ಪ್ರಧಾನಿ ನರೇಂದ್ರ ಮೋದಿಗೆ ಪ್ರಭಾವಿ ನಾಯಕನೆಂಬ ಮನ್ನಣೆ, ಏಂಜೆಲಾ ಮರ್ಕೆಲ್, ಜೋ ಬೈಡೆನ್​ಗಿಂತ ಹೆಚ್ಚು ಮಾನ್ಯತೆ | PM Narendra Modi tops Global Leader Approval ratings with 70 percent score


ಪ್ರಧಾನಿ ನರೇಂದ್ರ ಮೋದಿಗೆ ಪ್ರಭಾವಿ ನಾಯಕನೆಂಬ ಮನ್ನಣೆ, ಏಂಜೆಲಾ ಮರ್ಕೆಲ್, ಜೋ ಬೈಡೆನ್​ಗಿಂತ ಹೆಚ್ಚು ಮಾನ್ಯತೆ

ಕೇದಾರನಾಥದಲ್ಲಿ ನರೇಂದ್ರ ಮೋದಿ

ದೆಹಲಿ: ವಿಶ್ವದ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಅಮೆರಿಕದ ಸಂಶೋಧನಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್​ ನಡೆಸಿರುವ ಸಮೀಕ್ಷೆಯಲ್ಲಿ ಮೋದಿ ಅವರಿಗೆ ಅಗ್ರ ಶ್ರೇಯಾಂಕ ಸಿಕ್ಕಿದೆ.

ಮಾರ್ನಿಂಗ್ ಕನ್ಸಲ್ಟ್ ಶನಿವಾರ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅತಿಹೆಚ್ಚು ಜನರಿಂದ ಮಾನ್ಯತೆ ಪಡೆದ ನಾಯಕ ಎನಿಸಿಕೊಂಡಿದ್ದಾರೆ. ಭಾರತದ ಶೇ 70ರಷ್ಟು ಜನರು ಮೋದಿ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಮೆಕ್ಸಿಕೊ ಅಧ್ಯಕ್ಷ ಎಲ್.ಪೆಜ್ ಒಬ್ರಾಡರ್ (ಶೇ 66) ಮತ್ತು ಇಟಲಿಯ ಪ್ರಧಾನಿ ಮಾರಿಯೊ ಡ್ರಾಘಿ (ಶೇ 58) ಇದ್ದಾರೆ.

ಅಮೆರಿಕದ ಸಂಶೋಧನಾ ಸಂಸ್ಥೆಯ ಶ್ರೇಯಾಂಕಗಳಲ್ಲಿ ಮೋದಿ ಪ್ರಥಮ ಸ್ಥಾನ ಪಡೆದಿರುವುದು ಇದೇ ಮೊದಲಲ್ಲ. ಜನವರಿ 2021ರಲ್ಲಿಯೂ ಮಾರ್ನಿಂಗ್ ಕನ್ಸಲ್ಟ್​ ಸಂಸ್ಥೆಯು ಮೋದಿ ಅವರಿಗೆ ವಿಶ್ವದ ಅತ್ಯಂತ ಜನಪ್ರಿಯ ಸರ್ಕಾರದ ಮುಖ್ಯಸ್ಥ ಎಂಬ ಗೌರವ ನೀಡಿತ್ತು. ಸೆಪ್ಟೆಂಬರ್ 2021ರಲ್ಲಿ ಮೋದಿ ಅವರಿಗೆ ವಿಶ್ವದಲ್ಲಿ ಅತಿಹೆಚ್ಚು ಮಾನ್ಯತೆ ಪಡೆದ ವಿಶ್ವದ 13 ಮಂದಿಯ ಪೈಕಿ ಒಬ್ಬರು ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಆಗಲೂ ಮೋದಿ ಅವರಿಗೆ ಶೇ 70ರ ಮಾನ್ಯತೆ ಸಿಕ್ಕಿತ್ತು.

ಇದೀಗ ಪ್ರಕಟವಾಗಿರುವ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್​ಸನ್ ಅವರಿಗಿಂತಲೂ ಮುಂದಿದ್ದಾರೆ. ವಿಶ್ವದ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ (ಶೇ 54) ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ (ಶೇ 47) ಗಮನಾರ್ಹ ಪ್ರಮಾಣದಲ್ಲಿ ಮಾನ್ಯತೆ ಗಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶೇ 44ರ ಮಾನ್ಯತೆಯೊಂದಿಗೆ 6ನೇ ಸ್ಥಾನ ಪಡೆದಿದ್ದರೆ, ಕೆನಡಾದ ಜಸ್ಟಿನ್ ಟ್ರುಡೇ ಶೇ 43ರ ಮಾನ್ಯತೆಯೊಂದಿಗೆ 7ನೇ ಸ್ಥಾನದಲ್ಲಿದ್ದಾರೆ. ಬ್ರಿಟನ್ ಪ್ರಧಾನಿ ಬೊರಿಸ್ ಜಾನ್​ಸನ್ ಶೇ 40ರ ಮಾನ್ಯತೆಯೊಂದಿಗೆ ಮೊದಲ 10 ಶ್ರೇಯಾಂಕದಲ್ಲಿ ಸ್ಥಾನ ಪಡೆದಿದ್ದಾರೆ.

ನವೆಂಬರ್ 4, 2021ರ ಅವಧಿಯಲ್ಲಿ ಶೇ 70ರಷ್ಟು ಭಾರತೀಯರು (ಅಕ್ಷರಸ್ಥರ ಮಾದರಿ ಸಮೀಕ್ಷೆ) ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಒಪ್ಪಿಕೊಳ್ಳುವುದಾಗಿ ಹೇಳಿದ್ದರು. ಕೇವಲ ಶೇ 24ರಷ್ಟು ಜನರು ಮಾತ್ರ ಅವರ ನಾಯಕತ್ವದ ಗುಣಗಳ ಬಗ್ಗೆ ಅಪಸ್ವರ ವ್ಯಕ್ತಪಡಿಸಿದ್ದರು. ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೊ, ದಕ್ಷಿಣ ಕೊರಿಯಾ, ಸ್ಪೇನ್, ಬ್ರಿಟನ್ ಮತ್ತು ಅಮೆರಿಕಗಳಲ್ಲಿಯೂ ಸಂಸ್ಥೆಯು ಮಾನ್ಯತೆ ಸಮೀಕ್ಷೆ ನಡೆಸಿತು.

ಎಲ್ಲ 13 ದೇಶಗಳ ಬಗ್ಗೆ ಈ ಸಂಸ್ಥೆಯು ಪ್ರತಿ ಒಂದು ವಾರಕ್ಕೊಮ್ಮೆ ಮಾಹಿತಿಯನ್ನು ಪರಿಷ್ಕರಿಸುತ್ತದೆ. ವಿಶ್ವದಲ್ಲಿ ನಡೆಯುತ್ತಿರುವ ರಾಜಕೀಯ ಪಲ್ಲಟಗಳ ಬಗ್ಗೆ ಇಣುಕುನೋಟ ನೀಡುತ್ತದೆ. ಪ್ರತಿ ದೇಶದಲ್ಲಿ ವಯಸ್ಕ ನಾಗರಿಕರ ಅಭಿಪ್ರಾಯವನ್ನು ಇದು ಪ್ರತಿನಿಧಿಸುತ್ತದೆ. ದೇಶದಿಂದ ದೇಶಕ್ಕೆ ಮಾದರಿಯ ಪ್ರಮಾಣ ವ್ಯತ್ಯಾಸವಾಗುತ್ತದೆ ಎಂದು ಸಂಸ್ಥೆಯು ತಿಳಿಸಿದೆ.

ವಿಶ್ವದಲ್ಲಿ ಮೋದಿ ಮತ್ತು ಇತರ ನಾಯಕರ ಸ್ಥಾನಮಾನ ಹೀಗಿದೆ…
ನರೇಂದ್ರ ಮೋದಿ: ಶೇ 70, ಲೊಪೆಜ್ ಅಬ್ರಾಡೆರ್: ಶೇ 66, ಮಾರಿಯೊ ಡ್ರಾಘಿ: ಶೇ 58, ಏಂಜೆಲಾ ಮರ್ಕೆಲ್ ಶೇ 54, ಸ್ಕಾಟ್ ಮಾರಿಸನ್: ಶೇ 47, ಜಸ್ಟಿನ್ ಟ್ರುಡೇ ಶೇ 45, ಜೋ ಬೈಡೆನ್ಳ ಶೇ 44, ಫುಮಿಯೊ ಕಿಶಿಡ: ಶೇ 42, ಮೂನ್ ಜೇ ಇನ್: ಶೇ 31, ಬೊರಿಸ್ ಜಾನ್​ಸನ್: ಶೇ 40, ಪೆಡ್ರೊ ಸನ್​ಚೆಜ್: ಶೇ 37, ಎಮ್ಯಾನುಯೆಲ್ ಮರ್ಕೊನ್: ಶೇ 36, ಜೈರ್ ಬೊಲ್ಸೊನಾರೊ: ಶೇ 35.

ರಾಜನಾಥ್ ಸಿಂಗ್ ಅಭಿನಂದನೆ
ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರ ಹೊಮ್ಮಿರುವುದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ. ಇದು ಜನರು ಅವರ ನಾಯಕತ್ವದ ಮೇಲೆ ಇರಿಸಿರುವ ವಿಶ್ವಾಸವನ್ನು ಪ್ರತಿನಿಧಿಸುತ್ತದೆ. ಅವರ ಪರಿಶ್ರಮ ಮತ್ತು ಪ್ರಾಮಾಣಿಕತೆ ಜನರಿಗೆ ಇಷ್ಟವಾಗಿದೆ ಎಂದು ರಾಜನಾಥ್​ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Modi in Kedarnath ಕೇದಾರನಾಥದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ ಮಾಡಿದ ನರೇಂದ್ರ ಮೋದಿ
ಇದನ್ನೂ ಓದಿ: Narendra Modi: ದೇಶದ ಭದ್ರತೆಯಲ್ಲಿ ಮಹಿಳೆಯರ ಪಾತ್ರ ಹೊಸ ಇತಿಹಾಸ ಸೃಷ್ಟಿಸಲಿದೆ; ನೌಶೇರಾದಲ್ಲಿ ಪ್ರಧಾನಿ ನರೇಂದ್ರ ಮೋದಿ

TV9 Kannada


Leave a Reply

Your email address will not be published. Required fields are marked *