ಬೆಳಗಾವಿ: ಪೋಲಿಸ್ ಠಾಣೆ ಮುಂಭಾಗ ಕಾರಿನಲ್ಲಿದ್ದ 4.9 ಕೆ.ಜಿ ಬಂಗಾರ ನಾಪತ್ತೆಯಾದ ಪ್ರಕರಣ ಸಂಬಂಧ ಸಿಐಡಿ ವಿಚಾರಣೆ ತೀವ್ರಗೊಳಿಸಿದೆ.

ಪ್ರಕರಣದ ಕಿಂಗ್​ಪಿನ್ ಕಿರಣ್​​ನನ್ನ ಸಿಐಡಿ ಪೋಲಿಸರು ಗ್ರಿಲ್ ಮಾಡ್ತಿದ್ದಾರೆ. ಬೆಂಗಳೂರಿನ ಸಿಐಡಿ ಅಧಿಕಾರಿ ನರಸಿಂಹಮೂರ್ತಿ ನೇತೃತ್ವದ ತಂಡ, ಮೂರು ದಿನಗಳ ಹಿಂದೆ ಕಿರಣ್​ನನ್ನು ಬಂಧಿಸಿತ್ತು. ವಿಚಾರಣೆ ವೇಳೆ ಕಿರಣ್​ ಪ್ರಕರಣದ ಕುರಿತು ಯಾವುದೇ ಮಾಹಿತಿ ಬಾಯಿಬಿಟ್ಟಿಲ್ಲ ಎನ್ನಲಾಗಿದೆ. ಪ್ರಕರಣದಲ್ಲಿ ಪೊಲೀಸರ ಮೇಲೆ ಅನುಮಾನ ಮೂಡಿದ್ದು, ಕಿರಣ್ ವಿಚಾರಣೆಯಿಂದ ಹಲವು ಹಿರಿಯ ಪೋಲಿಸ್ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ. ಇದುವರೆಗೆ ಕಿರಣ್​ ಜೊತೆ ಸೇರಿ ಸೆಟ್ಲಮೆಂಟ್ ದಂಧೆ ನಡೆಸಿದ್ದರು ಎನ್ನಲಾದ ಪೊಲೀಸ್​ ಸಿಬ್ಬಂದಿ ಭಯಗೊಂಡಿದ್ದಾರೆ ಎಂದು ಹೇಳಲಾಗ್ತಿದೆ.

ಮನೆಯಲ್ಲೇ ಚಿನ್ನ ಇಟ್ಟಿರುವ ಸಂಶಯದ ಮೇಲೆ‌ ನಿನ್ನೆ ಹುಬ್ಬಳ್ಳಿಯ ಕೇಶ್ವಾಪುರ ಶಿವಗಂಗಾ ಲೇಔಟ್​ನಲ್ಲಿರುವ ಕಿರಣ್​ ಮನೆಗೆ ಸಿಐಡಿ ಟೀಂ ಭೇಟಿ ನೀಡಿತ್ತು. ಬಂಧಿತ ಕಿರಣ್​ನನ್ನು ಹಾಗೂ ಆತನ ತಂದೆ ವೀರನಗೌಡ ಅವರನ್ನು ಚಿನ್ನದ ಬಗ್ಗೆ ವಿಚಾರಣೆ ನಡೆಸಿ, ಸತತ ಒಂದೂವರೆ ಗಂಟೆಗಳ ಕಾಲ ಮನೆಯನ್ನ ಶೋಧಿಸಿ ಮಾಹಿತಿಯನ್ನ ಕಲೆ ಹಾಕಿದ್ದಾರೆ.

ಬಂಗಾರ ಕದ್ದಿದ್ದು ಯಾರು? ಮಾರಾಟ ಮಾಡಿದ್ದೇಲಿ ? ಎಂಬುದು ಇನ್ನೂ ನಿಗೂಢವಾಗೇ ಉಳಿದಿದೆ. 14 ದಿನಗಳ ಕಾಲ ಕಿರಣ್​ನನ್ನು ಸಿಐಡಿ ವಶಕ್ಕೆ ಪಡೆದಿರುವುದರಿಂದ ಹಂತ ಹಂತವಾಗಿ ವಿಚಾರಣೆ ನಡೆಸಲು ಸಿಐಡಿ ನಿರ್ಧಾರ ಮಾಡಿದೆ.

ಕ್ಷೀರಭಾಗ್ಯ ಅಕ್ರಮ ಸಂಗ್ರಹ, ಮಾರಾಟ ಪ್ರಕರಣದಲ್ಲೂ ಕೈವಾಡ…

ಆರೋಪಿ ಕಿರಣ ಪೋಲಿಸ್ ಮಾಹಿತಿದಾರನಾಗಿಯೂ ಕೆಲಸ ಮಾಡುತ್ತಾ, ಸ್ಮಗ್ಲಿಂಗ್ ದಂಧೆಯ ಕುರಿತು ಮಾಹಿತಿ ನೀಡಿ ತಾನೇ ಸೆಟ್ಲಮೆಂಟ್ ಮಾಡುತ್ತಿದ್ದ ಎನ್ನಲಾಗಿದೆ. ಇದರಂತೆ ಯಮಕನಮರಡಿಯಲ್ಲಿ 4.9 ಕೆಜಿ ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲೂ ಬಂಗಾರ ಸಾಗಿಸುತ್ತಿದ್ದ ಕಾರು ಬಿಡಿಸಿಕೊಡುವ ಕುರಿತು ಡೀಲ್​ ಮಾಡಿ ಮಂಗಳೂರು ಮೂಲದ ಬಂಗಾರ ಉದ್ಯಮಿಯಿಂದ 20 ಲಕ್ಷ ರೂಪಾಯಿ ಪಡೆದುಕೊಂಡಿದ್ದನಂತೆ. ಆದರೆ ಪೋಲಿಸ್ ಅಧಿಕಾರಿಗಳ ಜೊತೆ ಮಾತುಕತೆಯ ಬಳಿಕ ಕಾರು ಬಿಡಿಸಲಾಗದೇ ಕಾರಿನಲ್ಲಿದ್ದ ಬಂಗಾರ ತೆಗೆದು ಮಾರಾಟ ಮಾಡಿದ್ದ ಎಂಬ ಆರೋಪ ಸದ್ಯ ಕೇಳಿ ಬಂದಿದೆ. ಪೋಲಿಸ್ ಹಿರಿಯ ಅಧಿಕಾರಿಗಳ ಸ್ನೇಹ ಬೆಳಸಿ, ಅಕ್ರಮ ಮಾಹಿತಿ ನೀಡುತ್ತಿದ್ದ ಕಿರಣ ಹೈವೇ ದಲ್ಲಾಳಿ, ಸೆಟ್ಲಮೆಂಟ್‌ ಗಿರಾಕಿ, ಪೋಲಿಸ್ ಮಾಹಿತಿದಾರನೆಂದೇ ಕುಖ್ಯಾತಿ ಪಡೆದಿದ್ದ ಎನ್ನಲಾಗಿದೆ.

4.9ಕೆಜಿ ಚಿನ್ನ ನಾಪತ್ತೆ ಪ್ರಕರಣದಲ್ಲಿ ಸಿಲುಕಿಕೊಂಡು ಸಿಐಡಿ ವಶದಲ್ಲಿರುವ ಕಿರಣ ವೀರನಗೌಡರ್, ಬೆಳಗಾವಿ ಅಷ್ಟೇ ಅಲ್ಲ, ಬಾಗಲಕೋಟೆ ಜಿಲ್ಲೆಯಲ್ಲೂ ಸೆಟ್ಲಮೆಂಟ್ ಮಾಡಿಸಿದ ವಿಚಾರ ವಿಚಾರಣೆಗೆಯ ಸಂದರ್ಭದಲ್ಲಿ ತಡವಾಗಿ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭಿಸಿದೆ. ಆರೋಪಿ- ಪೋಲಿಸ್ ಅಧಿಕಾರಿಗಳ ನಡುವೆ ಸೆಟಲ್ ಮೆಂಟ್ ಮಾಡಿ ಲಾಭ ಪಡೆಯುತ್ತಿದ್ದ ಕಿರಣ, 2020ರ ಅಕ್ಟೋವರ್​ 20 ರಂದು ಜಮಖಂಡಿಯಲ್ಲಿ ಬೆಳಕಿಗೆ ಬಂದಿದ್ದ ಕ್ಷೀರಭಾಗ್ಯ ಹಾಲಿನ ಪಾಕೆಟ್​ ಅಕ್ರಮ ಸಂಗ್ರಹ, ಮಾರಾಟ ದಂಧೆಯಲ್ಲೂ ಸೆಟ್ಲಮೆಂಟ್ ಮೂಲಕ ಈ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸಿದ್ದ ಎನ್ನಲಾಗಿದೆ. ಹಾಲಿನ ಪೌಡರ್ ನುಂಗಣ್ಣರ ಪರ ನಿಂತು ಪೋಲಿಸ್ ಅಧಿಕಾರಿಗಳ ಜೊತೆಗೆ ಸೆಟ್ಲಮೆಂಟ್ ಮಾಡಿದ್ದ ಎಂಬ ಆರೋಪ ಸದ್ಯ ಕೇಳಿ ಬಂದಿದೆ. ಸದ್ಯ ಈ ಪ್ರಕರಣವನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ನಿನ್ನೆಯಷ್ಟೇ ಪ್ರಕರಣದಲ್ಲಿ ಬಾಗಲಕೋಟೆ ಪುರಸಭೆ ಅಧ್ಯಕ್ಷೆಯ ಪತಿಯನ್ನು ಬಂಧಿಸಿದ್ದರು.

ಇದನ್ನೂ ಓದಿ: ಒಂದು ಕೇಸ್​ನಲ್ಲಿ ವಿಚಾರಣೆ ನಡೆಸುತ್ತಿದ್ದಾಗಲೇ ಸಿಕ್ತು ಮತ್ತೊಂದು ಕೇಸ್​ಗೆ ಕ್ಲ್ಯೂ

ಇದನ್ನೂ ಓದಿ: ಕ್ಷೀರಭಾಗ್ಯ ಹಾಲಿನಪುಡಿ ಪ್ಯಾಕೆಟ್ ಆಕ್ರಮ ಮಾರಾಟ ಆರೋಪ- ಪುರಸಭೆ ಅಧ್ಯಕ್ಷೆ ಪತಿ ಅರೆಸ್ಟ್​

The post ಪೊಲೀಸ್​ ಠಾಣೆ ಬಳಿ 4.9 ಕೆ.ಜಿ ಚಿನ್ನ ಕಳವು ಕೇಸ್: ಸಿಐಡಿಯಿಂದ ತೀವ್ರಗೊಂಡ ವಿಚಾರಣೆ appeared first on News First Kannada.

Source: newsfirstlive.com

Source link