ಪುನೀತ್ ಜತೆ ಪ್ರಶಾಂತ್​ ನೀಲ್ ‘ಆಹ್ವಾನ’ ಚಿತ್ರ ಮಾಡಬೇಕಿತ್ತು; ಸಿನಿಮಾ ಟೇಕ್​ ಆಫ್ ಆಗದಿರಲು ಕಾರಣ ಇಲ್ಲಿದೆ | Here is why Puneeth rajkumar and Prashanth neel movie work not started


ಪುನೀತ್ ಜತೆ ಪ್ರಶಾಂತ್​ ನೀಲ್ ‘ಆಹ್ವಾನ’ ಚಿತ್ರ ಮಾಡಬೇಕಿತ್ತು; ಸಿನಿಮಾ ಟೇಕ್​ ಆಫ್ ಆಗದಿರಲು ಕಾರಣ ಇಲ್ಲಿದೆ

ಪ್ರಶಾಂತ್ ನೀಲ್​-ಪುನೀತ್

ಪ್ರಶಾಂತ್ ನೀಲ್ ಅವರು (Prashanth Neel) ಸ್ಯಾಂಡಲ್​ವುಡ್​ನ ಯಶಸ್ವಿ ನಿರ್ದೇಶಕ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ (KGF Chapter 2) ದೊಡ್ಡ ಮಟ್ಟದ ಯಶಸ್ಸು ಕಂಡಿದೆ.  ಬಾಲಿವುಡ್ ಅಂಗಳದಲ್ಲಿ ಈ ಚಿತ್ರ ಕಮಾಲ್ ಮಾಡುತ್ತಿದೆ. ನಾಲ್ಕೇ ದಿನಕ್ಕೆ ಹಿಂದಿಯಲ್ಲಿ 193 ಕೋಟಿ ಗಳಿಕೆ ಮಾಡಿದೆ. ಪುನೀತ್ ರಾಜ್​ಕುಮಾರ್ (Puneeth Rajkumar) ಹಾಗೂ ಪ್ರಶಾಂತ್ ನೀಲ್ ಅವರು ಒಟ್ಟಾಗಿ ಒಂದು ಸಿನಿಮಾ ಮಾಡಬೇಕಿತ್ತು ಎನ್ನುವ ಸುದ್ದಿಯೊಂದು ಈ ಮೊದಲು ಹಬ್ಬಿತ್ತು. ಇದನ್ನು ಪ್ರಶಾಂತ್ ನೀಲ್ ಖಚಿತಪಡಿಸಿದ್ದಾರೆ. ಆ್ಯಂಕರ್ ಅನುಶ್ರೀ ಜತೆಗಿನ ಸಂದರ್ಶನದಲ್ಲಿ ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಸಂಸ್ಥೆಯ ವಿಜಯ್ ಕಿರಗಂದೂರು ಪುನೀತ್ ರಾಜ್​ಕುಮಾರ್ ಜತೆಗೆ ಒಳ್ಳೆಯ ನಂಟು ಹೊಂದಿದ್ದರು. ವಿಜಯ್​ ಅವರು ಸಿನಿಮಾ ನಿರ್ಮಾಣ ಆರಂಭಿಸಿದ್ದು ಪುನೀತ್ ನಟನೆಯ ‘ನಿನ್ನಿಂದಲೇ’ ಸಿನಿಮಾದಿಂದ. ಇದಾದ ಬಳಿಕ, ಪುನೀತ್​ ನಟನೆಯ ‘ರಾಜಕುಮಾರ’ ಹಾಗೂ ‘ಯುವರತ್ನ’ ಸಿನಿಮಾಗಳಿಗೆ ವಿಜಯ್ ಬಂಡವಾಳ ಹೂಡಿದ್ದರು. ಪ್ರಶಾಂತ್ ನೀಲ್ ಕೂಡ ವಿಜಯ್ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾಗಳಲ್ಲಿ ವಿಜಯ್ ಹಾಗೂ ಪ್ರಶಾಂತ್ ಒಟ್ಟಾಗಿ ಕೆಲಸ ಮಾಡಿದ್ದಾರೆ. ಅಚ್ಚರಿ ಎಂದರೆ, ‘ಕೆಜಿಎಫ್’ಗೂ ಮೊದಲೇ ಪ್ರಶಾಂತ್ ಅವರು ಪುನೀತ್ ಜತೆ ಕೆಲಸ ಮಾಡಬೇಕಿತ್ತು. ಅದು ಸಾಧ್ಯವಾಗಲೇ ಇಲ್ಲ.

‘ಪುನೀತ್ ಜತೆ ನೀವು ಸಿನಿಮಾ ಮಾಡಬೇಕಿತ್ತು ಎನ್ನುವ ವಿಚಾರ ನಿಜವೇ’ ಎಂದು ಅನುಶ್ರೀ ಕೇಳಿದರು. ಇದಕ್ಕೆ ಪ್ರಶಾಂತ್ ಉತ್ತರ ನೀಡಿದ್ದಾರೆ. ‘ಉಗ್ರಂ ಆದ್ಮೇಲೆ ನಾನು ಪುನೀತ್ ಜತೆಗೆ ಒಂದು ಕಥೆ ಚರ್ಚೆ ಮಾಡಿದ್ದೆ. ಆ ಸಿನಿಮಾಗೆ ‘ಆಹ್ವಾನ’ ಎನ್ನುವ ಶೀರ್ಷಿಕೆ ಇಟ್ಟಿದೆ. ಇದೊಂದು ಪಕ್ಕಾ ಫ್ಯಾಮಿಲಿ ಕಥೆ ಆಗಿತ್ತು. ಉಗ್ರಂ ಸಿನಿಮಾ ಹಿಟ್ ಜನರಿಗೆ ತಲುಪದೆ ಇರಲು ಫ್ಯಾಮಿಲಿ ಎಲಿಮೆಂಟ್​ ಇರಲಿಲ್ಲ ಅನ್ನೋದು ನನ್ನ ನಂಬಿಕೆ. ಈ ಕಾರಣಕ್ಕೆ ನಾನು ಫ್ಯಾಮಿಲಿ ಎಲಿಮೆಂಟ್​ ಇರುವ ಕಥೆ ಆಯ್ಕೆ ಮಾಡಿಕೊಂಡಿದ್ದೆ. ಅಪ್ಪು ಅವರಿಗೆ ಕಥೆ ಇಷ್ಟವಾಗಿತ್ತು. ಆ ಸಂದರ್ಭದಲ್ಲಿ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರು. ಹೀಗಾಗಿ ಸಿನಿಮಾ ಮಾಡಲು ಆಗಿರಲಿಲ್ಲ’ ಎಂದಿದ್ದಾರೆ ಪ್ರಶಾಂತ್.

‘ಪುನೀತ್ ಬ್ಯುಸಿ ಇದ್ದಾರೆ. ಬೇರೆ ಯಾವುದಾದರೂ ಕಥೆ ಇದೆಯೇ ಎಂದು ವಿಜಯ್ ಕಿರಗಂದೂರು ಅವರು ಕೇಳಿದರು. ಆಗ ನಾನು ಕೆಜಿಎಫ್​ ಕೆಲಸ ಶುರುಮಾಡಿದೆವು. ನಂತರ ಅಪ್ಪು ಜತೆ ಕೆಲಸ ಮಾಡಲು ಆಗಲೇ ಇಲ್ಲ’ ಎಂದಿದ್ದಾರೆ ಪ್ರಶಾಂತ್.

TV9 Kannada


Leave a Reply

Your email address will not be published. Required fields are marked *