ಪುಷ್ಪ, ಆರ್​ಆರ್​ಆರ್​ ಮೀರಿಸಿ ಟ್ರೆಂಡ್​ ಆದ ‘ಗಂಧದ ಗುಡಿ’; ಪುನೀತ್​ ಡಾಕ್ಯುಮೆಂಟರಿಗೆ ಬಹುಪರಾಕ್​ | Puneeth Rajkumar Gandhada Gudi teaser beats RRR and Pushpa movie on twitter trending


ಪುಷ್ಪ, ಆರ್​ಆರ್​ಆರ್​ ಮೀರಿಸಿ ಟ್ರೆಂಡ್​ ಆದ ‘ಗಂಧದ ಗುಡಿ’; ಪುನೀತ್​ ಡಾಕ್ಯುಮೆಂಟರಿಗೆ ಬಹುಪರಾಕ್​

ಜ್ಯೂ. ಎನ್​ಟಿಆರ್​, ಪುನೀತ್​ ರಾಜ್​ಕುಮಾರ್​, ಅಲ್ಲು ಅರ್ಜುನ್​

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ (Puneeth Rajkumar) ನಿರ್ಮಾಣದ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರದ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಅಷ್ಟಿಷ್ಟಲ್ಲ. ಇದರ ಟೈಟಲ್​ ಟೀಸರ್​ (Gandhada Gudi Title Teaser) ಇಂದು (ಡಿ.6) ಬಿಡುಗಡೆ ಆಗಿದೆ. ‘ಪಿಆರ್​ಕೆ’ ಆಡಿಯೋ ಮೂಲಕ ರಿಲೀಸ್​ ಆಗಿರುವ ಈ ಟೀಸರ್​ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಅದರ ಪರಿಣಾಮವಾಗಿ ಸೋಶಿಯಲ್​ ಮೀಡಿಯಾದಲ್ಲಿ ‘ಗಂಧದ ಗುಡಿ’ ಹ್ಯಾಶ್​ಟ್ಯಾಗ್​ ಸಖತ್​ ಟ್ರೆಂಡ್​ ಆಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಅನೇಕ ಸೆಲೆಬ್ರಿಟಿಗಳು ಮತ್ತು ಅಪಾರ ಸಂಖ್ಯೆ ಅಭಿಮಾನಿಗಳು ಈ ಟೀಸರ್​ ಬಗ್ಗೆ ಟ್ವೀಟ್​ ಮಾಡುತ್ತಿದ್ದಾರೆ. ಟ್ವಿಟರ್​ನಲ್ಲಿ ಪುಷ್ಪ (Pushpa Movie) ಮತ್ತು ಆರ್​ಆರ್​ಆರ್​ (RRR Movie) ಸಿನಿಮಾಗಳನ್ನೂ ಮೀರಿಸಿ ‘ಗಂಧದ ಗುಡಿ’ ಟ್ರೆಂಡ್​ ಆಗುತ್ತಿದೆ. ಟೀಸರ್​ನಲ್ಲಿ ಇರುವ ದೃಶ್ಯ ವೈಭವ ಕಂಡ ಜನರು ಬೆರಗಾಗಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರ ಈ ಕನಸಿನ ಪ್ರಾಜೆಕ್ಟ್​ಗೆ ಅನೇಕ ಗಣ್ಯರು ಶುಭ ಕೋರಿದ್ದಾರೆ. ಆದಷ್ಟು ಬೇಗ ‘ಗಂಧದ ಗುಡಿ’ ರಿಲೀಸ್​ ಆಗಲಿ ಎಂದು ಎಲ್ಲರೂ ಕಾಯುವಂತಾಗಿದೆ.

ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಸಿನಿಮಾದ ಟ್ರೇಲರ್​ ಇಂದು ಬಿಡುಗಡೆ ಆಗಲಿದೆ. ಸಂಜೆ 6 ಗಂಟೆಗೆ ಟ್ರೇಲರ್​ ಬಿಡುಗಡೆ ಆಗುತ್ತಿರುವುದರಿಂದ ಟಾಲಿವುಡ್​ ಸಿನಿಪ್ರಿಯರು ಆ ಬಗ್ಗೆ ಹೆಚ್ಚು ಹೆಚ್ಚು ಟ್ವೀಟ್​ ಮಾಡುತ್ತಿದ್ದಾರೆ. ಹಾಗಾಗಿ ಅದು ಟ್ರೆಂಡಿಂಗ್​ನಲ್ಲಿದೆ. ಅದನ್ನು ಮೀರಿಸಿ ‘ಗಂಧದ ಗುಡಿ’ ಸೌಂಡು ಮಾಡುತ್ತಿದೆ. ಅದೇ ರೀತಿ, ಬಹುನಿರೀಕ್ಷಿತ ‘ಆರ್​ಆರ್​ಆರ್​’ ಸಿನಿಮಾ ಕೂಡ ಟ್ರೇಲರ್​ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಂಡಿದೆ. ಡಿ.9ರಂದು ಈ ಚಿತ್ರದ ಟ್ರೇಲರ್​ ರಿಲೀಸ್​ ಆಗಲಿದ್ದು, ಈಗಲೇ ಕ್ರೇಜ್​ ಹೆಚ್ಚಿಸಿದೆ. ಹಾಗಾಗಿ ‘ಆರ್​ಆರ್​ಆರ್​’ ಕೂಡ ಟ್ವಿಟರ್​ ಟ್ರೆಂಡ್​ನಲ್ಲಿದೆ. ಅದನ್ನು ಹಿಂದಿಕ್ಕಿ ‘ಗಂಧದ ಗುಡಿ’ ಮಿಂಚುತ್ತಿದೆ.

ನಟ ಯಶ್​, ಸಿಎಂ ಬಸವರಾಜ ಬೊಮ್ಮಾಯಿ, ‘ಕೆಜಿಎಫ್: ಚಾಪ್ಟರ್​ 2’ ನಿರ್ದೇಶಕ ಪ್ರಶಾಂತ್​ ನೀಲ್​, ರಿಷಬ್​ ಶೆಟ್ಟಿ, ನಿಖಿಲ್​ ಕುಮಾರಸ್ವಾಮಿ, ಶರಣ್​ ಸೇರಿದಂತೆ ಅನೇಕರು ​‘ಗಂಧದ ಗುಡಿ’ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಆ ಮೂಲಕ ಹೆಚ್ಚು ಜನರನ್ನು ಈ ಟೀಸರ್​ ತಲುಪುತ್ತಿದೆ.

‘ಗಂಧದ ಗುಡಿ’ ಡಾಕ್ಯುಮೆಂಟರಿ ಬಗ್ಗೆ ಪುನೀತ್​ ರಾಜ್​ಕುಮಾರ್​ ಅವರು ಅನೇಕ ಸೆಲೆಬ್ರಿಟಿಗಳ ಜತೆ ಚರ್ಚೆ ಮಾಡಿದ್ದರು. ನಟ ಯಶ್​ ಅದನ್ನೀಗ ನೆನಪು ಮಾಡಿಕೊಂಡಿದ್ದಾರೆ. ‘ನೀವು ಪ್ರತಿ ಬಾರಿ ಇದರ ಬಗ್ಗೆ ಮಾತನಾಡಿದಾಗಲೂ ನಿಮ್ಮ ಕಣ್ಣಲ್ಲಿ ಮೂಡುತ್ತಿದ್ದ ಹೊಳಪು ಈಗ ನೆನಪಾಗುತ್ತಿದೆ. ನಿಮಗೆ ಈ ಪ್ರಾಜೆಕ್ಟ್​ ಎಷ್ಟು ಆಪ್ತವಾಗಿತ್ತು ಎಂಬುದಕ್ಕೆ ನಿಮ್ಮ ಉತ್ಸಾಹವೇ ಸಾಕ್ಷಿ ಆಗಿತ್ತು. ನಮ್ಮ ಗಂಧದ ಗುಡಿಯನ್ನು ನಿಮ್ಮ ನೋಟದ ಮೂಲಕ ನಮಗೆ ತೋರಿಸುತ್ತಿರುವುದಕ್ಕೆ ಧನ್ಯವಾದಗಳು ಅಪ್ಪು ಸರ್​. ಇದು ನಿಜಕ್ಕೂ ಸ್ವರ್ಗ’ ಎಂದು ಯಶ್​ ಟ್ವೀಟ್​ ಮಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *