ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಕೊಲೆ ಆರೋಪಿ, ರೌಡಿಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಪಳನಿ ಅಲಿಯಾಸ್ ಕರ್ಚೀಫ್ ಬಂಧಿತ ರೌಡಿಶೀಟರ್.
ರೌಡಿ ಪಳನಿ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೆಂಗಳೂರು ಸಿಸಿಬಿ ಪೊಲೀಸರಿಗೆ ಬೇಕಾಗಿದ್ದ. ಬೆಳ್ಳಂದೂರಲ್ಲಿ ಮುನ್ನಕುಮಾರ್ ಎಂಬಾತನ ಕೊಲೆ ಪ್ರಕರಣದಲ್ಲಿ ಬೆಳ್ಳಂದೂರು ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ದಾರಿ ಬಿಡುವ ವಿಚಾರಕ್ಕೆ ಮುನ್ನಾಕುಮಾರ್ ಜೊತೆ ಕಿರಿಕ್ ಮಾಡಿ ಹತ್ಯೆಗೈದು ಎಸ್ಕೇಪ್ ಆಗಿದ್ದ ಎನ್ನಲಾಗಿದೆ.
ಆರೋಪಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ, ಎಸಿಪಿ ಪರಮೇಶ್ವರ್ ಹಾಗೂ ಇನ್ಸ್ಪೆಕ್ಟರ್ ಹರೀಶ್ ಕುಮಾರ್ ನೇತೃತ್ವದ ತಂಡ ಬಂಧನಕ್ಕೆ ತೆರಳಿತ್ತು. ಅಶೋಕ್ ನಗರದ ಸ್ಮಶಾನದ ಬಳಿ ಆರೋಪಿಯ ಬಂಧನಕ್ಕೆ ಮುಂದಾಗಿದ್ದ ವೇಳೆ ಇನ್ಸ್ಪೆಕ್ಟರ್ ಹರೀಶ್ ಕುಮಾರ್ ಮೇಲೆ ಡ್ಯಾಗರ್ನಿಂದ ಹಲ್ಲೆಗೆ ಮುಂದಾದ.
ಆಗ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿ ಪಳನಿಯನ್ನ ಬಂಧಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮತ್ತು ಶೂಟೌಟ್ ಸಂಬಂಧ ಅಶೋಕ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸದ್ಯ ಗಾಯಾಳು ರೌಡಿಶೀಟರ್ ಪಳನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.