ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹಾಗೂ ಅಡಳಿತ ಕುಲಸಚಿವ ಪ್ರೊ.ಪಾಟೀಲ್ ನಡುವೆ ಶೀತಲ ಸಮರ ಆರಂಭವಾಗಿದೆ. ಇದರ ಪರಿಣಾಮ ಇಬ್ಬರೂ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ಇಂದು ದೂರು-ಪ್ರತಿದೂರು ನೀಡಿದ್ದಾರೆ.

ಈ ಮೂಲಕ ಕುವೆಂಪು ವಿಶ್ವವಿದ್ಯಾಲಯದ ಉನ್ನತ ಹುದ್ದೆಯಲ್ಲಿರುವವರ ನಡುವಿನ ಆಂತರಿಕ ಕಚ್ಚಾಟ ಹಾಗೂ ವಿಶ್ವವಿದ್ಯಾಲಯದ ಘನತೆ ಬೀದಿ ಬಂದಂತಾಗಿದೆ.

ಏನಿದು ಕಿತ್ತಾಟ ?
ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾಗಿದ್ದ ಪ್ರೊ.ಪಾಟೀಲ್ ಅವರ ಜಾಗಕ್ಕೆ ಕೆಎಎಸ್ ಅಧಿಕಾರಿ ಶ್ರೀಧರ್ ಎಂಬುವವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಮೇ 10 ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀಧರ್ ಅವರು ಮೇ 11ರಂದು ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಇದರ ಬೆನ್ನ ಹಿಂದೆಯೇ ಶ್ರೀಧರ್ ಅವರ ನೇಮಕವನ್ನು ರದ್ದುಗೊಳಿಸಿ ಅವರನ್ನು ಕೌಶಲ್ಯಾಭಿವೃದ್ಧಿ ನಿಗಮದ ಶಿವಮೊಗ್ಗ ಕಚೇರಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ಈ ನಡುವೆ ಕುಲಪತಿ ಪ್ರೊ. ಬಿ‌.ಪಿ.ವೀರಭದ್ರಪ್ಪ ಅವರು ಪ್ರೊ. ಪಾಟೀಲ್ ಅವರನ್ನು ಆಡಳಿತ ವಿಭಾಗದ ಕುಲಸಚಿವ ಹುದ್ದೆಯಿಂದ ಬಿಡುಗಡೆಗೊಳಿಸಿ ಅವರನ್ನು ಮಾತೃ ವಿಭಾಗವಾದ ಶಿಕ್ಷಣ ವಿಭಾಗಕ್ಕೆ ಮರಳಿ ಕಳಿಸಿಕೊಟ್ಟಿದ್ದಾರೆ. ಅಲ್ಲದೆ ಹುದ್ದೆ ವಿಷಯದಲ್ಲಿ ಅಹಿತಕರ ಬೆಳವಣಿಗೆ ನಡೆಯಬಹುದು ಎಂಬ ಅಂದಾಜಿನ ಹಿನ್ನೆಲೆಯಲ್ಲಿ ಆಡಳಿತ ವಿಭಾಗದ ಕುಲಸಚಿವರ ಕಚೇರಿಗೆ ಬೀಗ ಹಾಕಿಸಿದ್ದಾರೆ. ನಿನ್ನೆ ಬೆಳಗ್ಗೆ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ಪ್ರೊ.ಪಾಟೀಲ್ ಅವರು ತಮ್ಮ ಕಚೇರಿಗೆ ಹಾಕಿದ್ದ ಬೀಗ ಒಡೆದು ಒಳಗೆ ಪ್ರವೇಶಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅವರು ಪ್ರೊ.ಪಾಟೀಲ್ ಅವರ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಾಟೀಲ್ ಅವರನ್ನು ಕುಲಸಚಿವ ಹುದ್ದೆಯಿಂದ ಬಿಡುಗಡೆಗೊಳಿಸಿದ್ದರೂ ಅನಧಿಕೃತವಾಗಿ ಕಚೇರಿಯ ಬೀಗ ಒಡೆದು ಒಳಗೆ ಪ್ರವೇಶಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಈ ವಿಷಯದಕುರಿತು ಎಸ್​ಪಿ ಸೇರಿದಂತೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಪ್ರೊ.ಪಾಟೀಲ್ ಸಹ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಶ್ರೀಧರ್ ಕುಲಸಚಿವರಾಗಿ ನೇಮಕಗೊಂಡಿದ್ದ ಆದೇಶ ಮರುದಿನವೇ ರದ್ದಾಗಿದೆ. ಈ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿಗೂ ಮಾಹಿತಿ ಇದೆ. ಆದರೂ ಕುಲಪತಿಯವರು ಉದ್ದೇಶ ಪೂರ್ವಕವಾಗಿ ಶ್ರೀಧರ್ ಅವರಿಗೆ ಹುದ್ದೆ ವಹಿಸಿಕೊಳ್ಳಲು ಅವಕಾಶ ನೀಡಿದ್ದಾರೆ. ಅಲ್ಲದೆ ನನ್ನ ಅನುಪಸ್ಥಿತಿಯಲ್ಲಿ ನನ್ನ ಕಚೇರಿಯ ಬೀಗ ಹಾಕಿದ್ದಾರೆ. ಇದಕ್ಕೆ ವಿವಿಯ ಸಿಬ್ಬಂದಿಯಾದ ನೀಲಗುಂದ್, ಕಣ್ಣನ್, ಯೋಗೇಂದ್ರ ಮತ್ತಿತರರು ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನ್ಯೂಸ್​​ಫಸ್ಟ್ ಜೊತೆ ಮಾತನಾಡಿದ ಕುಲಪತಿ ಪ್ರೊ.ಬಿ.ಪಿ ವೀರಭದ್ರಪ್ಪ ಶ್ರೀಧರ್ ಅವರನ್ನು ವಿವಿಯ ಆಡಳಿತ ವಿಭಾಗದ ಕುಲಸಚಿವರನ್ನಾಗಿ ನೇಮಿಸಿ ಸರ್ಕಾರ ಮಾಡಿದ ಆದೇಶದಂತೆ ಅವರು ಮೇ 11 ರಂದು ಬೆಳಗ್ಗೆ ಅಧಿಕಾರ ವಹಿಸಿಕೊಂಡಿದ್ದಾರೆ. ನಂತರ ಬಂದ ಸರ್ಕಾರದ ಮತ್ತೊಂದು ಆದೇಶದಲ್ಲಿ ಶ್ರೀಧರ್ ಅವರನ್ನು ಕುಲಸಚಿವರಾಗಿ ನೇಮಕ ಮಾಡಿದ್ದನ್ನು ರದ್ದು ಮಾಡಿದ್ದು ಗೊತ್ತಾಯಿತು. ಈ ನಡುವೆ ಪಾಟೀಲ್​​ರನ್ನು ಅವರ ಮೊದಲಿನ ಹುದ್ದೆಯಿಂದ ಬಿಡುಗಡೆಗೊಳಿಸಿ ಅವರ ಮಾತೃ ವಿಭಾಗಕ್ಕೆ ಕಳಿಸಿದ್ದೇನೆ. ಸರ್ಕಾರದ ಸೂಚನೆ ಪಾಲಿಸಿದ್ದೇನೆ. ಅವರೀಗ ಕುಲ ಸಚಿವರೇ ಅಲ್ಲ ಎಂದರು.

ಈ ವಿಷಯದಲ್ಲಿ ಘರ್ಷಣೆ ಆಗಬಹುದು ಎಂಬ ಅಂದಾಜಿಸಿ ಕುಲ ಸಚಿವರ ಕೊಠಡಿಗೆ ಬೀಗ ಹಾಕಿಸಿದ್ದೆ. ಆದರೆ ಪ್ರೊ. ಪಾಟೀಲ್ ಅವರು ನನ್ನ ಗಮನಕ್ಕೆ ಬಾರದೆ ಆ ಬೀಗವನ್ನು ಒಡೆದು ಅನಧಿಕೃತವಾಗಿ ಕಚೇರಿ ಪ್ರವೇಶಿದ್ದಾರೆ. ಪಾಟೀಲ್ ಅವರನ್ನು ಮೊದಲಿನ ಸ್ಥಾನಕ್ಕೆ ನೇಮಕ ಮಾಡಿರುವ ಆದೇಶ ನನಗೆ ಗೊತ್ತಿಲ್ಲ. ಹಾಗಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಹೇಳಿದ್ರು.

ಇದಕ್ಕೆ ಪ್ರತಿಯಾಗಿ ಪ್ರೊ.ಪಾಟೀಲ್ ಸಹ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ಅವರು, ಶ್ರೀಧರ್ ಅವರ ನೇಮಕದ ಮರುದಿನವೇ ಮೊದಲಿನ ಆದೇಶ ರದ್ದಾಗಿದೆ. ಆದರೂ ಮೇ 12 ರಂದು ರಾತ್ರಿ 8 ಗಂಟೆಗೆ ನನ್ನ ಕಚೇರಿಯ ಬೀಗ ಒಡೆಸಿ ಶ್ರೀಧರ್ ಅವರು ಅಧಿಕಾರ ಸ್ವೀಕರಿಸಲು ನೆರವಾಗಿದ್ದಾರೆ. ಅಲ್ಲದೆ ನನ್ನನ್ನು ಕುಲಸಚಿವ ಸ್ಥಾನಕ್ಕೆ ನೇಮಕ ಮಾಡಿದ್ದು ಸರ್ಕಾರವೇ ಹೊರತು ಕುಲಪತಿಯಲ್ಲ. ಹಾಗಾಗಿ ನನ್ನನ್ನು ಮಾತೃ ಇಲಾಖೆಗೆ ಕಳಿಸುವ ಅಧಿಕಾರ ಸರ್ಕಾರಕ್ಕೆ ಇದೆ ಹೊರತು ಕುಲಪತಿಗೆ ಇಲ್ಲ ಎಂದು ಹೇಳಿದ್ದಾರೆ.

ಶ್ರೀಧರ್

ಹೊರಗುತ್ತಿಗೆ ಹುದ್ದೆಯ ನೇಮಕದಲ್ಲಿ ಸರ್ಕಾರದ ನಿಯಮ ಪಾಲನೆಗೆ ನಾನು ಮುಂದಾಗಿದ್ದು ಕುಲಪತಿಗೆ ಸಹಿಸಲಾಗಲಿಲ್ಲ. ಹಾಗಾಗಿ ಅವರು ನನ್ನ ವಿರುದ್ಧ ಹಗೆತನ ಸಾಧಿಸಿ ಇಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಕಚೇರಿಯನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಕಾರಣಕ್ಕೆ ಕೊಠಡಿಗೆ ಬೀಗ ಹಾಕಿ ಸೀಲ್ ಮಾಡಿಸಿದ್ದೇನೆ‌. ಶ್ರೀಧರ್ ಅವರ ಮೊದಲಿನ ಆದೇಶ ರದ್ದಾಗಿರುವುದರಿಂದ ನಾನೇ ಕುಲಸಚಿವ ಸ್ಥಾನದಲ್ಲಿ ಮುಂದುವರಿದಿದ್ದೇನೆ ಎಂದು ಹೇಳುತ್ತಾರೆ.

ಒಟ್ಟಿನಲ್ಲಿ ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ, ಜಾತಿಯ ಸಂಕೋಲೆಯಿಂದ ಹೊರಬನ್ನಿ ಎಂದು ಕರೆ ನೀಡಿದ ರಾಷ್ಟ್ರಕವಿ ಕುವೆಂಪು ಹೆಸರು ಹೊತ್ತ ವಿಶ್ವವಿದ್ಯಾಲಯ ಈಗ ಶೈಕ್ಷಣಿಕ ಚಟುವಟಿಕೆ ಹಾಗೂ ಸಂಶೋಧನೆಗಿಂತ ಹೆಚ್ಚಾಗಿ ಜಾತಿ, ಒಳ ಜಾತಿ, ಸ್ವಜನ ಪಕ್ಷಪಾತ, ಗುಂಪುಗಾರಿಕೆ ಹಾಗೂ ಭ್ರಷ್ಟಾಚಾರದ ಕಾರಣಕ್ಕೆ ಸುದ್ದಿಯಾಗುತ್ತಿರುವುದು ಬೇಸರದ ಸಂಗತಿಯೇ ಸರಿ.

ವಿಶೇಷ ವರದಿ: ವಿ.ಸಿ.ಪ್ರಸನ್ನ, ನ್ಯೂಸ್ ಫಸ್ಟ್, ಶಿವಮೊಗ್ಗ.

The post ಪೊಲೀಸ್​ ಠಾಣೆ ಮೆಟ್ಟಿಲೇರಿದ ಕುವೆಂಪು ವಿವಿ ಕುಲಪತಿ- ಕುಲಸಚಿವರ ಕಿತ್ತಾಟ appeared first on News First Kannada.

Source: newsfirstlive.com

Source link