ರಾತ್ರಿ ಮಲಗುವ ಮುನ್ನ ತೊಡುತ್ತಿದ್ದ ಪೈಜಾಮಾ (ಪೈಜಾಮ) ಸೂಟ್‌ ಇದೀಗ ಸ್ಟ್ರಿಂಗ್‌-ಸಮ್ಮರ್‌ನ (ವಸಂತ-ಬೇಸಿಗೆ) ಫ್ಯಾಶನ್‌ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು! ಹೌದು, ಮಹಿಳೆಯರು ಕಾಲರ್‌ ಇರುವ, ಇಡೀ ತೋಳಿನ (ಫ‌ುಲ್‌ ಸ್ಲಿವ್‌) ಪ್ಲೇನ್‌ ಅಥವಾ ಸಾಲಿಡ್‌ ಕಲರ್ಡ್‌ (ಒಂದೇ ಬಣ್ಣದ) ಪೈಜಾಮಾ ಸೂಟ್‌ಗಳನ್ನು ಆಕರ್ಷಕ ಆಕ್ಸೆಸರೀಸ್‌ ಮತ್ತು ಟೈ-ಅಪ್‌ ಹೀಲ್ಸ್‌ ಜೊತೆ ಧರಿಸಿ ಫ್ಯಾಶನ್‌ ಲೋಕದಲ್ಲಿ ಹೊಸ ಅಲೆ ಆರಂಭಿಸಿದ್ದಾರೆ. ನೆನಪಿರಲಿ, ಚೆಕ್ಸ್‌ ಇರುವ ಅಥವಾ ಪ್ರಿಂಟೆಡ್‌ ಪೈಜಾಮಾ ತೊಡಲೇಬೇಡಿ! ಬಣ್ಣ ಆಯ್ಕೆ ಮಾಡುವಾಗಲೂ ಹೊಳೆಯುವ ಬಣ್ಣ ಆಯ್ಕೆ ಮಾಡಬೇಡಿ. ಪೇಸ್ಟಲ್‌ ಶೇಡ್ಸ್‌ , ಅಂದರೆ ತಿಳಿಬಣ್ಣದ ಬಟ್ಟೆಯನ್ನು ಕೊಂಡುಕೊಳ್ಳಿ.

ಆಕ್ಸೆಸರೀಸ್‌ ಎಂದಾಗ ಬೆಲ್ಟ್ , ಬಳೆ, ಸರ ಮತ್ತಿತರ ವಸ್ತುಗಳು ನೆನಪಾದರೂ ಈ ಸೂಟ್‌ ಜೊತೆ ಬರೀ ಕಿವಿಯೋಲೆ ತೊಟ್ಟರಾಯಿತು. ಅದರಲ್ಲೂ ಡ್ಯಾಂಗ್ಲರ್ ಅಂದರೆ ನೇತಾಡುವ ಕಿವಿಯೋಲೆ ಉತ್ತಮ ಆಯ್ಕೆ. ಡ್ಯಾಂಗ್ಲರ್ ನಲ್ಲಿ ಇಂಡಿಯನ್‌ ಡಿಸೈನ್‌ನ ಓಲೆಗಳು ಚೆಂದ. ಅಂದರೆ ಮುತ್ತು, ಹವಳ, ಇತರ ಅಮೂಲ್ಯ ರತ್ನಗಳು, ಕನ್ನಡಿ, ಮಣಿ, ಮುಂತಾದವುಗಳಿಂದ ಮಾಡಿದ ಓಲೆಗಳು.

ಇನ್ನು ಟೈ ಅಪ್‌ ಹೀಲ್ಸ್‌ ಎಂದರೆ ಕಣಕಾಲವರೆಗೆ ದಾರ, ಬಳ್ಳಿ ಅಥವಾ ಸ್ಟಾಪ್‌ನಿಂದ ಕಟ್ಟಬಹುದಾದ ಎತ್ತರದ ಹೀಲ್‌ ಇರುವ ಪಾದರಕ್ಷೆ ಪೈಜಾಮಾದ ಕಾಲುಗಳು ಕಣಕಾಲವರೆಗೆ ಮಾತ್ರ ಇರಬೇಕು. ಹಾಗಿದ್ದರೆ ಮಾತ್ರ ಟೈ-ಅಪ್‌ ಹೀಲ್ಸ್‌ ಎದ್ದು ಕಾಣುತ್ತವೆ. ಇಲ್ಲವಾದಲ್ಲಿ ಅವು ಕಾಣುವುದೇ ಇಲ್ಲ. ಹೀಗಾಗಿಬಿಟ್ಟರೆ ಪೈಜಾಮಾ ತೊಟ್ಟೂ ಪ್ರಯೋಜನವಿಲ್ಲದಂತೆ ಆಗುತ್ತದೆ.

ಈ ಬಟ್ಟೆಗಳು ಬೇಸಿಗೆಯಲ್ಲಿ ಆರಾಮದಾಯಕವಾಗಿದ್ದು, ಬೆವರಿನಿಂದ ಮೈಗೆ ಅಂಟಿಕೊಳ್ಳುವುದಿಲ್ಲ. ಹಾಗಾಗಿ ಮಹಿಳೆಯರು ಇದನ್ನು ಕೇವಲ ಕ್ಯಾಶುವಲ್‌ ಔಟಿಂಗ್‌ಗೆ ಅಲ್ಲದೆ, ಕಚೇರಿ ಹಾಗೂ ಪಾರ್ಟಿಗೂ ತೊಡಬಹುದಾಗಿದೆ. ಪೈಜಾಮಾವನ್ನು ಕೊಳ್ಳುವಾಗ ಒಂದು ಸೈಜ್‌ ದೊಡ್ಡದನ್ನೇ ಕೊಂಡರೆ ಉತ್ತಮ. ಏಕೆಂದರೆ ಪೈಜಾಮಾ ಯಾವತ್ತೂ ಸಡಿಲವಾಗಿರಬೇಕೇ ಹೊರತು, ಬಿಗಿಯಾಗಿರಬಾರದು! ಬಿಗಿಯಾಗಿದ್ದರೆ ಇದನ್ನು ಬೇಸಿಗೆಯಲ್ಲಿ ತೊಡುವ ಉದ್ದೇಶವೇ ವಿಫ‌ಲವಾಗುತ್ತದೆ!

ಈ ಲುಕ್‌ ಪಡೆಯಲು ಹರಸಾಹಸ ಏನೂ ಪಡಬೇಕಾಗಿಲ್ಲ. ಎಷ್ಟು ಸರಳವಾಗಿರುತ್ತದೋ ಅಷ್ಟು ಒಳ್ಳೆಯದು. ಮೇಕಪ್‌ ಕೂಡ ಮಿನಿಮಮ್‌ ಅಂದರೆ ಎಷ್ಟು ಕಡಿಮೆ ಹಚ್ಚಿಕೊಳ್ಳುತ್ತೀರೋ ಅಷ್ಟು ಉತ್ತಮ. ಉಟ್ಟ ಬಟ್ಟೆ ಎದ್ದು ಕಾಣಬೇಕು ಎಂದಾಗ ಯಾವತ್ತೂ ಸರಳ ಹಾಗೂ ಮಿತವಾಗಿ ಮೇಕಪ್‌ ಬಳಸಬೇಕು.

ಈ ಲುಕ್‌ ಜೊತೆ ಪೋನಿಟೇಲ್‌ ಹೇರ್‌ಸ್ಟೈಲ್‌ ಮಾಡುವುದು ಒಳ್ಳೆಯದು. ಬೇಸಿಗೆಯ ಸೆಖೆಯ ದೃಷ್ಟಿಯಿಂದಲೂ ಇದು ಉತ್ತಮ. ಮತ್ತು ನೀವು ತೊಟ್ಟಿರುವ ಡ್ಯಾಂಗ್ಲರ್ ಚೆನ್ನಾಗಿಯೂ ಕಾಣಿಸುವುದು. ಪೋನಿಟೇಲ್‌ ಕೇಶವಿನ್ಯಾಸ ಮಾಡುವಾಗ ಹೈಪೋನಿಯನ್ನು ಆಯ್ಕೆ ಮಾಡಿರಿ. ಲೋ ಪೋನಿ ಕೂಡ ಹಾಕಿಕೊಳ್ಳಬಹುದು, ಆದರೆ ಹೈಪೋನಿ ನಿಮ್ಮ ಮುಖಕ್ಕೆ ನೀಡುವಷ್ಟು ಆತ್ಮವಿಶ್ವಾಸವನ್ನು ಲೋ ಪೋನಿ ನೀಡಲಾರದು. ಈ ದಿರಿಸಿನ ಜೊತೆ ಸ್ಲಿಂಗ್‌ ಬ್ಯಾಗ್‌ ಬದಲಿಗೆ ಕ್ಲಚ್‌ ಬಳಸಿ. ಕ್ಲಚ್‌ ಪರ್ಸುಗಳನ್ನು ಬಳಸುವುದರಿಂದ ಮತ್ತದೇ ಉಪಯೋಗ, ಫೋಕಸ್‌ ನಿಮ್ಮ ಉಡುಪಿನ ಮೇಲೆ ಇರುತ್ತದೆ. ದೊಡ್ಡ ಹ್ಯಾಂಡ್‌ ಬ್ಯಾಗ್‌, ಸ್ಲಿಂಗ್‌ ಬ್ಯಾಗ್‌, ಶೋಲ್ಡರ್‌ ಬ್ಯಾಗ್‌ ಮುಂತಾದವುಗಳು ಈ ಲುಕ್‌ ಜೊತೆ ಚೆನ್ನಾಗಿ ಕಾಣಿಸುವುದಿಲ್ಲ.

– ಅದಿತಿ

ಫ್ಯಾಶನ್ – Udayavani – ಉದಯವಾಣಿ
Read More

By

Leave a Reply