ಪ್ರಧಾನಿ ಭೇಟಿಗೆ ಸಿದ್ದರಾಮಯ್ಯ ಅನುಮತಿ ಬೇಕೆ: ಜೆಡಿಎಸ್ ನಾಯಕ ಎಚ್​ಡಿ ದೇವೇಗೌಡ ಪ್ರಶ್ನೆ | JDS Leader HD Devegowda responds to Congress Leader Siddaramaiah Statement on Modi Meeting


ಪ್ರಧಾನಿ ಭೇಟಿಗೆ ಸಿದ್ದರಾಮಯ್ಯ ಅನುಮತಿ ಬೇಕೆ: ಜೆಡಿಎಸ್ ನಾಯಕ ಎಚ್​ಡಿ ದೇವೇಗೌಡ ಪ್ರಶ್ನೆ

ಪ್ರಧಾನಿ ಮೋದಿ ಮತ್ತು ದೇವೇಗೌಡ

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಅನುಮತಿ ಬೇಕೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ.ದೇವೇಗೌಡ ಪ್ರಶ್ನಿಸಿದರು. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಶಿಡ್ಲಘಟ್ಟದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಏಳೆಂಟು ಬಾರಿ ಭೇಟಿಯಾಗಿದ್ದೇನೆ. ಈ ಹಿಂದೆ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 10 ಬಾರಿ ಭೇಟಿಯಾಗಿದ್ದೆ. ಮೋದಿ ಅವರನ್ನು ಭೇಟಿಯಾದ ತಕ್ಷಣ ಜೆಡಿಎಸ್​​ ಅವರಿಗೆ ಒಪ್ಪಿಸಿದಂತೆ ಆಗುತ್ತದೆಯೇ? ಎಂಥ ಮೂರ್ಖತನದ ಮಾತು ಎಂದು ಆಕ್ಷೇಪಿಸಿದರು.

ಜೆಡಿಎಸ್​ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಆಕ್ಷೇಪದ ಬಗ್ಗೆ ಪ್ರಸ್ತಾಪಿಸಿದ ಅವರು, ನಾವು ಬಿಜೆಪಿ ಅಥವಾ ಕಾಂಗ್ರೆಸ್​ ಪಕ್ಷದ ಪೈಕಿ ಯಾರಿಗೆ ಬೆಂಬಲ ನೀಡಬೇಕು ಎನ್ನುವ ಬಗ್ಗೆ 2023ರ ವಿಧಾನಸಭೆ ಚುನಾವಣೆ ನಂತರ ತೀರ್ಮಾನಿಸುತ್ತೇವೆ. ನನ್ನದು ಒಳಗೊಂದು ಹೊರಗೊಂದು ರಾಜಕೀಯ ಪ್ರವೃತ್ತಿಯಿಲ್ಲ. ಕಾಂಗ್ರೆಸ್​ನವರು ನನ್ನ ಮನೆ ಬಾಗಿಲಿಗೆ ಬಂದು ಬೇಡಿಕೊಂಡರು. ಅವರ ಒತ್ತಾಯದಿಂದ ಸಮ್ಮಿಶ್ರ ಸರ್ಕಾರ ಮಾಡಿದ್ದೆವು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತೆಗೆದವರು ಯಾರು? ಕಾಂಗ್ರೆಸ್​ನವರು ಉತ್ತರ ಕೊಡುತ್ತಾರಾ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಅನ್ನುವವರ ಹಣೆಬರಹವೇನು? ಕಾಲ ಬಂದಾಗ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ ಎಂದು ಸವಾಲು ಹಾಕಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರ. ದೇಶದ ರಾಜಕಾರಣ ಈಗ ಹದಗೆಟ್ಟು ಹೋಗಿದೆ. ಈವರೆಗೆ ಯಾವ ವ್ಯಕ್ತಿಯೂ ನನ್ನ ರಾಜಕೀಯವನ್ನು ಪ್ರಶ್ನಿಸಿಲ್ಲ. ಯಾವ ನಾಯಕರಿಗೂ ಜೆಡಿಎಸ್ ಪಕ್ಷ ಮುಗಿಸಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಕರೆಯುತ್ತಿದ್ದಾರೆ. ಆದರೆ ಕಾಂಗ್ರೆಸ್ ವರಿಷ್ಠರು ಎಚ್‌ಡಿಕೆಯನ್ನು ಮುಖ್ಯಮಂತ್ರಿ ಮಾಡಲು ಅನುಮತಿ ನೀಡಿದ್ದರು ಎಂದು ನೆನಪಿಸಿಕೊಂಡರು. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸುಪಾರಿ ನೀಡಿದ ಪ್ರಕರಣ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರು ಇದ್ದಾರೆ. ಅವರು ಕಾನೂನು ಕ್ರಮ ಕೈಗೊಳ್ತಾರೆ. ಸರ್ಕಾರವೇ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಮೋದಿ-ದೇವೇಗೌಡ ಭಾಯಿಭಾಯಿ: ಸಿದ್ದರಾಮಯ್ಯ
ಗೋ ಹತ್ಯೆ ನಿಷೇಧ ಕಾಯ್ದೆ ಬಂದಾಗ ಜೆಡಿಎಸ್ ನಾಯಕ ಎಚ್​.ಡಿ.ದೇವೇಗೌಡರು ಮಾತನಾಡಲಿಲ್ಲ. ಈಗ ನರೇಂದ್ರ ಮೋದಿ ಜೊತೆ ಭಾಯಿಭಾಯಿ ಅಂತಾರೆ. ಇವರು ಮೋದಿ ಜೊತೆ ಸೇರಿ ಸರ್ಕಾರ ಮಾಡಿದವರು. ಜೆಡಿಎಸ್‌ನವರದ್ದು ಅವಕಾಶವಾದಿ ರಾಜಕಾರಣ. ಅವರಿಗೆ ಯಾವುದೇ ಸಿದ್ಧಾಂತ, ಕಾರ್ಯಕ್ರಮ ಇಲ್ಲ. ಅದಕ್ಕೆ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಹೇಳುವುದು. ನಾನು ಬಿ ಟೀಂ ಎಂದು ಹೇಳಿದರೆ ಅವರಿಗೆ ಸಿಟ್ಟು ಬರುತ್ತೆ. ಆದರೆ ನನ್ನ ಮಾತಿನಲ್ಲಿ ಯಾವುದೇ ಅನುಮಾನ ಬೇಡ. ಜೆಡಿಎಸ್​ನವರು ಅನುಕೂಲಸಿಂಧು ಮತ್ತು ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಸಿದ್ದಾಂತ ಇಲ್ಲ, ಕಾರ್ಯಕ್ರಮಗಳೂ ಇಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಶೇ 40ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ. ಈ ಬಗ್ಗೆ ತಕ್ಷಣ ತನಿಖೆ ಮಾಡಿಸಬೇಕಲ್ಲವೇ ಎಂದು ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಬಿಜೆಪಿ ಅಂದರೆ ಭ್ರಷ್ಟ ಜನತಾ ಪಾರ್ಟಿ ಎಂದು ಹೊಸ ವಿವರಣೆ ನೀಡಿದರು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸ್ವತಃ ಗೃಹಸಚಿವರಾಗಿದ್ದವರು. ಬಿಜೆಪಿಯಲ್ಲಿರುವವರ ಭ್ರಷ್ಟಾಚಾರದ ಬಗ್ಗೆ ಬೊಮ್ಮಾಯಿಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

TV9 Kannada


Leave a Reply

Your email address will not be published. Required fields are marked *