‘ಒಂದು ಕೈಯಲ್ಲಿ ಕೊಟ್ಟಿದ್ದು, ಇನ್ನೊಂದು ಕೈಗೆ ಗೊತ್ತಾಗಬಾರದು’ ಅನ್ನೋ ಮಾತು ರೂಢಿಯಲ್ಲಿದೆ. ಈ ಮಾತು ನಮ್ಮನ್ನ ಅಗಲಿದ ಕರುನಾಡಿನ ಮನೆ ಮನೆಯ ಅಪ್ಪುಗೆ ಸರಿಹೊಂದುತ್ತಿತ್ತು. ಸಮಾಜ ಸೇವೆಯಲ್ಲಿ ತಮ್ಮ ಎತ್ತಿದ ಕೈ ಆಗಿದ್ದ ಪುನೀತ್, ಸೇವೆ ಅಪಾರ. ಬಣ್ಣಿಸಲು ಅಸಾಧ್ಯ.
ತಮ್ಮ ಅಲ್ಪಾವಧಿಯಲ್ಲಿ ನಿರೀಕ್ಷೆಗೂ ಮೀರಿ ನೊಂದ ಜನರಿಗೆ ಹೆಗಲಾಗಿದ್ದ ಅಪ್ಪು, ಅಕ್ಟೋಬರ್ 29 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಪ್ಪು ಸಾವಿನ ಸುದ್ದಿ ಯಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಸಂಖ್ಯಾತ ಅಭಿಮಾನಿ ಬಳಗಕ್ಕೆ ಅಪ್ಪು ಸವಿ ನೆನಪುಗಳನ್ನ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ದೊಡ್ಮನೆ ಕುಟುಂಬ ಅಪ್ಪು ಫ್ಯಾನ್ಸ್ಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನ ಆಯೋಜಿಸಿದೆ.
ಬೆಂಗಳೂರಿನ ಅರಮನೆ ನಗರದ ತ್ರಿಪುರನಿವಾಸಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಈ ವೇಳೆ ದೊಡ್ಮನೆ ಕುಟುಂಬದ ಕಾರ್ಯಕ್ರಮದಲ್ಲಿ ಅಡುಗೆ ಮಾಡಿಕೊಡುತ್ತಿದ್ದ ಅಡುಗೆ ಭಟ್ಟರು ಅಪ್ಪು ಜೊತೆಗಿನ ಕ್ಷಣವನ್ನ ನ್ಯೂಸ್ಫಸ್ಟ್ ಜೊತೆ ಮೆಲುಕು ಹಾಕಿಕೊಂಡರು.
ಡಿ.ಎಲ್.ಎಸ್.ಕ್ಯಾಟರಿಂಗ್ ಮಾಲೀಕ ರಾಜೇಶ್ ಮಾತನಾಡಿ.. ಅಪ್ಪು ಮನೆಯಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳಿಗೂ ನಾವೇ ಅಡುಗೆ ಮಾಡೋದು. ನನ್ನ ತಂದೆಯವರ ನೇತೃತ್ವದಲ್ಲಿ ಅಪ್ಪು ಮದುವೆಗೂ ಅಡುಗೆ ಮಾಡಿದ್ವಿ. ಅಪ್ಪು ಅವರ ಪ್ರತೀ ಬರ್ಡ್ ಕಾರ್ಯಕ್ರಮದಲ್ಲೂ ನಾವೇ ಅಡುಗೆ ಮಾಡುತ್ತಿದ್ವಿ. ಅಕ್ಟೋಬರ್ ಎರಡನೇ ವಾರದಲ್ಲಿ ನಾವು ಅಪ್ಪು ಮನೆಗೆ ಹೋಗಿದ್ವಿ. ಸುಮಾರು 100 ಜನ ಗಣ್ಯರು ಬರುತ್ತಿದ್ದಾರೆ, ಅವರಿಗೆ ಅಡುಗೆ ಮಾಡಿಕೊಡಬೇಕು ಎಂದು ಅಪ್ಪು ಹೇಳಿದ್ದರು. ನೋಡಿದರೆ ಅವರು ಅಂದು ಪ್ಯಾರಾ ಒಲಿಂಪಿಕ್ಸ್ನಲ್ಲಿ ಮೆಡಲ್ ಗೆದ್ದ ಕ್ರೀಡಾ ತಾರೆಯರಿಗೆ ಊಟ ಏರ್ಪಡಿಸಿದ್ದರು. ಸಕ್ಸಸ್ ಮೀಟ್ ಎಂದು ಕಾರ್ಯಕ್ರಮ ಆಯೋಜಿಸಿದ್ದರು. ಅವರು ಮಾಡುತ್ತಿದ್ದ ಈ ರೀತಿಯ ಕೆಲಸ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ ಎಂದು ರಾಜೇಶ್ ನೆನಪಿಸಿಕೊಂಡರು.