ಪೊಲೀಸ್ ಸಮವಸ್ತ್ರ ಧರಿಸಿ ದರೋಡೆ ಮಾಡುತ್ತಿದ್ದ ಆರು ಮಂದಿಯ ಬಂಧನ | Karnataka Crime news Police Arrests 6 on Employment fraud


ಪೊಲೀಸ್ ಸಮವಸ್ತ್ರ ಧರಿಸಿ ದರೋಡೆ ಮಾಡುತ್ತಿದ್ದ ಆರು ಮಂದಿಯ ಬಂಧನ

ಸಾಂಕೇತಿಕ ಚಿತ್ರ

ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ ದರೋಡೆ ಮಾಡುತ್ತಿದ್ದ ಆರು ಮಂದಿಯನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಕೆ ಹುಟ್ಟಿಸುತ್ತಿದ್ದ ಆರೋಪಿಗಳು, ಹಣ ತಂದಾಗ ಅವರನ್ನು ಕರೆದೊಯ್ದು ಬೆದರಿಸಿ ಹಣ, ಮೊಬೈಲ್ ಕಿತ್ತುಕೊಂಡು ಓಡಿಹೋಗುತ್ತಿದ್ದರು. ಆವಲಹಳ್ಳಿ ಮೂಲದ ಅಜಯ್ ಕುಮಾರ್, ಯಲಹಂಕ ಮೂಲದ ಜ್ಞಾನಮೂರ್ತಿ, ಮಾಲೂರು ಮೂಲದ ರವಿಚಂದ್ರ, ಮುರುಗೇಶ್, ಮುನಿರಾಜು, ಮತ್ತು ಶಿವಮೊಗ್ಗ ಮೂಲದ ಕುಮಾರಸ್ಚಾಮಿ ಬಂಧಿತ ಆರೋಪಿಗಳು. ಬಂಧಿತರಿಂದ 2 ಕಾರು, ವಾಕಿಟಾಕಿ, 6 ಮೊಬೈಲ್, ಮಿಲಿಟರಿ ಟೋಪಿ, ₹10 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಹೊಸಕೋಟೆ ಡಿವೈಎಸ್​ಪಿ ಉಮಾಶಂಕರ್, ಸರ್ಕಲ್ ಇನ್​ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಸರ್ಕಾರಿ ಕೆಲಸ‌ ಕೊಡಿಸುವ ಆಸೆಹುಟ್ಟಿಸಿ ಲಕ್ಷಾಂತರ ರೂಪಾಯಿ ಪಡೆದುಕೊಳ್ಳುತ್ತಿದ್ದರು. ಉದ್ಯೋಗದ ಸರ್ಟಿಪೀಕೆಟ್ ಕೊಡಿಸುವುದಾಗಿ ಹೇಳುತ್ತಿದ್ದರು. ರಸ್ತೆ ಮಧ್ಯೆ ಪೊಲೀಸರಂತೆ ವಾಕಿಟಾಕಿ, ಮಿಲ್ಟ್ರಿ ಕ್ಯಾಪ್ ಮತ್ತು ಲಾಠಿ ತೆಗೆದುಕೊಂಡು ಬಂದು ಬೆದರಿಸಿ, ಹಣ, ಮೊಬೈಲ್ ಕಿತ್ತುಕೊಳ್ಳುತ್ತಿದ್ದರು. ಕಳೆದ ವಾರ ಉತ್ತರ ಕರ್ನಾಟಕ ಮೂಲದ ಯುವತಿಗೆ ನೌಕರಿ ಕೊಡಿಸುವುದಾಗಿ ಕರೆಸಿ ₹ 10 ಲಕ್ಷ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.

ನಿವೇಶನದ ಆಮಿಷವೊಡ್ಡಿ ಕೋಟ್ಯಂತರ ವಂಚನೆ: ಬಂಧನ
ನಿವೇಶನದ ಆಮಿಷವೊಟ್ಟಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಡಿ ಗ್ರೂಪ್‌ ಲೇಔಟ್ ಅಧ್ಯಕ್ಷನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನಟರಾಜ್ ಎಂದು ಗುರುತಿಸಲಾಗಿದೆ. ಒಂದೇ ನಿವೇಶನವನ್ನು ಮೂರ್ನಾಲ್ಕು ಜನರಿಗೆ ನೋಂದಣಿ ಮಾಡಿಸುತ್ತಿದ್ದ ನಟರಾಜ್ ನಂತರ ಅದರ ಇತ್ಯರ್ಥಕ್ಕೆಂದು ಎಲ್ಲರಿಂದಲೂ ಹಣ ವಸೂಲು ಮಾಡುತ್ತಿದ್ದ. ಇವನ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಸೆಕ್ಯುರಿಟಿಯಿಂದ ಅಪಾರ್ಟ್​ಮೆಂಟ್ ವಾಸಿಯ ಹತ್ಯೆ
ಸೆಕ್ಯುರಿಟಿ ಗಾರ್ಡ್​ ಕೆಲಸ ಮಾಡುತ್ತಿದ್ದಾತನೇ ಅಪಾರ್ಟ್​ಮೆಂಟ್ ವಾಸಿಯನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಎಇಸಿಎಸ್ ಲೇಔಟ್​ನಲ್ಲಿ ನಡೆದಿದೆ. ಕುಡಿದು ಕೆಲಸಕ್ಕೆ ಬರುತ್ತಾನೆ ಎಂದು ಆಕ್ಷೇಪಿಸಿ, ಅಪಾರ್ಟ್​ಮೆಂಟ್ ಅಸೋಸಿಯೇಷನ್​ಗೆ ದೂರು ನೀಡಿದ್ದ ಭಾಸ್ಕರ್​ರೆಡ್ಡಿ (65) ಅವರನ್ನು ಸೆಕ್ಯುರಿಟಿ ಗಾರ್ಡ್​ ಬಸಂತ್ ಕೊಲೆ ಮಾಡಿದ್ದಾನೆ.

ಭಾಸ್ಕರ್ ರೆಡ್ಡಿ ಅವರು ಬುಧವಾರ ಮುಂಜಾನೆ ಬೈಕ್ ನಿಲ್ಲಿಸುತ್ತಿದ್ದಾಗ ಅವರ ಕುತ್ತಿಗೆಗೆ ಬಸಂತ್ ಚಾಕುವಿನಿಂದ ಇರಿದಿದ್ದ. ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ಜೀವಿತಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾಸ್ಕರ್ ರೆಡ್ಡಿ ಸಾವನ್ನಪ್ಪಿದ್ದರು. ಬೌರಿಂಗ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಿತು. ಭಾಸ್ಕರ್ ರೆಡ್ಡಿ ಅಪಾರ್ಟ್​ಮೆಂಟ್​ನ ಪಾಲುದಾರರೂ ಆಗಿದ್ದರು. ಎಚ್​ಎಎಲ್ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

ಲಾರಿ-ಬೈಕ್ ಡಿಕ್ಕಿ: ವ್ಯಕ್ತಿ ಸಾವು
ವಿಜಯಪುರ: ಜಿಲ್ಲೆಯ ಆಲಮೇಲ ಪಟ್ಟಣದ ಬಳಿ ಅಪಘಾತ ಸಂಭವಿಸಿದ್ದು ಸಿಂದಗಿ ಪಟ್ಟಣದ ಚಂದ್ರು ಅಗಸರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ.

ಇದನ್ನೂ ಓದಿ: ಚಿತ್ರದುರ್ಗ: ವಾಕಿಂಗ್ ಮುಗಿಸಿ ಮನೆಗೆ ತೆರಳಿದ್ದ ವೇಳೆ ಹೃದಯಾಘಾತದಿಂದ ಡಿವೈಎಸ್​ಪಿ ಸಾವು
ಇದನ್ನೂ ಓದಿ: ಮನೆ, ಉದ್ಯೋಗ ಕೊಟ್ಟಿದ್ದ ಸಹಾಯಕ ಪ್ರಾಧ್ಯಾಪಕನ ಪತ್ನಿಯನ್ನೇ ಕೊಲೆ ಮಾಡಿದ ಕಾರು ಚಾಲಕ !

TV9 Kannada


Leave a Reply

Your email address will not be published. Required fields are marked *