ಬೆಂಗಳೂರು: ಉಡುಪಿ ಪೇಜಾವರ ಶ್ರೀಗಳ ಕುರಿತು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ನೀಡಿದ್ದ ಹೇಳಿಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈ ಕೋರ್ಟ್ ತಡೆ ನೀಡಿದೆ.
ನಗರದ ಬಸವನಗುಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ರದ್ದು ಕೋರಿ ಹಂಸಲೇಖ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಸದ್ಯ ಪ್ರಕರಣದ ತನಿಖೆಗೆ ತಡೆ ನೀಡಿ ಆದೇಶ ನೀಡಿದೆ. ಹಂಸಲೇಖ ಅವರ ಪರ ವಕೀಲ ಕಾಶೀನಾಥ್, ಸಿಎಸ್ ದ್ವಾರಕಾನಾಥ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಸಂಬಂಧ ನವೆಂಬರ್ 25ರಂದು ಬಸವನಗುಡಿ ಠಾಣೆಗೆ ಆಗಮಿಸಿದ್ದ ಹಂಸಲೇಖ ಅವರು ಪೊಲೀಸ್ ವಿಚಾರಣೆಯನ್ನು ಎದುರಿಸಿದ್ದರು. ಇನ್ನು ಅಂದು ಬಸವನಗುಡಿ ಪೊಲೀಸ್ ಠಾಣೆ ಮುಂಭಾಗ ಹಂಸಲೇಖ ಅವರನ್ನು ಬೆಂಬಲಿಸಿ ನಟ ಚೇತನ್ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಗಮಿಸಿದ್ದರು. ಭಜರಂಗ ದಳ ಸಂಘಟನೆಯ ಕಾರ್ಯಕರ್ತರು ಹಂಸಲೇಖ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದರು.