ನಟ ವಿನಯ್‌ ರಾಜಕುಮಾರ್‌ ಈ ಬಾರಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಈಗಾಗಲೇ ವಿನಯ್‌ ರಾಜಕುಮಾರ್‌ ನಾಯಕನಾಗಿ ಅಭಿನಯಿಸಿರುವ “ಟೆನ್‌’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಮತ್ತೂಂದು ಸಿನಿಮಾ “ಗ್ರಾಮಾಯಣ’ದ ಚಿತ್ರೀಕರಣ ಮುಗಿದು ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಇನ್ನು “ಅಂದೊಂದಿತ್ತು ಕಾಲ’ದ ಸಿನಿಮಾದ ಚಿತ್ರೀಕರಣ ಕೂಡ ಭರದಿಂದ ನಡೆಯುತ್ತಿದೆ. ಇದರ ಬೆನ್ನಲ್ಲೇ ವಿನಯ್‌ ರಾಜಕುಮಾರ್‌ ಅಭಿನಯದ “ಪೆಪೆ’ ಎನ್ನುವ ಮತ್ತೂಂದು ಸಿನಿಮಾ ಅನೌನ್ಸ್‌ ಆಗಿದೆ.

ಅಂದಹಾಗೆ, ವಿನಯ್‌ ರಾಜಕುಮಾರ್‌ ಹೊಸ ಸಿನಿಮಾ “ಪೆಪೆ’ಯ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ನಾಯಕ ನಟ ವಿನಯ್‌ ರಾಜಕುಮಾರ್‌ ಫ‌ಸ್ಟ್‌ಲುಕ್‌ನಲ್ಲಿ ಲಾಂಗ್‌ ಹಿಡಿದು ರಕ್ತಸಿಕ್ತ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಕಥಾಹಂದರ ಹೊಂದಿರುವ “ಪೆಪೆ’ ಸಿನಿಮಾ ಅಂಡರ್‌ವರ್ಲ್ಡ್ ಸಂಬಂಧಿತ ಕಥೆ ಹೊಂದಿದ್ದು, ವಿನಯ್‌ ರಾಜಕುಮಾರ್‌ ಮೊದಲ ಬಾರಿಗೆ ರಗಡ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇನ್ನು “ಪೆಪೆ’ ಚಿತ್ರದಲ್ಲಿ ನಾಯಕ ವಿನಯ್‌ ರಾಜಕುಮಾರ್‌ಗೆ ನಾಯಕಿಯಾಗಿ ಕಾಜಲ್‌ ಜೋಡಿಯಾಗುತ್ತಿದ್ದಾರೆ. ಈಗಾಗಲೇ ಕೆಲ ತುಳು ಮತ್ತು ಮರಾಠಿ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಕಾಜಲ್‌, ಕನ್ನಡದಲ್ಲಿ “ಮಾಯಾ ಕನ್ನಡಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಗೆ ಪರಿಚಯವಾಗಿದ್ದರು. ಸದ್ಯ “ದಿಯಾ’ ಚಿತ್ರದ ಖ್ಯಾತಿಯ ದೀಕ್ಷಿತ್‌ ಶೆಟ್ಟಿ ಅಭಿನಯದ ಹೊಸಚಿತ್ರ “ಕೆಟಿಎಂ’ನಲ್ಲೂ ಅಭಿನಯಿಸುತ್ತಿರುವ ಕಾಜಲ್‌, ಈಗ ವಿನಯ್‌ ರಾಜಕುಮಾರ್‌ “ಪೆಪೆ’ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸದ್ಯ “ಪೆಪೆ’ ಚಿತ್ರದ ಟೈಟಲ್‌ ಮತ್ತು ಫ‌ಸ್ಟ್‌ಲುಕ್‌ ಸಿನಿಮಂದಿಯ ಗಮನ ಸೆಳೆಯುತ್ತಿದ್ದು, ಈ ಚಿತ್ರಕ್ಕೆ ಉದಯ್‌ ಶಂಕರ್‌ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಾರೆ “ಅನಂತು ವರ್ಸಸ್‌ ನುಸ್ರತ್‌’ ಸಿನಿಮಾ ಬಳಿಕ ವಿನಯ್‌ ರಾಜಕುಮಾರ್‌ ಅಭಿನಯದ ಸಾಲು ಸಾಲು ಸಿನಿಮಾಗಳು ಅನೌನ್ಸ್‌ ಆಗಿ ಸೆಟ್ಟೇರಿದ್ದರೂ, ಇಲ್ಲಿಯವರೆಗೆ ಯಾವುದೇ ಸಿನಿಮಾಗಳು ತೆರೆಗೆ ಬಂದಿಲ್ಲ. ಇದರ ನಡುವೆಯೇ ಮತ್ತೂಂದು ಹೊಸಚಿತ್ರ ಅನೌನ್ಸ್‌ ಆಗಿದ್ದು, ಯಾವ ಸಿನಿಮಾದಲ್ಲಿ ವಿನಯ್‌ ಮೊದಲು ನೋಡುಗರ ಮುಂದೆ ಬರುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ಸಿನೆಮಾ – Udayavani – ಉದಯವಾಣಿ
Read More