ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಇಡೀ ದೇಶಾದ್ಯಂತ ಸೈಕಲ್ ಜಾಥಾ ನಡೆಸುತ್ತಿದೆ. ಇದರ ಭಾಗವಾಗಿ ಇಂದು ಮುಂಗಾರು ಅಧಿವೇಶನಕ್ಕೆ ಹಾಜರಾಗಲು ಕರ್ನಾಟಕದ ಏಕೈಕ ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್​​ ಸೈಕಲ್ ಜಾಥಾ ನಡೆಸಿದ್ದರು. ಆದ್ರೆ ಈ ವೇಳೆ ಸುರೇಶ್​ ಅವರು, ಎರಡೆರಡು ಬಾರಿ ಸೈಕಲ್​ ಬದಲಿಸಿದ ಘಟನೆ ನಡೆಯಿತು.

ಸೈಕಲ್ ಜಾಥಾ ಆರಂಭದ ಸಂದರ್ಭದಲ್ಲಿ ಡಿ.ಕೆ.ಸುರೇಶ್ ಅವರಿಗಾಗಿ ಸ್ಪೋರ್ಟ್ಸ್​​​ ಸೈಕಲ್​​ ತರಲಾಗಿತ್ತು. ಆದರೆ ಸ್ಥಳಕ್ಕೆ ಆಗಮಿಸಿದ ಸುರೇಶ್​ ಅವರು, ನನಗೆ ಸ್ಪೋರ್ಟ್ಸ್​​​ ಸೈಕಲ್ ಬೇಡ.. ಸಾಮಾನ್ಯ ಸೈಕಲ್​​ ತರುವಂತೆ ಹೇಳಿ ಹಳೆ ಮಾದರಿಯ ಸೈಕಲ್ ತರಿಸಿಕೊಂಡು ಜಾಥಾ ಶುರು ಮಾಡಿದರು. ಆದರೆ ಸೈಕಲ್ ಜಾಥಾ ಅರ್ಧ ದಾರಿಗೆ ಹೋದ ನಂತರ ಸೈಕಲ್​ಗೆ ಬ್ರೇಕ್ ಇಲ್ಲ ಎಂಬುವುದು ಅರಿವಾಗಿದೆ. ಕೂಡಲೇ ಸೈಕಲ್​​ನಿಂದ ಕೆಳಗಿಳಿದ ಸುರೇಶ್​ ಅವರು, ಮತ್ತೆ ಸೈಕಲ್ ಬದಲಿಸಿ ಸಂಸತ್ ಕರೆ ನಡೆದರು.

ಇದಕ್ಕೂ ಮುನ್ನ ನ್ಯೂಸ್​​ಫಸ್ಟ್​​​ನೊಂದಿಗೆ ಮಾತನಾಡಿದ ಸುರೇಶ್​​, ಪೆಟ್ರೋಲ್​, ಡಿಸೇಲ್​ ಬೆಲೆ ಹೆಚ್ಚಳದಿಂದ ಜನ ಸಾಮಾನ್ಯರ ಮೇಲೆ ಹೊರೆ ಹೆಚ್ಚಾಗುತ್ತಿದೆ. ಮೋದಿ ಸರ್ಕಾರದ‌ ಹೊಸ ತೆರಿಗೆ ಜನರ ಮೇಲೆ ಬರೆ ಎಳೆದಂತಾಗಿದೆ. ಜನರಿಗೆ ತೈಲ ಬೆಲೆಯಿಂದ ಭಾರೀ ತೊಂದರೆಯಾಗ್ತಿದೆ. ಸೈಕಲ್ ಯಾತ್ರೆಯನ್ನು ಸಂಸತ್ ಅಧಿವೇಶನ ಕೊನೆವರೆಗೂ ಮುಂದವರಿಸುವ ಯೋಚನೆ ಇದೆ. ಈ ಬಗ್ಗೆ ಹಿರಿಯ ನಾಯಕರ ಜೊತೆಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

The post ಪೆಟ್ರೋಲ್​​ ದುಬಾರಿ; ಸಂಸತ್​ಗೆ ಹೋಗುವಾಗ ಎರಡೆರಡು ಬಾರಿ ಸೈಕಲ್ ಬದಲಿಸಿದ ಡಿ.ಕೆ.ಸುರೇಶ್​ appeared first on News First Kannada.

Source: newsfirstlive.com

Source link