ಪೆಗಾಸಸ್​ ಸ್ಪೈವೇರ್​ನ್ನು ಮೋದಿ ಸರ್ಕಾರವೇ ಖರೀದಿಸಿತ್ತು ಎಂದು ವರದಿ ಮಾಡಿದ್ದ ನ್ಯೂಯಾರ್ಕ್​ ಟೈಮ್ಸ್​ಗೆ ಲೀಗಲ್​ ನೋಟಿಸ್​ ಕಳಿಸಿದ ಚೆನ್ನೈ ವಕೀಲ | Chennai Advocate sends notice to New York Times over Pegasus spyware report


ಪೆಗಾಸಸ್​ ಸ್ಪೈವೇರ್​ನ್ನು ಮೋದಿ ಸರ್ಕಾರವೇ ಖರೀದಿಸಿತ್ತು ಎಂದು ವರದಿ ಮಾಡಿದ್ದ ನ್ಯೂಯಾರ್ಕ್​ ಟೈಮ್ಸ್​ಗೆ ಲೀಗಲ್​ ನೋಟಿಸ್​ ಕಳಿಸಿದ ಚೆನ್ನೈ ವಕೀಲ

ಸಾಂಕೇತಿಕ ಚಿತ್ರ

2022ರ ಜನವರಿ 8ರಂದು ಪೆಗಾಸಸ್ ಸ್ಪೈವೇರ್​ (Pegasus Spyware)​ ಬಗ್ಗೆ ಪ್ರಕಟಿಸಿರುವ ವರದಿಗೆ ಸಂಬಂಧಪಟ್ಟಂತೆ ಚೆನ್ನೈ ಮೂಲದ ಹಿರಿಯ ವಕೀಲ ಎಂ.ಶ್ರೀನಿವಾಸನ್​ ಅವರು ನ್ಯೂಯಾರ್ಕ್​ ಟೈಮ್ಸ್​ಗೆ ಲೀಗಲ್​ ನೋಟಿಸ್​ ಕೊಟ್ಟಿದ್ದಾರೆ. 2021ರಲ್ಲಿ ವಿವಾದ ಸೃಷ್ಟಿಸಿದ್ದ ಈ ಪೆಗಾಸಸ್​ ಸ್ಪೈವೇರ್​ ಕುರಿತಂತೆ ನ್ಯೂಯಾರ್ಕ್​ ಟೈಮ್ಸ್​ ವರದಿ ಪ್ರಕಟಿಸಿ, ಭಾರತದ ಕೇಂದ್ರ ಸರ್ಕಾರ 2017ರಲ್ಲಿ ಇಸ್ರೇಲ್​​ನೊಂದಿಗೆ ಮಾಡಿಕೊಂಡ 2 ಬಿಲಿಯನ್​ ಡಾಲರ್​ಗಳಷ್ಟು ಮೊತ್ತದ ರಕ್ಷಣಾ ಒಪ್ಪಂದದ ಭಾಗವಾಗಿ ಈ ಸ್ಪೈವೇರ್​ನ್ನು ಕೂಡ ಖರಿದಿ ಮಾಡಿತ್ತು ಎಂದು ಹೇಳಿದೆ. ಈ ವರದಿಯನ್ನು ಯಾವ ಆಧಾರದ ಮೇಲೆ ಪ್ರಕಟಿಸಲಾಗಿದೆ ಎಂಬುದನ್ನು ನ್ಯೂಯಾರ್ಕ್​ ಟೈಮ್ಸ್ ತಿಳಿಸಬೇಕು. ಒಂದು ವಾರದಲ್ಲಿ ಕ್ಷಮೆ ಕೇಳಬೇಕು. ಇಲ್ಲದೆ ಇದ್ದರೆ 1 ಸಾವಿರ ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಸೇರಿ, ಇನ್ನಿತರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಲೀಗಲ್​ ನೋಟಿಸ್​ನಲ್ಲಿ ತಿಳಿಸಲಾಗಿದೆ. ಎಂ.ಶ್ರೀನಿವಾಸನ್​ ಅವರು ಮದ್ರಾಸ್ ಹೈಕೋರ್ಟ್​​ನಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದು, ಜ.31ರಂದು ಇಮೇಲ್ ಮೂಲಕ ನ್ಯೂಯಾರ್ಕ್ ಟೈಮ್ಸ್​ಗೆ ನೋಟಿಸ್​ ನೀಡಿದ್ದಾರೆ. 

ನ್ಯೂಯಾರ್ಕ್ ಟೈಮ್ಸ್​​ನಲ್ಲಿ ಪ್ರಕಟವಾದ ಲೇಖನ ದೇಶದ ಗೌರವವನ್ನು ಹಾಳುಮಾಡುವಂತಿದೆ. ಭಾರತ ಸ್ಪೈವೇರ್​ ಖರೀದಿಸಿರುವ ಬಗ್ಗೆ ಇಸ್ರೇಲ್​​ನ ಎನ್ಎಸ್​ಒ (ಸ್ಪೈವೇರ್​ ಉತ್ಪಾದನಾ ಸಂಸ್ಥೆ) ದೃಢೀಕರಿಸಿಲ್ಲ. ಹಾಗಾಗಿ ಈ ವರದಿ ದುರುದ್ದೇಶಪೂರಿತವಾಗಿದೆ ಎಂದೂ ಶ್ರೀನಿವಾಸನ್​ ಹೇಳಿದ್ದಾರೆ. ಅಷ್ಟೇ ಅಲ್ಲ, ವಿಶ್ವಸಂಸ್ಥೆಯಲ್ಲಿ ಭಾರತ ಇಸ್ರೇಲ್​ ಪರವಾಗಿ ಮತಹಾಕಿದ್ದನ್ನೂ ಕೂಡ ಪೆಗಾಸಸ್​ ಸ್ಪೈವೇರ್​ ಖರೀದಿಗೆ ಲಿಂಕ್​ ಮಾಡಿ ಬರೆಯಲಾಗಿದೆ. ಇದೆಲ್ಲವೂ ಸಂಪೂರ್ಣ ತಪ್ಪಾದ ವರದಿ ಎಂದಿದ್ದಾರೆ.

ಆ ದಿನಗಳಲ್ಲಿ ಯುಎಸ್​​ನಲ್ಲಿದ್ದ ಭಾರತದ ಶಾಶ್ವತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್​ ಕೂಡ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಭಾರತದ ಗೌರವಕ್ಕೆ ಚ್ಯುತಿ ತರುವ ಸಲುವಾಗಿಯೇ ಇಂಥದ್ದೊಂದು ಲೇಖನ ಪ್ರಕಟಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ನಾನೀಗ ಕಳಿಸಿರುವ ಲೀಗಲ್ ನೋಟಿಸ್​ಗೆ ಒಂದು ವಾರದೊಳಗೆ ನ್ಯೂಯಾರ್ಕ್​ ಟೈಮ್ಸ್ ಉತ್ತರ ನೀಡಬೇಕು. ಹಾಗೊಮ್ಮೆ ಉತ್ತರ ಕೊಡದೆ ಹೋದಲ್ಲಿ, ನಾನು ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಶ್ರೀನಿವಾಸನ್​ ಐಎಎನ್​ಎಸ್​ಗೆ ತಿಳಿಸಿದ್ದಾರೆ.

ಪೆಗಾಸಸ್​ ಸ್ಪೈವೇರ್​​  2021ರಲ್ಲಿ ಭರ್ಜರಿ ಸುದ್ದಿ ಮಾಡಿತ್ತು. ಭಾರತದಲ್ಲಿ ಇಸ್ರೇಲಿ ಮೂಲದ ಪೆಗಾಸಸ್​ ಬಳಸಿ, ರಾಜಕಾರಣಿಗಳು, ಪತ್ರಕರ್ತರು, ಮತ್ತಿತರ ಗಣ್ಯರೆಲ್ಲ ಸೇರಿ 300ಕ್ಕೂ ಹೆಚ್ಚು ಜನರ ಫೋನ್​ ಟ್ಯಾಪ್​ ಮಾಡಲಾಗಿದೆ ಎಂದು ದಿ ವೈರ್​ ಪ್ರಕಟಿಸಿತ್ತು. ಹಾಗೇ ಬಹುಮುಖ್ಯವಾಗಿ ಯಾರೆಲ್ಲರ ಫೋನ್​ ಟ್ಯಾಪ್​ ಆಗಿದೆ ಎಂಬ ಹೆಸರುಗಳನ್ನೂ ಬಹಿರಂಗಪಡಿಸಲಾಗಿತ್ತು. ಅದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್​ ಸೇರಿ ಅನೇಕರ ಹೆಸರುಗಳು ಇದ್ದವು.  ಈ ಪೆಗಾಸಸ್​ ಸ್ನೂಪಿಂಗ್​ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್​​ನಿಂದ ಸಮಿತಿ ರಚಿಸಲಾಗಿದ್ದು, ತನಿಖೆ ನಡೆಯುತ್ತಲೂ ಇದೆ. ನ್ಯೂಯಾರ್ಕ್ ಟೈಮ್ಸ್ ವರದಿ ಬೆನ್ನಲ್ಲೇ ಸುಪ್ರೀಂಕೋರ್ಟ್​​ನಲ್ಲಿ ಇನ್ನೊಂದು ಅರ್ಜಿ ಕೂಡ ಸಲ್ಲಿಕೆಯಾಗಿದೆ.

TV9 Kannada


Leave a Reply

Your email address will not be published. Required fields are marked *