಲದಿದ್ದಾಗ ದೂರು ಏಕೆ? ದಯವಿಟ್ಟು ಇದೆಲ್ಲ ಬೇಡ. ಈಗ ದೂರಿನ ವಿಚಾರ ಮಾತನಾಡಿ ಪ್ರಯೋಜನ ಇಲ್ಲ. ಹಳೆಯದನ್ನೆಲ್ಲಾ ಬಿಟ್ಟು ಮುಂದೆ ಸಾಗಬೇಕಿದೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ. ಜೀವನದಲ್ಲಿ ಯಾವುದೇ ಕಟ್ಟ ಘಟನೆ ನಡೆದರೂ ಬದುಕು ಮುಂದೆ ಸಾಗಲೇಬೇಕು. ಹಾಗಾಗಿ ನೋವು ನುಂಗಿಕೊಂಡು ಜೀವನ ನಡೆಸಬೇಕು ಎಂಬ ಮಾತನ್ನು ಶಿವಣ್ಣ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಆ ಮೂಲಕ ಇಡೀ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಶಿವರಾಜ್​ಕುಮಾರ್​ ಧೈರ್ಯ ತುಂಬುತ್ತಿದ್ದಾರೆ.

ಪುನೀತ್​ ನಿಧನದಿಂದ ತೀವ್ರ ನೋವಿಗೆ ಒಳಗಾಗಿರುವ ಕೆಲವು ಅಭಿಮಾನಿಗಳು ಆತ್ಮಹತ್ಯೆಯ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಆ ರೀತಿ ಮಾಡದಂತೆ ಅಭಿಮಾನಿಗಳಲ್ಲಿ ಶಿವಣ್ಣ ಮನವಿ ಮಾಡಿದ್ದಾರೆ. ‘ಅಪ್ಪು ಇರದ ನೋವು ನಮ್ಮೆಲ್ಲರಲ್ಲೂ ಇದೆ. ಅದನ್ನ ಒಪ್ಪಿಕೊಂಡು ಮುಂದೆ ಸಾಗಬೇಕು. ಪುನೀತ್​ ರಾಜ್​ಕುಮಾರ್​ ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ನಾವೆಲ್ಲ ಮುಂದುವರಿಸೋಣ. ಆ ಮೂಲಕ ಅಪ್ಪುವನ್ನ ಜೀವಂತವಾಗಿರಿಸೋಣ. ನಿಮ್ಮ ಕುಟುಂಬಕ್ಕೆ ನೀವು ಮುಖ್ಯ. ನಮಗೆ ನೀವು ಮುಖ್ಯ. ದಯವಿಟ್ಟು ಆತ್ಮಹತ್ಯೆಯಂತಹ‌ ನಿರ್ಧಾರ ಮಾಡಬೇಡಿ’ ಎಂದು ಶಿವರಾಜ್​ಕುಮಾರ್ ಮನವಿ ಮಾಡಿದ್ದಾರೆ.

ಅನೇಕ ಕಡೆಗಳಲ್ಲಿ ರಸ್ತೆ ಮತ್ತು ವೃತ್ತಗಳಿಗೆ ಪುನೀತ್​ ರಾಜ್​ಕುಮಾರ್​ ಹೆಸರು ಇಡಲಾಗುತ್ತಿದೆ. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಪುನೀತ್ ಹೆಸರು ನಾಮಕರಣ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಶಿವಣ್ಣ, ‘ಖಂಡಿತಾ ಅಂತಹ ಅಭಿಯಾನಗಳನ್ನು ಬೆಂಬಲಿಸೋಣ. ಅಪ್ಪು ಮಾಡುತ್ತಿದ್ದ ಸೋಶಿಯಲ್ ಸರ್ವೀಸ್ ನಾವು ಮುಂದುವರಿಸೋಣ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಪುನೀತ್​ ನಿಧನಕ್ಕೂ 15-20 ನಿಮಿಷ ಮುನ್ನ ನಿಜಕ್ಕೂ ಏನು ನಡೆಯಿತು? ಇಲ್ಲಿದೆ ಕಾರು ಚಾಲಕ ತೆರೆದಿಟ್ಟ ವಿವರ

‘ದಾದಾಸಾಹೇಬ್​ ಫಾಲ್ಕೆ’ ರೀತಿಯೇ ಡಾ. ರಾಜ್​ ಹೆಸರಲ್ಲಿ ನೀಡುವ ಪ್ರಶಸ್ತಿ​ ಬಗ್ಗೆ ಹೊಸ ಕನಸು ಕಂಡಿದ್ದ​ ಪುನೀತ್​

TV9 Kannada


Leave a Reply

Your email address will not be published. Required fields are marked *