ಬಾಗಲಕೋಟೆ: ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವೇಳೆ ವಿಪ್ ಉಲ್ಲಂಘನೆ ಮಾಡಿದ ಹಿನ್ನೆಲೆ ಮೂವರು ಬಿಜೆಪಿ ಸದಸ್ಯೆಯರ ಸದಸ್ಯತ್ವವನ್ನ ಅನರ್ಹಗೊಳಿಸಲಾಗಿದೆ. ಬಾಗಲಕೋಟೆ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೂಲಕ ಡಿ.ಸಿ ಕ್ಯಾಪ್ಟನ್ ರಾಜೇಂದ್ರ ಈ ಆದೇಶ ಹೊರಡಿಸಿದ್ದಾರೆ.

9-11-2020ರಂದು ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದಿತ್ತು.ಇದೆ ವೇಳೆ ಬಿಜೆಪಿ ಸದಸ್ಯೆಯರಾದ ಸವಿತಾ ಹುರಕಡ್ಲಿ, ಚಾಂದಿನಿ ನಾಯಕ್ ಹಾಗೂ ಗೋದಾವರಿ  ಬಾಟ್​​ ಎಂಬವರು ಕಾಂಗ್ರೆಸ್​ಗೆ ಬೆಂಬಲ ಸೂಚಿಸಲು ಮುಂದಾಗಿದ್ದರು. ಇದಕ್ಕೂ ಮುನ್ನ ಈ ಮೂವರು ಸೇರಿದಂತೆ 13 ಬಿಜೆಪಿ ಸದಸ್ಯರಿಗೆ ಪಕ್ಷದಿಂದ ವಿಪ್‌ ನೀಡಲಾಗಿತ್ತು. ವಿಪ್ ಉಲ್ಲಂಘಿಸಿ ಅಧ್ಯಕ್ಷ ಸ್ಥಾನಕ್ಕೆ ಸವಿತಾ ಹುರಕಡ್ಲಿ ನಾಮಪತ್ರ ಸಲ್ಲಿಸಿದ್ದರು. ಗೋದಾವರಿ ಬಾಟ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಚಾಂದಿನಿ ನಾಯಕ್ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪರ ಕೈ ಎತ್ತಿ ಬೆಂಬಲ ನೀಡಿದ್ದರು.

ಈ ವೇಳೆ ಬಿಜೆಪಿ ತೇರದಾಳ ಶಾಸಕ ಸಿದ್ದು ಸವದಿ, ಬಿಜೆಪಿ ಸದಸ್ಯರು  ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ವಾಗ್ವಾದ ನಡೆದಿತ್ತು. ಮೂವರು ಬಿಜೆಪಿ ಪುರಸಭೆ ಸದಸ್ಯೆಯರನ್ನು ತಳ್ಳಾಡಿ ನೂಕಾಡಲಾಗಿತ್ತು. ಸ್ವತಃ ಶಾಸಕ ಸಿದ್ದು ಸವದಿ, ಚಾಂದಿನಿ ನಾಯಕ್ ಅವರನ್ನು ತಳ್ಳಾಡಿ ಎಳೆದಾಡಿದ್ದರು. ಪುರಸಭೆ ಮುಂದೆ ಭಾರೀ ಹೈಡ್ರಾಮಾ ನಡೆದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಮೂಲಕ ಮೂವರು ಬಿಜೆಪಿ ಸದಸ್ಯೆಯರು ಕಾಂಗ್ರೆಸ್ ಸದಸ್ಯರ ಜೊತೆ ಕೈಜೋಡಿಸಿ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಅಧಿನಿಯಮ ಕಾಯ್ದೆ ಉಲ್ಲಂಘನೆ ಮಾಡಿರೋ ಹಿನ್ನೆಲೆ ಇವರ ಸದಸ್ಯತ್ವ ಅನರ್ಹಗೊಳಿಸಲಾಗಿದೆ.

 

The post ಪುರಸಭೆ ಚುನಾವಣೆ ವೇಳೆ ವಿಪ್ ಉಲ್ಲಂಘಿಸಿದ 3 ಬಿಜೆಪಿ ಸದಸ್ಯೆಯರು ಅನರ್ಹ appeared first on News First Kannada.

Source: newsfirstlive.com

Source link