ನೇತ್ರದಾನ ವಾಗ್ದಾನ ಪತ್ರಕ್ಕೆ ಸಹಿ
ದಾವಣಗೆರೆ: ನಟ ಪುನೀತ್ ರಾಜಕುಮಾರ್ ನಿಜಕ್ಕೂ ಅಭಿಮಾನಿಗಳ ಪಾಲಿಗೆ ದೇವರೇ ಆಗಿದ್ದಾರೆ. ಪುನೀತ್ ಸಾವನ್ನಪ್ಪಿದ ದಿನ ಇಡಿ ದೇಶವೇ ಕಂಬನಿ ಮಿಡಿದಿತ್ತು. ಅದೇ ದಿನ ಪುನೀತ್ ಪಾರ್ಥವ ಶರೀರ ವಿಕ್ರಂ ಆಸ್ಪತ್ರೆಯಿಂದ ಸ್ಥಳಾಂತರ ಆಗುವ ಮೊದಲು ನೇತ್ರದಾನ ಕಾರ್ಯ ಕೂಡ ನಡೆಯಿತು. ಇದೊಂದು ದೃಶ್ಯ ನಿಜಕ್ಕೂ ರಾಜ್ಯದಲ್ಲಿ ಒಂದು ಹೊಸ ಕ್ರಾಂತಿಗೆ ಕಾರಣವಾಗಿದೆ. ಅಪ್ಪು ಮೇಲಿನ ಅಭಿಮಾನದಿಂದ ಇಡಿ ಗ್ರಾಮವೇ ನೇತ್ರದಾನದ ವಾಗ್ದಾನ ಮಾಡಿದ್ದಾರೆ. ಇದನ್ನು ಸರ್ಕಾರ ಸದ್ಭಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಿದೆ.
ನಟ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಇಂದಿಗೆ ಹನ್ನೊಂದನೆ ದಿನ. ಇಡಿ ದೇಶವೇ ಕಂಬನಿ ಮಿಡಿಯುತ್ತಿದೆ. ಇನ್ನು ಪುನೀತ್ ನಿಧವಾದ ದಿನ ಅವರ ಕುಟುಂಬದ ಸದಸ್ಯರು ಮೊದಲು ಮಾಡಿದ ಕೆಲಸ ಅಪ್ಪುವಿನ ಕಣ್ಣುಗಳನ್ನು ದಾನ ಮಾಡಿದ್ದು, ಈ ಒಂದು ಘಟನೆ ಎಂತಹ ಕ್ರಾಂತಿ ಮಾಡಿದೆ ಅಂದರೆ ಅಭಿಮಾನಿಗಳು ಕೂಡ ಅಪ್ಪು ಮಾರ್ಗದರ್ಶನದಂತೆ ನಡೆಯಲು ಸಿದ್ಧವಾಗಿದ್ದಾರೆ.
ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡಾದಲ್ಲಿ 125 ಮನೆಗಳಿವೆ. ಇಲ್ಲಿನ ಬಹುತೇಕರು ಅಪ್ಪು ಅಭಿಮಾನಿಗಳು. ಹೀಗಾಗಿ ದೀಪಾವಳಿ ಹಬ್ಬವನ್ನು ಅಪ್ಪು ಭಾವಚಿತ್ರದೊಂದಿಗೆ ಆಚರಿಸಿದ್ದಾರೆ. ಇನ್ನು ಇಲ್ಲಿನ 125 ಮನೆಗಳಲ್ಲಿ ಮಹಿಳೆಯರು ಸೇರಿ 100ಕ್ಕೂ ಹೆಚ್ಚು ಜನ ನೇತ್ರದಾನ ವಾಗ್ದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಇಡಿ ಗ್ರಾಮವೇ ನೇತ್ರದಾನಕ್ಕೆ ಮುಂದಾಗಿದ್ದಾರೆ.
ಅಪ್ಪು ಮಾಡಿದ ಸಂಕಲ್ಪವನ್ನು ನಾವು ಪೂರ್ಣ ಮಾಡಬೇಕು. ಅಂದಕಾರದಲ್ಲಿ ಇರುವ ಕಣ್ಣಿಲ್ಲದವರಿಗೆ ನೇತ್ರದಾನ ಮಾಡಬೇಕು. ಅವರು ಇತರರಂತೆ ಬದುಕುವಂತಾಗಬೇಕು. ಅಪ್ಪು ಹೆಸರು ಹೇಳಿಕೊಂಡು ಅಭಿಮಾನಿ ಅಂತಾ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ತಪ್ಪು ಮಣ್ಣನಲ್ಲಿ ಮಣ್ಣಾಗಿ ಹೋಗುವ ಕಣ್ಣುಗಳು ಇನ್ನೊಬ್ಬರಿಗೆ ಹೇಗೆ ಬೆಳಕಾಗುತ್ತವೆ ಎಂಬುದನ್ನು ಪುನೀತ್ ರಾಜ್ ಕುಮಾರ್ ಜಗತ್ತಿಗೆ ತೊರಿಸಿಕೊಟ್ಟಿದ್ದಾರೆ. ಇದಕ್ಕಾಗಿ ಇಡಿ ಗ್ರಾಮವೇ ಸಿದ್ಧವಾಗಿದೆ. ನಾವೆಲ್ಲರು ನೇತ್ರದಾನ ಮಾಡುತ್ತೇವೆ ಎಂದು ಗ್ರಾಮದ ಪ್ರಮುಖರಾದ ತಿಮ್ಮೇಶ ನಾಯ್ಕ ತಿಳಿಸಿದ್ದಾರೆ.
ನೇತ್ರದಾನ ಮಾಡಲು ಅದರದ್ದೇ ಆದ ಕೆಲ ನಿಯಮಗಳಿವೆ. ಇದಕ್ಕಾಗಿ ಚಟ್ಟೋಭನಹಳ್ಳಿ ಗ್ರಾಮಸ್ಥರು ದಾವಣಗೆರೆ ಬಾಪೂಜಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಾಪೂಜಿ ಆಸ್ಪತ್ರೆ ಜೆಜೆಎಂ ಮೆಡಿಕಲ್ ಕಾಲೇಜಿನ ಕಣ್ಣೀನ ವಿಭಾಗದ ನೇತ್ರತ್ವದಲ್ಲಿ ಈ ಪ್ರಕ್ರಿಯೆ ಶುರುವಾಗಿದೆ. ಇಲ್ಲಿ ನೇತ್ರದಾನಕ್ಕೆ ವಾಗ್ದಾನ ಮಾಡಲು ಬಂದ ಜನರ ಹೆಸರು ದಾಖಲಿಸಿಕೊಂಡು. ಅವರ ರಕ್ತಗುಂಪು ಸೇರಿದಂತೆ ಕೆಲ ಮಾಹಿತಿಯನ್ನು ವೈದ್ಯರು ಸಂಗ್ರಹಿಸಿ ಅವರಿಗೊಂದು ಐಡಿ ಕೂಡಾ ಕೊಡುತ್ತಾರೆ.
ಯಾರೇ ನೇತ್ರದಾನ ಒಪ್ಪಿಗೆ ನೀಡಿದವರು ಇದ್ದರೆ ಅವರ ಬಗ್ಗೆ ಸಮಗ್ರ ಮಾಹಿತಿ ಬಾಪೂಜಿ ಆಸ್ಪತ್ರೆಯಲ್ಲಿ ಇರುತ್ತದೆ. ಸ್ಥಳೀಯರು ಯಾರೇ ಮಾಹಿತಿ ನೀಡಿದರೆ ಸಾಕು. ಅವರ ಮರಣದ ನಂತರ ಆ ಕಣ್ಣುಗಳನ್ನು ಇನ್ನೊಬ್ಬರಿಗೆ ನೀಡುವ ಜವಾಬ್ದಾರಿ ಬಾಪೂಜಿ ಆಸ್ಪತ್ರೆ ವಹಿಸಿಕೊಂಡಿದೆ. ನಿಜಕ್ಕೂ ಪುನೀತ್ ಗಳಿಸಿದ್ದು ಅಷ್ಟು ಇಷ್ಟು ಅಲ್ಲಾ. ಬೆಟ್ಟವನ್ನೆ ಗಳಿಸಿ ಮರೆಯಾದ ಮಹಾ ಚೇತನ ಅಂದರೆ ತಪ್ಪಾಗಲಿಕ್ಕಿಲ್ಲ.
ವರದಿ: ಬಸವರಾಜ್ ದೊಡ್ಮನಿ
ಇದನ್ನೂ ಓದಿ:
ಕನ್ನಡಿಗರ ಪ್ರೀತಿಯ ನಟ ಪುನೀತ್ ರಾಜಕುಮಾರ್ಗೆ ಇಂದು ಹೊನ್ನಾಳಿಯಲ್ಲಿ ಸಂಗೀತ ನಮನ, ನೇತ್ರದಾನ ವಾಗ್ದಾನ
ಅಪ್ಪು ಪುಣ್ಯ ಸ್ಮರಣೆಗೆ ಹೇಗಿದೆ ಸಮಾಧಿ ಅಲಂಕಾರ? ವಿವಿಧ ಹೂವುಗಳಿಂದ ಪುನೀತ್ಗೆ ನಮನ