ಪುಷ್ಪ ಸಿನಿಮಾದಿಂದ ಸ್ಫೂರ್ತಿ ಪಡೆದು ಅಪ್ರಾಪ್ತರಿಂದ ಕೊಲೆ; ಫೇಮಸ್​ ಆಗಲೆಂದು ಹತ್ಯೆಯ ವಿಡಿಯೋ ಅಪ್​ಲೋಡ್ ಮಾಡಲು ಪ್ಲಾನ್! | Inspired by Telugu movie Pushpa Minors Killed man wanted to post murder video online to become famous


ಪುಷ್ಪ ಸಿನಿಮಾದಿಂದ ಸ್ಫೂರ್ತಿ ಪಡೆದು ಅಪ್ರಾಪ್ತರಿಂದ ಕೊಲೆ; ಫೇಮಸ್​ ಆಗಲೆಂದು ಹತ್ಯೆಯ ವಿಡಿಯೋ ಅಪ್​ಲೋಡ್ ಮಾಡಲು ಪ್ಲಾನ್!

ಸಾಂದರ್ಭಿಕ ಚಿತ್ರ

ನವದೆಹಲಿ: ಸಿನಿಮಾಗಳು ನಮ್ಮ ಮೇಲೆ ಬಹಳ ಪ್ರಭಾವ ಬೀರುತ್ತವೆ. ‘ದೃಶ್ಯಂ’ ಸಿನಿಮಾ (Drishyam Movie) ನೋಡಿ ಅದರ ಪ್ರಭಾವದಿಂದ ಅದೇ ರೀತಿ ಪ್ಲಾನ್ ಮಾಡಿ ಕೊಲೆ ಮಾಡಿದ್ದ ಕೆಲವು ಘಟನೆಗಳು ಈ ಹಿಂದೆ ನಡೆದಿದ್ದವು. ಇದೀಗ ಅದೇ ರೀತಿ ಇತ್ತೀಚೆಗೆ ತೆರೆಕಂಡ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಸಿನಿಮಾದಿಂದ (Pushpa Movie) ಪ್ರೇರೇಪಿತರಾಗಿ ಕೊಲೆ ಮಾಡಿರುವ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ನಡೆದಿದೆ. 24 ವರ್ಷದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪದ ಮೇಲೆ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕೊಲೆ ಮಾಡಿದ ಆರೋಪಿಗಳು ‘ಪುಷ್ಪ’, ‘ಭೌಕಾಲ’ದಂತಹ ದರೋಡೆಕೋರ ಸಿನಿಮಾಗಳಿಂದ ಪ್ರೇರಿತರಾಗಿ, ಆ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಕೊಲೆ ಮಾಡಿದ್ದಾರೆ. ಕೊಲೆ ಮಾಡುವ ಇಡೀ ಘಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಫೇಮಸ್ ಆಗುವ ಸಲುವಾಗಿ ತಮ್ಮ ಕೃತ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ.

ಪೊಲೀಸರು ಜಹಾಂಗೀರ್‌ಪುರಿಯ ಕೆ ಬ್ಲಾಕ್‌ಗೆ ತಲುಪಿದಾಗ, ಆರೋಪಿಗಳಲ್ಲಿ ಒಬ್ಬರು ವೀಡಿಯೊವನ್ನು ಚಿತ್ರೀಕರಿಸಲು ಪ್ರಾರಂಭಿಸಿದ್ದರು. ಆ ಕೊಲೆಯ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುವಾಗ ಮೂವರನ್ನು ಪೊಲೀಸರು ಥಳಿಸಿದ್ದಾರೆ. ಹಲ್ಲೆಗೊಳಗಾಗಿದ್ದ ವ್ಯಕ್ತಿಯನ್ನು ಜಹಾಂಗೀರ್​ಪುರಿಯ ಬಿಜೆಆರ್​ಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ದೇಹದ ಮೇಲೆ ಸಾಕಷ್ಟು ಇರಿತದ ಗಾಯಗಳು ಆಗಿದ್ದರಿಂದ ಅವರು ಸಾವನ್ನಪ್ಪಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಮತ್ತು ಸ್ಥಳೀಯ ಗುಪ್ತಚರ ಸಿಬ್ಬಂದಿಯ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯನ್ನು ಚಿತ್ರೀಕರಿಸಿದ ಮೊಬೈಲ್ ಮತ್ತು ಕೊಲೆಗೆ ಬಳಸಿದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಬಂಧಿಸಿದ್ದರಿಂದ ಆ ಆರೋಪಿಗಳಿಗೆ ಕೊಲೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದು ಸಾಧ್ಯವಾಗಲಿಲ್ಲ.

ತೆಲುಗಿನ ಪುಷ್ಪ ಸಿನಿಮಾ ನೋಡಿ ಆ ಮೂವರು ಅಪ್ರಾಪ್ತರು ಗುಂಪು ಕಟ್ಟಿಕೊಂಡು ಕೊಲೆ ಮಾಡಲು ಸಂಚು ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹತ್ಯೆಯ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಬಯಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಯುವಕರು ಆ ವ್ಯಕ್ತಿಯೊಂದಿಗೆ ಜಗಳವಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

TV9 Kannada


Leave a Reply

Your email address will not be published. Required fields are marked *