ಪ್ರಧಾನಿ ನರೇಂದ್ರ ಮೋದಿ ಉಡುಗೊರೆಗಳ ಇ-ಹರಾಜು ಮುಕ್ತಾಯ; 1 ಕೋಟಿಗೆ ಹರಾಜಾದ ಗಿಫ್ಟ್ ಯಾವುದು ಗೊತ್ತಾ? | PM Narendra Modi Mementos E Auction Ends Today Neeraj Chopras Javelin Gets Highest Bid Of Rs 1 crore

ಪ್ರಧಾನಿ ನರೇಂದ್ರ ಮೋದಿ ಉಡುಗೊರೆಗಳ ಇ-ಹರಾಜು ಮುಕ್ತಾಯ; 1 ಕೋಟಿಗೆ ಹರಾಜಾದ ಗಿಫ್ಟ್ ಯಾವುದು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿಗೆ ಜಾವೆಲಿನ್ ಉಡುಗೊರೆಯಾಗಿ ನೀಡಿದ್ದ ನೀರಜ್ ಚೋಪ್ರಾ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡಲಾದ ಉಡುಗೊರೆಗಳ 3ನೇ ಸುತ್ತಿನ ಇ-ಹರಾಜು ಇಂದಿಗೆ ಮುಕ್ತಾಯವಾಗಲಿದೆ. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್​ನಲ್ಲಿ ಪ್ರಧಾನಿ ಮೋದಿ ಅವರಿಗೆ ಬಂದಿರುವ ಉಡುಗೊರೆಗಳನ್ನು ಇರಿಸಲಾಗಿದ್ದು, ಇ-ಹರಾಜಿನ ಮೂಲಕ ಇವುಗಳನ್ನು ಸಾಮಾನ್ಯ ಜನರಿಗೂ ದೊರಕುವಂತೆ ಮಾಡಲಾಗಿದೆ. ಅಂದಹಾಗೆ, ಈ ಬಾರಿಯ ಪ್ರಧಾನಿ ಮೋದಿಯ ಉಡುಗೊರೆಗಳ ಪೈಕಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿರುವ ಉಡುಗೊರೆ ಭಾರತದ ಚಿನ್ನದ ಯುವಕ ನೀರಜ್ ಚೋಪ್ರಾ ಅವರ ಜಾವೆಲಿನ್. ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ತಮ್ಮ ಜಾವೆಲಿನ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಆ ಜಾವೆಲಿನ್​ ಇ-ಹರಾಜಿನಲ್ಲಿ ಬರೋಬ್ಬರಿ 1 ಕೋಟಿ ರೂ.ಗೆ ಹರಾಜಾಗಿದೆ.

ಇ-ಹರಾಜು ಪ್ರಕ್ರಿಯೆಯು ಪ್ರಧಾನಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿದ ಅಮೂಲ್ಯ ಸ್ಮರಣಿಕೆಗಳನ್ನು ಹೊಂದಲು ಸಾಮಾನ್ಯ ಜನರಿಗೆ ಅವಕಾಶ ಒದಗಿಸುವುದು ಮಾತ್ರವಲ್ಲದೆ ಪವಿತ್ರ ಗಂಗಾ ನದಿಯನ್ನು ಸಂರಕ್ಷಿಸುವ ಉದ್ದೇಶಕ್ಕಾಗಿ ಕೊಡುಗೆ ನೀಡಲು ಅವಕಾಶ ಕಲ್ಪಿಸುತ್ತದೆ. ಈ ಇ-ಹರಾಜಿನಿಂದ ಬಂದ ಹಣವನ್ನು ಗಂಗಾ ನದಿ ಸಂರಕ್ಷಣೆಗೆ ಬಳಸಲಾಗುವುದು. ಸೆಪ್ಟೆಂಬರ್ 17ರಿಂದ ಆರಂಭವಾಗಿರುವ ಮೋದಿಗೆ ಬಂದಿರುವ ಉಡುಗೊರೆಗಳ ಇ-ಹರಾಜು ಪ್ರಕ್ರಿಯೆ ಇಂದಿಗೆ ಮುಕ್ತಾವಾಗಲಿದೆ.

ಈ ಬಾರಿಯ ಇ-ಹರಾಜಿಗೆ ಸುಮಾರು 1348 ಸ್ಮರಣಿಕೆಗಳನ್ನು ಇರಿಸಲಾಗಿತ್ತು. ಟೋಕಿಯೊ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟ ಮತ್ತು ಟೋಕಿಯೊ 2020 ಒಲಿಂಪಿಕ್ ಕ್ರೀಡಾಕೂಟದ ವಿಜೇತರು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ ಉಪಕರಣಗಳು, ಸ್ಮರಣಿಕೆಗಳು ಇಲ್ಲಿ ಹರಾಜಿಗಿಡಲಾದ ವಸ್ತುಗಳ ಪಟ್ಟಿಯಲ್ಲಿ ಸೇರಿತ್ತು. ಟೋಕಿಯೊ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಸುಮಿತ್ ಆಂಟಿಲ್ ಅವರು ಬಳಸಿದ ಜಾವೆಲಿನ್ ಮತ್ತು ಟೋಕಿಯೊ 2020 ಒಲಿಂಪಿಕ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಬಳಸಿದ ಜಾವೆಲಿನ್​ಗೆ ತಲಾ ಒಂದು ಕೋಟಿ ಮೂಲ ಬೆಲೆಯನ್ನು ನಿಗದಿ ಪಡಿಸಲಾಗಿತ್ತು. ಇ- ಹರಾಜಿನಲ್ಲಿ 200 ರೂ.ನಿಂದ 1 ಕೋಟಿ ರೂ.ವರೆಗಿನ ಉಡುಗೊರೆಗಳಿದ್ದವು.

ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ಪ್ರಧಾನಿ ಮೋದಿಯವರನ್ನು ಭೇಟಿಯಾದಾಗ ತಾವು ಒಲಂಪಿಕ್ಸ್​ನಲ್ಲಿ ಬಳಸಿದ್ದ ಜಾವೆಲಿನ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಆ ಜಾವೆಲಿನ್​ಗೆ 1 ಕೋಟಿ ರೂ. ಮೂಲ ಬೆಲೆಯನ್ನು ನಿಗದಿಪಡಿಸಲಾಗಿತ್ತು. ಆ ಜಾವೆಲಿನ್ ಇ-ಹರಾಜಿನಲ್ಲಿ 1,00,50,000 ರೂ.ಗೆ ಹರಾಜಾಗಾಗಿದೆ. ಆರಂಭದ ದಿನವೇ ಈ ಜಾವೆಲಿನ್​ಗೆ 10 ಕೋಟಿ ರೂ. ಬಿಡ್ಡಿಂಗ್ ಮಾಡಲಾಗಿತ್ತು. ಆದರೆ, ಅದು ನಕಲಿ ಬಿಡ್ ಇರಬಹುದು ಎಂಬ ಅನುಮಾನ ಉಂಟಾಗಿದ್ದರಿಂದ ಆ ಬಿಡ್ಡಿಂಗ್ ರದ್ದು ಮಾಡಲಾಗಿತ್ತು. ಎರಡನೆಯದಾಗಿ ಪ್ಯಾರಾ ಒಲಂಪಿಕ್ಸ್​ನಲ್ಲಿ ಚಿನ್ನದ ಪದಕ ಪಡೆದ ಸುಮಿತ್ ಆಂಟಿಲ್ ಅವರ ಜಾವೆಲಿನ್ 1,00,20,000 ರೂ.ಗೆ ಹರಾಜಾಗುವ ಮೂಲಕ 2ನೇ ಸ್ಥಾನ ಪಡೆದಿದೆ.

ಇದನ್ನೂ ಓದಿ: Neeraj Chopra: ಬಾಳ ಸಂಗಾತಿಯ ಬಗ್ಗೆಗಿರುವ ಕನಸುಗಳನ್ನು ರಿವೀಲ್ ಮಾಡಿದ ಒಲಂಪಿಕ್ಸ್ ಹೀರೋ ನೀರಜ್ ಚೋಪ್ರಾ!

Neeraj Chopra: ಕೆಬಿಸಿಯಲ್ಲೂ ಗೆಲುವಿನ ಓಟ ಮುಂದುವರೆಸಿದ ನೀರಜ್ ಚೋಪ್ರಾ, ಪಿ.ಶ್ರೀಜೇಶ್; ಗೆದ್ದದ್ದೆಷ್ಟು ಗೊತ್ತಾ?

TV9 Kannada

Leave a comment

Your email address will not be published. Required fields are marked *