ಪೊಲೀಸರು ವಸಾಹತುಶಾಹಿ ಯುಗದ ಲಾಠಿ ಬಳಸುವುದನ್ನು ಬಿಟ್ಟು ತಂತ್ರಜ್ಞಾನ ಬಳಸಿ: ಅಮಿತ್ ಶಾ | Colonial era danda based policing is over Use Tech Now Says Amit Shah


ಪೊಲೀಸರು ವಸಾಹತುಶಾಹಿ ಯುಗದ ಲಾಠಿ ಬಳಸುವುದನ್ನು ಬಿಟ್ಟು ತಂತ್ರಜ್ಞಾನ ಬಳಸಿ: ಅಮಿತ್ ಶಾ

ಅಮಿತ್ ಶಾ

ಭೋಪಾಲ್: ವಸಾಹತುಶಾಹಿ ಯುಗದ “ಲಾಠಿ ಬಳಸುವ ಆಧಾರಿತ ಪೊಲೀಸಿಂಗ್ ಅಂತ್ಯಗೊಂಡಿದೆ” ಎಂದು ಗೃಹ ಸಚಿವ ಅಮಿತ್ ಶಾ  (Amit Shah) ಅವರು ಇಂದು ಮಧ್ಯಪ್ರದೇಶದ (MadhyaPradesh) ಭೋಪಾಲ್‌ನಲ್ಲಿ ನಡೆದ ಪೊಲೀಸ್(Police)  ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. “ಬ್ರಿಟಿಷ್ ಯುಗದ  ಲಾಠಿ ಹಿಡಿವ ಪೊಲೀಸಿಂಗ್ ಮುಗಿದಿದೆ. ಇದು ಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ತಾರ್ಕಿಕ ಪೋಲೀಸಿಂಗ್ ಅನ್ನು ಹೊಂದಲು ಸಮಯವಾಗಿದೆ” ಎಂದು ಶಾ ಹೇಳಿದರು.  ಪರಿಣಾಮಕಾರಿ ಪೊಲೀಸ್ ಕಾರ್ಯಗಳಿಗೆ ಬೀಟ್ ಕಾನ್‌ಸ್ಟೆಬಲ್ ಹಂತದವರೆಗೆ ತಂತ್ರಜ್ಞಾನದ ಬಳಕೆ ಅತ್ಯಗತ್ಯ. ತಂತ್ರಜ್ಞಾನದ ಅರಿವಿರುವ ಬೀಟ್ ಕಾನ್‌ಸ್ಟೆಬಲ್ ಮಾತ್ರ ತಂತ್ರಜ್ಞಾನ ಸುಸಜ್ಜಿತ ಅಪರಾಧಿಗಳಿಗಿಂತ ಎರಡು ಹೆಜ್ಜೆ ಮುಂದೆ ಇರಲು ಸಾಧ್ಯ ಎಂದು ಅವರು ಹೇಳಿದರು. “ರಾಜ್ಯ ಪೊಲೀಸ್ ಪಡೆಗಳು  ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ(UAPA) ಬಳಸುವಲ್ಲಿ ಹಿಂಜರಿಯುವುದನ್ನು ಬಿಡಬೇಕು. ಎಲ್ಲಾ ಸೂಕ್ತ ಪ್ರಕರಣಗಳಲ್ಲಿ ಯುಎಪಿಎ ಬಳಸಬೇಕು. ರಾಷ್ಟ್ರೀಯ ತನಿಖಾ ಸಂಸ್ಥೆಯು ಎರಡು-ಮೂರು ತಿಂಗಳಲ್ಲಿ ಭಯೋತ್ಪಾದನೆ, ಬಾಂಬ್ ಸ್ಫೋಟ ಮತ್ತು ವಿಮಾನ ಅಪಹರಣ ಪ್ರಕರಣಗಳ ಡೇಟಾಬೇಸ್ ಅಭಿವೃದ್ಧಿಯನ್ನು ಪೂರ್ಣಗೊಳಿಸಲಿದೆ. ಅದರ ನಂತರ ಎಲ್ಲಾ ರಾಜ್ಯ ಭಯೋತ್ಪಾದನಾ ನಿಗ್ರಹ ದಳಗಳು ಡೇಟಾಬೇಸ್ ಅನ್ನು ವಿವರವಾಗಿ ಅಧ್ಯಯನ ಮಾಡಬೇಕು ಎಂದು ಗೃಹ ಸಚಿವರು ಹೇಳಿದರು.

“ದತ್ತಾಂಶವು (ಡೇಟಾ) ಹೊಸ ವಿಜ್ಞಾನ ಮತ್ತು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇದು ಎಲ್ಲಾ ಪೊಲೀಸ್ ಪಡೆಗಳಿಗೆ ಥಂಬ್ ರೂಲ್ ಆಗಬೇಕು” ಎಂದು ಶಾ ಹೇಳಿದರು. ಗಡಿ ಪ್ರದೇಶಗಳಲ್ಲಿ ನೆಲೆಗೊಂಡಿರುವ ಎಲ್ಲಾ ರಾಜ್ಯಗಳ ಪೊಲೀಸ್ ಪಡೆಗಳು ಮತ್ತು ದಂಗೆ ಮತ್ತು ಸಶಸ್ತ್ರ ಗುಂಪುಗಳಿರುವ ರಾಜ್ಯಗಳು ಸಾಮಾನ್ಯ ಮಾಹಿತಿ ಹಂಚಿಕೆ ಪ್ರೋಟೋಕಾಲ್ ಅನ್ನು ಹೊಂದಿರಬೇಕು. ಎಸ್‌ಪಿ ಮಟ್ಟ ಮತ್ತು ಎಟಿಎಸ್ ಮತ್ತು ಕ್ರೈಂ ಬ್ರಾಂಚ್ ಹಂತದವರೆಗಿನ ಅಧಿಕಾರಿಗಳ ನೇಮಕಾತಿಯನ್ನು ಈ ಪ್ರತಿಯೊಂದು ರಾಜ್ಯಗಳು ಏಕರೂಪದ ನೀತಿಯ ಆಧಾರದ ಮೇಲೆ ಮಾಡಬೇಕು.

“ರಾಜ್ಯಗಳು ವಿಭಿನ್ನ ಚುನಾಯಿತ ಸರ್ಕಾರಗಳನ್ನು ಹೊಂದಿರುತ್ತವೆ.  ಆದರೆ ಅವುಗಳ ಆಂತರಿಕ ಭದ್ರತಾ ಸವಾಲುಗಳು ಸಾಮಾನ್ಯವಾಗಿದ್ದರೆ, ಭಯೋತ್ಪಾದನೆ, ಮಾದಕ ದ್ರವ್ಯಗಳು, ಸೈಬರ್ ಅಪರಾಧ, ಎಡಪಂಥೀಯ ಉಗ್ರವಾದ ಮತ್ತು ಸಶಸ್ತ್ರ ದಂಗೆಕೋರ ಗುಂಪುಗಳಂತಹ ಸವಾಲುಗಳನ್ನು ಎದುರಿಸಲು ಏಕರೂಪದ ನೀತಿಗಳ ಆಧಾರದ ಮೇಲೆ ಅವರು ಸಂಘಟಿತ ರೀತಿಯಲ್ಲಿ ಕೆಲಸ ಮಾಡಬೇಕು.

“ಪ್ರತಿ ರಾಜ್ಯವು ವೈರ್‌ಲೆಸ್ ತಂತ್ರಜ್ಞಾನದ ಏಕರೂಪದ ಸೆಟ್, ಸಿಸಿಟಿವಿ ನೆಟ್‌ವರ್ಕ್ ಮತ್ತು ಡೇಟಾ ಆಕ್ಸೆಸ್ ಮತ್ತು ರಿಯಲ್ ಟೈಮ್  ಡೇಟಾ ಹಂಚಿಕೆಯನ್ನು ಹೊಂದಿರಬೇಕು. ಪ್ರತಿ ರಾಜ್ಯವು ಪರೇಡ್ ಮತ್ತು ಗಸ್ತು ತಿರುಗುವುದರ ಜೊತೆಗೆ ಡಿಜಿ (ಪ್ರಾಸಿಕ್ಯೂಷನ್) ಮತ್ತು ಖಬ್ರಿ (ಗೌಪ್ಯ ಮಾಹಿತಿದಾರರು) ವ್ಯವಸ್ಥೆ, ಶ್ವಾನದಳ ಮತ್ತು ಕುದುರೆ ಸ್ಕ್ವಾಡ್‌ಗಳನ್ನು ಹೊಂದಿರಬೇಕು ಎಂದು ಗೃಹ ಸಚಿವರು ಹೇಳಿದರು.

TV9 Kannada


Leave a Reply

Your email address will not be published.