ನವದೆಹಲಿ: ಭಾರತದಲ್ಲಿ ಎರಡನೇ ಅಲೆಯ ಕೊರೊನಾ ರಣಕೇಕೆ ನಡುವೆ ನಾವು ಸಾಕಷ್ಟು ಅಮಾನವೀಯ ಘಟನೆಗಳನ್ನ ನೋಡಿಬಿಟ್ವಿ. ಆಕ್ಸಿಜನ್ ಸಿಲಿಂಡರ್​ಗಳನ್ನ ಮನೆಯಲ್ಲಿ ಶೇಖರಿಸಿಟ್ಟವರು, ರೆಮ್ಡೆಸಿವಿರ್​​ ಔಷಧಿಯನ್ನ ಕಾಳಸಂತೆಯನ್ನ ಮಾರಾಟ ಮಾಡಿದ ದುರುಳರು.. ಆ್ಯಂಬುಲೆನ್ಸ್​, ಬೆಡ್​ಗಾಗಿ ಸಾವಿರಾರು ರೂಪಾಯಿ ಹಣ ಕೇಳ್ತಿದ್ದಾರೆ ಅನ್ನೋ ಆರೋಪ.. ಸೋಷಿಯಲ್ ಮೀಡಿಯಾದಲ್ಲಿ ಫೇಕ್​ ವಿಡಿಯೋಗಳನ್ನ ಹರಿಬಿಟ್ಟ ಕಿಡಿಗೇಡಿಗಳು.. ಇವೆಲ್ಲಾ ಪ್ರಕರಣಗಳನ್ನ ನೋಡಿ ಮಾನವೀಯತೆ ಇದ್ಯಾ ಈ ಜಗತ್ತಲ್ಲಿ ಎಂದು ಪ್ರಶ್ನಿಸುವಂತೆ ಮಾಡಿದ್ವು.

ಆದ್ರೆ ಇವೆಲ್ಲದರ ನಡುವೆ ಅನೇಕ ಜನ ತಮ್ಮ ಸತ್ಕಾರ್ಯಗಳ ಮೂಲಕ, ಜಗತ್ತಿಗೆ ಮಾನವೀಯತೆಯ ಸಾಕ್ಷಾತ್ಕಾರ ಮಾಡಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಹುತೇಕ ಮಂದಿ ಆಸ್ಪತ್ರೆಯ ಮಾಹಿತಿ, ಆಕ್ಸಿಜನ್ ಲಭ್ಯತೆ ಮಾಹಿತಿ, ಪ್ಲಾಸ್ಮಾ ದಾನಿಗಳ ಮಾಹಿತಿ ಶೇರ್ ಮಾಡಿ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಬೇರೆಯವರಿಗೆ ಉಪಕಾರ ಮಾಡ್ತಿದ್ದಾರೆ.

ಇತ್ತೀಚೆಗೆ ಮಧ್ಯಪ್ರದೇಶದ ರೈತರೊಬ್ಬರು ತಮ್ಮ ಮಗಳ ಮದುವೆಗೆಂದು ಕೂಡಿಟ್ಟ ಹಣವನ್ನ ಆಕ್ಸಿಜನ್​ ಖರೀದಿಗೆ ನೀಡಿ ಮಾನವೀಯತೆ ಮೆರೆದಿದ್ದರು. ಇದೀಗ ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬರು ತಮ್ಮ ಪೆನ್ಷನ್​​​ನಲ್ಲಿ ಉಳಿತಾಯ ಮಾಡಿದ್ದ 4 ಲಕ್ಷ ರೂಪಾಯಿ ಹಣವನ್ನ ಆಸ್ಪತ್ರೆಯೊಂದಕ್ಕೆ ವೆಂಟಿಲೇಟರ್​ ಖರೀದಿಸಲು ನೀಡಿದ್ದಾರೆ.

65 ವರ್ಷದ ಖಾಸಗಿ ಕಂಪನಿಯ ನಿವೃತ್ತ ಉದ್ಯೋಗಿ ಮೋಹನ್​ ಕುಲಕರ್ಣಿ ಈ ಮಹತ್ಕಾರ್ಯ ಮಾಡಿದವರು. ಕುಲಕರ್ಣಿ ಅವರು ತಮ್ಮ ಪೆನ್ಷನ್​​ನಲ್ಲಿ ಉಳಿತಾಯ ಮಾಡಿದ್ದ ಅಷ್ಟೂ ಹಣ(₹4ಲಕ್ಷ)ದ  ಜೊತೆ ಬ್ಯಾಕ್​ನಿಂದ 2.5 ಲಕ್ಷ ಹೆಚ್ಚುವರಿ ಲೋನ್ ಪಡೆದು, ಒಂದು ವೆಂಟಿಲೇಟರ್ ಖರೀದಿಸಿ ಅಂಬರ್​​ನಾಥ್​​ನ ಸಿವಿಕ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಅಂಬರ್​ನಾಥ್​ನಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಹೀಗಾಗಿ ಸ್ಥಳೀಯ ಸಿವಿಕ್ ಆಸ್ಪತ್ರೆಯ ವೈದ್ಯರೊಬ್ಬರು,  ನಮ್ಮಲ್ಲು ವೈದ್ಯಕೀಯ ಉಪಕರಣಗಳ ಕೊರತೆಯಿರೋದ್ರಿಂದ ಚಿಕಿತ್ಸೆ ನೀಡಲು ಕಷ್ಟವಾಗ್ತಿದೆ. ಹೀಗಾಗಿ ಸಹಾಯ ಮಾಡಿ ಅಂತ ಉದ್ಯಮಿಗಳಿಗೆ ಕೋರಿದ್ದರು. ಈ ಪರಿಸ್ಥಿತಿಯನ್ನ ಕಂಡ ಕುಲಕರ್ಣಿ ವೆಂಟಿಲೇಟರ್​ ಖರೀದಿಸಿ ಆಸ್ಪತ್ರೆಗೆ ನೀಡಿದ್ರು ಎಂದು ವರದಿಯಾಗಿದೆ.

ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಕುಲಕರ್ಣಿ ಅವರು, ನಾನು ಮೊದಲು ಆ್ಯಂಬುಲೆನ್ಸ್​ ನೀಡಬೇಕು ಅಂದುಕೊಂಡಿದ್ದೆ. ಆದ್ರೆ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್​ಗಳಿಗೆ, ವೆಂಟಿಲೇಟರ್​ ಕೊರತೆ ಇದೆ ಅನ್ನೋದು ಗೊತ್ತಾಯ್ತು. ಹೀಗಾಗಿ ವೆಂಟಿಲೇಟರ್​ ಖರೀದಿಸಲು ನಿರ್ಧರಿಸಿದೆ ಎಂದಿದ್ದಾರೆ. ತಮ್ಮ ಈ ಕೊಡುಗೆಯಿಂದ ಜೀವಗಳನ್ನ ಉಳಿಸಲು ಸಹಕಾರಿಯಾಗಬಹುದು ಅನ್ನೋದು ಕುಲಕರ್ಣಿ ಅವರ ಆಶಯ. ಅಂದ್ಹಾಗೆ ಕುಲಕರ್ಣಿ ಅವರ ಪತ್ನಿ ಕಳೆದ ಕೆಲ ವರ್ಷಗಳ ಹಿಂದೆ ಕ್ಯಾನ್ಸರ್​​ನಿಂದ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಇನ್ನು ಅಂಬರ್​ನಾಥ್‌ನ 850 ಸಿವಿಕೆ ನೌಕರರು ಆಸ್ಪತ್ರೆಗೆ 5 Bi-PAP ಯಂತ್ರಗಳನ್ನು ಖರೀದಿಸಲು ತಮ್ಮ ಒಂದು ದಿನದ ಸಂಬಳವನ್ನು ನೀಡಲು ನಿರ್ಧರಿಸಿದ್ದಾರೆ.

 

The post ಪೆನ್ಷನ್​ ಉಳಿತಾಯದ ₹4 ಲಕ್ಷದ ಜೊತೆ ಲೋನ್ ಪಡೆದು, ಆಸ್ಪತ್ರೆಗೆ ವೆಂಟಿಲೇಟರ್​​ ದೇಣಿಗೆ ನೀಡಿದ 65ರ ವ್ಯಕ್ತಿ appeared first on News First Kannada.

Source: newsfirstlive.com

Source link