ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​; ಇಲ್ಲಿದೆ ವಿಚಿತ್ರ ಅವತಾರದ ವಿಡಿಯೋ | Urfi Javed poses wearing two pants: Netizens troll after video goes viral


ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​; ಇಲ್ಲಿದೆ ವಿಚಿತ್ರ ಅವತಾರದ ವಿಡಿಯೋ

ಉರ್ಫಿ ಜಾವೇದ್

ಫ್ಯಾಷನ್​ ಲೋಕದಲ್ಲಿ ಕಲ್ಪನೆಗೆ ಮಿತಿ ಇಲ್ಲ ಎಂಬುದು ನಿಜ. ಆದರೆ ಕೆಲವರು ಮಾಡುವ ಫ್ಯಾಷನ್​ ಕಂಡರೆ ಜನರು ಹೊಟ್ಟೆ ಹುಣ್ಣಾಗುವಂತೆ ನಗದ ಹೊರತು ಬೇರೇನೂ ಆಯ್ಕೆ ಇರುವುದಿಲ್ಲ. ನಟಿ ಉರ್ಫಿ ಜಾವೇದ್​ (Urfi Javed) ಕೂಡ ಇಂಥದ್ದೇ ವಿಚಿತ್ರ ಫ್ಯಾಷನ್​ ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ದಿನದಿನವೂ ಅವರು ಬೇರೆ ಬೇರೆ ರೀತಿಯ ಡ್ರೆಸ್​ ಧರಿಸಿ ಬರುತ್ತಾರೆ. ಪಾಪರಾಜಿಗಳ ಕ್ಯಾಮೆರಾಗೆ ಪೋಸ್​ ನೀಡಲು ಕೂಡ ಅವರು ಹಿಂಜರಿಯುವುದಿಲ್ಲ. ಹಾಗಾಗಿ ಅವರು ಹೋದಲ್ಲೆಲ್ಲ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಪ್ರತಿ ದಿನ ಉರ್ಫಿ ಜಾವೇದ್​ ಫೋಟೋಗಳು (Urfi Javed Photos) ವೈರಲ್​ ಆಗುತ್ತವೆ. ಅವರ ಕಾಸ್ಟ್ಯೂಮ್​ ಕಂಡು ಏನು ಹೇಳಬೇಕು ಅಂತ ತೋಚದ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಾರೆ. ಈಗಂತೂ ಉರ್ಫಿ ಅವರ ಫ್ಯಾಷನ್ ಬೇರೆಯದೇ ಹಾದಿ ಹಿಡಿದಿದೆ. ಬೇಕಂತಲೇ ಅವರು ಟ್ರೋಲ್ (Urfi Javed Troll)​ ಆಗುತ್ತಿದ್ದಾರೇನೂ ಎಂಬ ಅನುಮಾನ ಮೂಡುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತಿದೆ ಈ ಹೊಸ ವಿಡಿಯೋ. ಒಂದೇ ಬಣ್ಣದ ಎರಡು ಪ್ಯಾಂಟ್​ಗಳನ್ನು ಧರಿಸಿ ಅವರು ತಿರುಗಾಡಿದ್ದಾರೆ. ಅದು ಹೇಗೆ ಸಾಧ್ಯ ಅಂತೀರಾ? ಉರ್ಫಿ ಜಾವೇದ್​ ಅಂಥವರಿಗೆ ಎಲ್ಲವೂ ಸಾಧ್ಯ!

ಒಂದು ಪ್ಯಾಂಟ್​ ಧರಿಸಿರುವ ಉರ್ಫಿ ಅವರು ಇನ್ನೊಂದು ಪ್ಯಾಂಟ್​ ಅನ್ನು ಅಂಟಿಸಿಕೊಂಡು ಬಂದಿದ್ದಾರೆ. ಇದು ಯಾವ ಸೀಮೆಯ ಫ್ಯಾಷನ್​ ಅಂತ ಜನ ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ವೈರಲ್​ ಆಗಿರುವ ವಿಡಿಯೋಗೆ ನೆಟ್ಟಿಗರು ನೂರಾರು ಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ‘ಒಂದು ತಗೊಂಡ್ರೆ ಇನ್ನೊಂದು ಫ್ರೀ’ ಎಂದು ಜನರು ವ್ಯಂಗ್ಯ ಮಾಡಿದ್ದಾರೆ.

ಉರ್ಫಿ ಜಾವೇದ್​ ಅವರು ಈ ಹಿಂದೆ ‘ಬಿಗ್​ ಬಾಸ್​ ಒಟಿಟಿ’ ಶೋನಲ್ಲಿ ಸ್ಪರ್ಧಿ ಆಗಿದ್ದರು. ಆ ಬಳಿಕ ಅವರಿಗೆ ಹೆಚ್ಚು ಖ್ಯಾತಿ ಸಿಕ್ಕಿತು. ಕೆಲವರು ಸೀರಿಯಲ್​ಗಳಲ್ಲಿ ಅವರು ನಟಿಸಿದ್ದರೂ ಕೂಡ ಸುದ್ದಿ ಆಗಿದ್ದು ಮಾತ್ರ ಬಟ್ಟೆ ವಿಚಾರಕ್ಕೆ. ಕೆಲವೇ ದಿನಗಳ ಹಿಂದೆ ಅವರು ಬಾಂಬೆ ಮಿಠಾಯಿಯಿಂದ ಡ್ರೆಸ್​ ತಯಾರಿಸಿ, ಅದನ್ನು ಧರಿಸಿ ಬಂದಿದ್ದರು! ಇನ್ನು, ತಮ್ಮ ಪ್ರತಿಭೆಗೆ ತಕ್ಕ ರೀತಿಯಲ್ಲಿ ಮನ್ನಣೆ ಸಿಕ್ಕಿಲ್ಲ ಎಂಬ ಕೊರಗು ಕೂಡ ಅವರಿಗೆ ಇದೆ. ಆ ಬಗ್ಗೆ ಅವರು ಇತ್ತೀಚೆಗೆ ಹೇಳಿಕೊಂಡಿದ್ದರು. ಕಿರಿತೆರೆಯ ಸೆಲೆಬ್ರಿಟಿಗಳ ಬಗ್ಗೆ ಅವರು ಕಿಡಿ ಕಾರಿದ್ದರು.

‘ಮಿಸ್​ ಮಾಲಿನಿ’ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಉರ್ಫಿ ಜಾವೇದ್​ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದರು. ಕಿರುತೆರೆಯಲ್ಲಿ ತಮಗೆ ಆದ ಕಹಿ ಅನುಭವವನ್ನು ಅವರು ತೆರೆದಿಟ್ಟಿದ್ದರು. ಧಾರಾವಾಹಿಗಳಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬುದು ಉರ್ಫಿ ಜಾವೇದ್​ ಅವರ ಆಸೆ ಆಗಿತ್ತು. ಆದರೆ ಅಲ್ಲಿ ಅವರಿಗೆ ಸಿಕ್ಕಿದ್ದು ಕೇವಲ ಸಣ್ಣ-ಪುಟ್ಟ ಪಾತ್ರಗಳು ಮಾತ್ರ. ಕಿರುತೆರೆಯ ಹಲವು ಶೋಗಳಲ್ಲಿ ಭಾಗವಹಿಸಿದ್ದರೂ ಕೂಡ ಟಿವಿ ಇಂಡಸ್ಟ್ರೀ ಅವರು ತಮಗೆ ಮರ್ಯಾದೆ ಕೊಡಲಿಲ್ಲ ಎಂಬುದು ಉರ್ಫಿ ಜಾವೇದ್​ ತಕರಾರು. ಇಷ್ಟಬಂದ ರೀತಿಯಲ್ಲಿ ಉರ್ಫಿ ಬಟ್ಟೆ ಧರಿಸಿದ್ದಕ್ಕಾಗಿ ಕಿರಿತೆರೆಯ ಸೆಲೆಬ್ರಿಟಿಗಳೇ ಕೆಟ್ಟದಾಗಿ ಕಮೆಂಟ್​ ಮಾಡಿದ್ದಾರೆ. ಅದು ಕೂಡ ಅವರ ಬೇಸರಕ್ಕೆ ಕಾರಣ ಆಗಿದೆ. ‘ನನ್ನ ಫೋಟೋಗಳು ಅಪ್​ಲೋಡ್​ ಆದಾಗ ಅಥವಾ ವೈರಲ್​ ಆದಾಗ ಬ್ಲೂ ಟಿಕ್​ ಇರುವ ಕಿರುತೆರೆಯ ಸೆಲೆಬ್ರಿಟಿಗಳು ಕೆಟ್ಟದಾಗಿ ಕಮೆಂಟ್​ ಮಾಡುತ್ತಾರೆ. ಇವರಿಗೆಲ್ಲ ನಾನೇನು ಅನ್ಯಾಯ ಮಾಡಿದ್ದೇನೆ? ಯಾಕೆ ಈ ರೀತಿಯಾಗಿ ಕೆಟ್ಟ ಕಮೆಂಟ್​ ಮಾಡ್ತಾರೆ’ ಎಂದು ಉರ್ಫಿ ಜಾವೇದ್​ ಬೇಸರ ವ್ಯಕ್ತಪಡಿಸಿದ್ದರು.

TV9 Kannada


Leave a Reply

Your email address will not be published. Required fields are marked *