ಪುನೀತ್ ಓದಿಸುತ್ತಿದ್ದ ಮಕ್ಕಳನ್ನು ಓದಿಸಲು ಅವಕಾಶ ನೀಡಿ ಶಿವಣ್ಣ, ರಾಘಣ್ಣ- ಕೈ ಮುಗಿದು ವಿಶಾಲ್​ ಮನವಿ


ಬೆಂಗಳೂರು: ಪುನೀತ್​ ರಾಜ್​​ಕುಮಾರ್​​ ಅವರಿಗೆ ನಮನ ಸಲ್ಲಿಸಲು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ತಮಿಳು ನಟ ವಿಶಾಲ್​ ಅವರು, ರಾಘವೇಂದ್ರ ರಾಜ್​​ಕುಮಾರ್​ ಹಾಗೂ ಶಿವರಾಜ್​ಕುಮಾರ್ ಅವರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.

ವೇದಿಕೆ ಮೇಲೆ ಮಾತನಾಡಿದ ವಿಶಾಲ್​ ಅವರು, ಇಲ್ಲಿ ಬಂದಿರೋ ಮಕ್ಕಳು ದೇವರಿದಂತೆ.. ನನಗೆ ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು. ನಮ್ಮ ಅಪ್ಪ ಕನ್ನಡಿಗ.. ಪುನೀತ್ ನಮ್ಮ ಅಣ್ಣ.. ಅವರ ಮುಖ ಇನ್ನೂ ನನ್ನ ಕಣ್ಣ ಮುಂದೇ ಇದೆ.

ನನ್ನ ಹುಟ್ಟುಹಬ್ಬದ ಸಂದರ್ಭದಲ್ಲೇ ಪುನೀತ್ ಇನ್ನಿಲ್ಲ ಅನ್ನೋ ಸುದ್ದಿ ಗೊತ್ತಾಯಿತು. ಎರಡು ಮೂರು ದಿನ ನಿದ್ದೆ ಮಾಡಲು ನನ್ನಿಂದ ಆಗಲಿಲ್ಲ. ಸಿನಿಮಾದಲ್ಲಿ ಎಷ್ಟೋ ಧೈರ್ಯದಿಂದ ನಟನೆ ಮಾಡುತ್ತೇವೆ. ಆದರೆ ಇಂತಹ ವಿಚಾರಗಳನ್ನು ತೆಗೆದುಕೊಳ್ಳುವುದು ಅಷ್ಟು ಸುಲಭ ಅಲ್ಲ.

ನನ್ನ ಸಹೋದರ, ನೆಚ್ಚಿನ ನಟ, ಸ್ನೇಹಿತ ಪುನೀತ್​​​ಗೆ ಒಂದು ಮಾತು ಕೊಟ್ಟಿದ್ದೇನೆ. ಪದೇ ಪದೇ ಆ ಮಾತನ್ನು ಹೇಳೋದಿಲ್ಲ ಮಾಡಿ ತೋರಿಸುತ್ತೇನೆ. ಅದರಂತೆ ರಾಜ್​​ಕುಮಾರ್ ಅವರ ಕುಟುಂಬದವರಿಗೆ ಒಂದು ಮನವಿ ಮಾಡಿಕೊಳ್ಳುತ್ತಿದ್ದು, ನನಗೆ ಒಂದು ಅವಕಾಶ ಕೊಡಿ. ಪುನೀತ್ ಅವರ ಕಾರ್ಯವನ್ನು ಮುಂದುವರಿಸುವ ಅವಕಾಶವನ್ನು ಶಿವಣ್ಣ, ರಾಘಣ್ಣ ದಯಮಾಡಿ ನೀಡಿ. ನನಗೆ ಹಣ ಇದೆ ಅಥವಾ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಪುನೀತ್​ ಅವರು 1,800 ಮಕ್ಕಳಿಗೆ ನೀಡುತ್ತಿದ್ದ ನೆರವು ನೀಡೋ ಅವಕಾಶ ಕೊಡಿ. ಏಕೆಂದರೆ ನಾನು ಸಿನಿಮಾ ರಂಗಕ್ಕೆ ಬಂದು 18 ವರ್ಷ ಆಯ್ತು.. ಒಂದು ಸ್ವತಃ ಮನೆ ಮಾಡಬೇಕು ಅಂತಾ ಕನಸು ಕಂಡಿದ್ದೆ. ಆದರೆ ಆ ಕನಸು ಮುಂದಿನ ವರ್ಷಕ್ಕೆ ಮುಂದೂಡುತ್ತೇನೆ. ಪುನೀತ್ ಹೆಸರನ್ನು 100 ವರ್ಷ ಅಲ್ಲ, 1000 ವರ್ಷ ನೆನಪ್ಪಿಟ್ಟುಕೊಳ್ಳಬೇಕು.. ಪುನೀತ್ ಯಾರಿಗೂ ಗೊತ್ತಿಲ್ಲದೇ ಇಂತಹ ಕಾರ್ಯ ಮಾಡಿದ್ದರು. ಆದ್ದರಿಂದ ಅವರ ಕೆಲಸವನ್ನು ನಾನು ಮುಂದುವರಿಸುತ್ತೇನೆ.

News First Live Kannada


Leave a Reply

Your email address will not be published. Required fields are marked *