ಬೆಂಗಳೂರು: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿ ನೀಡಲಾಗುತ್ತಿದ್ದ ಉಚಿತ ಪಡಿತರ ನವೆಂಬರ್ ಬಳಿಕ ಸಿಗಲ್ಲ ಅಂತ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.
ದೇಶದ ಆರ್ಥಿಕತೆಯ ಮೇಲಿನ ಒತ್ತಡ ತಗ್ಗಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕೊರೊನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನ ಸಮಯದಲ್ಲಿ ಬಡವರಿಗೆ ಪರಿಹಾರ ನೀಡುವ ಯೋಜನೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PMGKAY) ಅಡಿಯಲ್ಲಿ ಬಡವರಿಗೆ ಇನ್ಮುಂದೆ ಉಚಿತ ಪಡಿತರವನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ದೇಶದ ಆರ್ಥಿಕತೆ ನಿಧಾನವಾಗಿ ಹಳಿಗೆ ಮರಳುತ್ತಿದೆ. PMGKAY ಅಡಿಯಲ್ಲಿ ಬಡವರಿಗೆ ಉಚಿತ ಪಡಿತರ ವಿತರಣೆಯನ್ನು ನವೆಂಬರ್ 30 ರವರೆಗೆ ಮಾತ್ರ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಗಮನಿಸಬೇಕಾದ ಸಂಗತಿಯೆಂದರೆ, ದೀಪಾವಳಿಯ ಒಂದು ದಿನದ ಮೊದಲು ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ದರವನ್ನ ಇಳಿಸಿತ್ತು. ಇದರಿಂದ ದೇಶದ ಜನತೆಗೆ ಸಾಕಷ್ಟು ನೆಮ್ಮದಿ ಸಿಕ್ಕಿದೆ. ಆದರೆ, ಬಡವರ ಉಚಿತ ಪಡಿತರವನ್ನು ಸ್ಥಗಿತಗೊಳಿಸುವ ಮೂಲಕ ಮತ್ತೊಮ್ಮೆ ದುರ್ಬಲ ವರ್ಗದವರ ಆತಂಕ ಹೆಚ್ಚಿದೆ.