ರಾಯಚೂರು: ‘ಹೊಟ್ಟೆಪಾಡಿಗೆ ದಲಿತರು ನಾಯಕರು ಬಿಜೆಪಿಯಲ್ಲಿ ಇದ್ದಾರೆ’ ಎಂದು ವಿಪಕ್ಷ ಸಿದ್ದರಾಮಯ್ಯ ಹೇಳಿಕೆ ವಿರೋಧಿಸಿ ನಿನ್ನೆ ನಡೆಸಿದ್ದ ಪ್ರತಿಭಟನೆ ವೇಳೆ ಪೊಲೀಸ್ ಪೇದೆಗೆ ಕಪಾಳ ಮೋಕ್ಷ ಮಾಡಿದ ಆರೋಪದ ಅಡಿ ಬಿಜೆಪಿ ಮಾಜಿ ಶಾಸಕನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ರಾಯಚೂರು ಮಾಜಿ ಶಾಸಕ ಪಾಪರೆಡ್ಡಿ ಮೇಲೆ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದ್ದು, ನಿನ್ನೆ ಸಿದ್ದರಾಮಯ್ಯ ವಿರುದ್ಧ ಮಾಜಿ ಶಾಸಕರ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಂತದಲ್ಲಿ ಪ್ರತಿಭಟನೆಯನ್ನು ತಡೆದ ಪೊಲೀಸರು ಹೊತ್ತಿ ಉರಿಯುತ್ತಿದ್ದ ಪ್ರತಿಕೃತಿಯನ್ನು ದೂರಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದರು. ಇದರಿಂದ ಅಸಮಾಧಾನಗೊಂಡ ಮಾಜಿ ಶಾಸನ ಪಾಪರೆಡ್ಡಿ, ನಗರದ ಪಶ್ಚಿಮ ಠಾಣೆ ಪಿಸಿ ರಾಘವೇಂದ್ರ ಜೊತೆ ವಾಗ್ವಾದಕ್ಕೆ ಇಳಿದು, ಕಪಾಳ ಮೋಕ್ಷ ಮಾಡಿದ್ದರು. ಈ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿತ್ತು.
ಘಟನೆ ಕುರಿತಂತೆ ಸದ್ಯ ಮಾಜಿ ಶಾಸಕ ಪಾಪರೆಡ್ಡಿ ವಿರುದ್ಧ ಐಪಿಸಿ ಸೆಕ್ಷನ್ 143, 147, 341, 323, 504, 283, 353 ಸಹಿತ 149ರ ಅಡಿ ಪ್ರಕರಣ ದಾಖಲು ಮಾಡಿದ್ದಾರೆ. ಘಟನೆ ಸಂಬಂಧ ಹಲ್ಲೆಗೊಳಗಾಗಿದ್ದ ಪೇದೆ ರಾಘವೇಂದ್ರ ಅವರು ಪಶ್ಚಿಮ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.