ಪೊಲೀಸ್ ಠಾಣೆ ಮೆಟ್ಟಿಲೇರಿದ ದುನಿಯಾ ಸೂರಿ..! | Director Duniya Suri File Complaint To Cyber Police


Duniya Suri: ಅಭಿಷೇಕ್ ಅಂಬರೀಷ್ ನಟನೆಯ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ಸೂರಿ, ಶೀಘ್ರದಲ್ಲೇ ಶಿವಣ್ಣ ಜೊತೆ ಮತ್ತೊಂದು ಸಿನಿಮಾ ಕೂಡ ಮಾಡಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ.

ಸ್ಯಾಂಡಲ್​ವುಡ್​ನ ಮಾಸ್ ನಿರ್ದೇಶಕ ದುನಿಯಾ ಸೂರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅದು ಕೂಡ ಕಿಡಿಗೇಡಿಗಳ ಕೃತ್ಯದ ವಿರುದ್ದ…ಹೌದು, ಸೂರಿ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಲವು ಫೇಕ್ ಅಕೌಂಟ್​ಗಳು ಕಾಣಿಸಿವೆ. ಇದನ್ನು ಗಮನಿಸಿರುವ ಸುಕ್ಕಾ ಸೂರಿ ಫುಲ್ ಗರಂ ಆಗಿದ್ದಾರೆ. ಅಲ್ಲದೆ ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಗೆ ದೂರನ್ನು ಕೂಡ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸೂರಿ, ನಾನು ಇನ್​ಸ್ಟಾಗ್ರಾಮ್ ಬಿಟ್ಟು ಬೇರೆ ಯಾವುದೇ ಸೋಷಿಯಲ್ ಮೀಡಿಯಾ ಖಾತೆ ಹೊಂದಿಲ್ಲ. ಇದಾಗ್ಯೂ ಕೆಲವರು ನನ್ನ ಹೆಸರಿನಲ್ಲಿ ಟ್ವಿಟರ್ ಹಾಗೂ ಫೇಸ್​ಬುಕ್​ನಲ್ಲಿ ಕೆಲವರು ನಕಲಿ ಖಾತೆಗಳನ್ನು ತೆರೆದಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಎಲ್ಲರಿಗೂ ನಮಸ್ಕಾರ, ನಾನು ಕನ್ನಡ ಚಲನಚಿತ್ರ ನಿರ್ದೇಶಕ ಸೂರಿ (ಸುರೇಶ್ ರಾಮಸ್ವಾಮಿ) ಇನ್ ಸ್ಟಾಗ್ರಾಮ್ ಬಿಟ್ಟರೆ, ಬೇರೆ ಯಾವ ರೀತಿಯ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲೂ ನಾನು ಇಲ್ಲ. ಟ್ವಿಟ್ಟರ್‌ನಲ್ಲಿ ದುನಿಯಾ ಸೂರಿ ಎಂಬ ಅಕೌಂಟ್ ನನ್ನದಲ್ಲ. ಈ ನಡುವೆ ಟ್ವಿಟ್ಟರ್‌ ಅಕೌಂಟ್‌ನಲ್ಲಿ ಅಪ್​ಡೇಟ್ ಆಗುತ್ತಿರುವ ಯಾವ ಅನಿಸಿಕೆಯೂ, ಅಭಿಪ್ರಾಯ ಮತ್ತು ಸಮಾಜದ ಆಗುಹೋಗುಗಳು ನನ್ನದಲ್ಲ. ಕಾನೂನು ಪ್ರಕಾರ ನನ್ನ ಫೋಟೋ ಹಾಗೂ ನನ್ನ ಹೆಸರನ್ನು ನನ್ನ ಅನುಮತಿ ಇಲ್ಲದೇ ಬಳಸುವುದು ಅಪರಾಧ. ದಯವಿಟ್ಟು ಇದನ್ನು ನಿಲ್ಲಿಸಿ’ ಎಂದು ದುನಿಯಾ ಸೂರಿ ತಿಳಿಸಿದ್ದಾರೆ.

ಹೀಗಾಗಿ ತಮ್ಮ ಹೆಸರಿನಲ್ಲಿರುವ ನಕಲಿ ಖಾತೆಗಳ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿರುವುದಾಗಿ ದುನಿಯಾ ಸೂರಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಬ್ಯುಸಿ ಕೆಲಸಗಳ ನಡುವೆ ಇಂತಹ ನಕಲಿ ಖಾತೆಗಳಿಂದ ಕಿರಿಕಿರಿ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ಅಭಿಷೇಕ್ ಅಂಬರೀಷ್ ನಟನೆಯ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ಸೂರಿ, ಶೀಘ್ರದಲ್ಲೇ ಶಿವಣ್ಣ ಜೊತೆ ಮತ್ತೊಂದು ಸಿನಿಮಾ ಕೂಡ ಮಾಡಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ.

TV9 Kannada


Leave a Reply

Your email address will not be published.