ಪೇಜಾವರ ಶ್ರೀಗಳ ವಿರುದ್ದ ಹಂಸಲೇಖ ಅಕ್ಷೆಪಾರ್ಹ ಹೇಳಿಕೆ ವಿಚಾರ; ಬಸವನಗುಡಿ ಪೊಲೀಸ್ ಠಾಣೆಯಲ್ಲಿ FIR ದಾಖಲು | FIR Registered against Music Director Hamsalekha on Pejavara Sri Statement at Basavanagudi Police Statement


ಪೇಜಾವರ ಶ್ರೀಗಳ ವಿರುದ್ದ ಹಂಸಲೇಖ ಅಕ್ಷೆಪಾರ್ಹ ಹೇಳಿಕೆ ವಿಚಾರ; ಬಸವನಗುಡಿ ಪೊಲೀಸ್ ಠಾಣೆಯಲ್ಲಿ FIR ದಾಖಲು

ಹಂಸಲೇಖ

ಬೆಂಗಳೂರು: ಪೇಜಾವರ ಶ್ರೀಗಳ ವಿರುದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅಕ್ಷೆಪಾರ್ಹ ಹೇಳಿಕೆ ವಿಚಾರ ಇದೀಗ ಬಹಳ ಸದ್ದು ಮಾಡುತ್ತಿದೆ. ನಾದಬ್ರಹ್ಮ ಖ್ಯಾತಿಯ ಹಂಸಲೇಖ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರಲ್ಲಿ ಈ ಬಗ್ಗೆ ವಾದ- ಪ್ರತಿವಾದಗಳೂ ಕಾಣುತ್ತಿವೆ. ಈ ಮಧ್ಯೆ, ಇದೀಗ ಹಂಸಲೇಖ ವಿರುದ್ದ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಐಪಿಸಿ 295 ಎ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇಂದು (ನವೆಂಬರ್ 17) ಸಂಜೆ ಪೇಜಾವರ ಶ್ರೀಗಳ ಭಕ್ತರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ ಮಾಡಿ ಪ್ರತ್ಯೇಕ ದೂರು ನೀಡಿದ್ದಾರೆ. ವರ್ಗ ವರ್ಗಗಳ ನಡುವೆ ದುರುದ್ದೇಶದಿಂದ, ದ್ವೇಷಭಾವನೆ ಉಂಟು ಮಾಡಿರುತ್ತಾರೆ. ಸಮಾಜದಲ್ಲಿ ಶಾಂತಿ ಭಂಗ ಮಾಡಿದ್ದಾರೆ. ಗುರುಗಳಿಗೆ ಕೇಡನ್ನು ಬಯಸುವ ಉದ್ದೇಶದಿಂದ, ಚಾರಿತ್ರ್ಯಕ್ಕೆ ಕಪ್ಪು ಚುಕ್ಕೆ ಇಡುವ ಉದ್ದೇಶದಿಂದ ಹಂಸಲೇಖ ಹೇಳಿಕೆ ನೀಡಿದ್ದಾರೆ ಎಂದು ದೂರು ನೀಡಲಾಗಿದೆ.

ದೂರಿನ ಅನ್ವಯ FIR ದಾಖಲಿಸಿ ಬಸವನಗುಡಿ ಪೊಲೀಸರು ತನಿಖೆ ನಡೆಸಲಿದ್ದಾರೆ. ಶೀಘ್ರವೇ ಸಂಗೀತ‌ ನಿರ್ದೇಶಕ ಹಂಸಲೇಖಗೆ ಬಸವನಗುಡಿ ಪೊಲೀಸರು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಚಾರಣೆ ಹಾಜರಾಗುವಂತೆ ನೋಟಿಸ್ ಸಾಧ್ಯತೆ ಕಂಡುಬಂದಿದೆ.

ದಲಿತರ ಮನೆಯಲ್ಲಿ ಸವರ್ಣೀಯರ ವಾಸ್ತವ್ಯದ ಕುರಿತಂತೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ನೀಡಿದ ವಿವಾದಾತ್ಮಕ ಹೇಳಿಕೆಗೆ ಅನೇಕರಿಂದ ವಿರೋಧ ವ್ಯಕ್ತವಾಗುತ್ತಿದೆ. ತಮ್ಮ ಹೇಳಿಕೆ ಕುರಿತಂತೆ ಹಂಸಲೇಖ ಅವರು ಈಗಾಗಲೇ ಕ್ಷಮೆ ಕೇಳಿದ್ದರೂ ಕೂಡ ವಿವಾದ ತಣ್ಣಗಾಗಿಲ್ಲ. ಅವರ ವಿರುದ್ಧ ಹಲವೆಡೆ ದೂರು ದಾಖಲಾಗುತ್ತಿದೆ. ಅಖಿಲ ಭಾರತ ಬ್ರಾಹ್ಮಣ ಮಹಾಸಭಾ (Akhila Bharatha Brahmana Mahasabha) ವಿಪ್ರ ಯುವ ವೇದಿಕೆಯಿಂದ ಹಂಸಲೇಖ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು.

‘ಪೇಜಾವರ ಶ್ರೀಗಳ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿದ್ದು ತಪ್ಪು. ಅದಕ್ಕಾಗಿ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪೇಜಾವರ ಶ್ರೀಗಳ (Pejawar Shree) ಬೃಂದಾವನದ ಮುಂದೆ ಬಂದು ಹಂಸಲೇಖ ಬಹಿರಂಗವಾಗಿ ಕ್ಷಮೆ ಕೇಳಬೇಕು. ನಾಲ್ಕು ಗೋಡೆ ಮಧ್ಯೆ ಕ್ಷಮೆ ಕೇಳಿರುವುದನ್ನು ಒಪ್ಪುವುದಿಲ್ಲ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲಿದ್ದೇವೆ’ ಎಂದು ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಕೃಷ್ಣ ಹೇಳಿದ್ದರು.

ಇದನ್ನೂ ಓದಿ: ಹಂಸಲೇಖ ವಿರುದ್ಧ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ದೂರು; ಶ್ರೀಗಳ ಬೃಂದಾವನದ ಮುಂದೆ ಕ್ಷಮೆಗೆ ಆಗ್ರಹ

ಇದನ್ನೂ ಓದಿ: ಪ್ರಚಾರಕ್ಕಾಗಿ ಜನ ಹೀಗೆ ಮಾಡ್ತಾರೆ; ಶಿಶುಪಾಲನಿಗೆ ಕೃಷ್ಣನೇ ಶಾಸ್ತಿ ಮಾಡಿದ್ದ -ಹಂಸಲೇಖ ಟೀಕೆಗೆ ವಿಶ್ವಪ್ರಸನ್ನ ತೀರ್ಥಶ್ರೀ ಉತ್ತರ

TV9 Kannada


Leave a Reply

Your email address will not be published. Required fields are marked *