ಪ್ರಧಾನಿ ಮೋದಿಯವರನ್ನು ಭೇಟಿಯಾಗಿ, ತಮ್ಮ ತಾಯಿ ಕಳಿಸಿಕೊಟ್ಟ ರುದ್ರಾಕ್ಷಿ ಹಾರ ನೀಡಿದ ನಟ ಅನುಪಮ್ ಖೇರ್​ | Actor Anupam Kher meets PM Narendra Modi In Delhi


ಪ್ರಧಾನಿ ಮೋದಿಯವರನ್ನು ಭೇಟಿಯಾಗಿ, ತಮ್ಮ ತಾಯಿ ಕಳಿಸಿಕೊಟ್ಟ ರುದ್ರಾಕ್ಷಿ ಹಾರ ನೀಡಿದ ನಟ ಅನುಪಮ್ ಖೇರ್​

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಅನುಪಮ್​ ಖೇರ್​

ಬಾಲಿವುಡ್​ನ ಹಿರಿಯ ನಟ ಅನುಪಮ್ ಖೇರ್​ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಒಂದು ರುದ್ರಾಕ್ಷಿ ಹಾರವನ್ನು ನೀಡಿದ್ದಾರೆ. ಈ ರುದ್ರಾಕ್ಷಿ  ಹಾರವನ್ನು ಅನುಪಮ್ ಖೇರ್​ ತಾಯಿ ಪ್ರಧಾನಿ ಮೋದಿಯವರಿಗಾಗಿ ಕಳಿಸಿಕೊಟ್ಟಿದ್ದಾರೆ. ಅನುಪಮ್​ ಖೇರ್​ ಶನಿವಾರ ಸಂಜೆಯ ಹೊತ್ತಿಗೆ ಪ್ರಧಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಟ್ವೀಟ್​ ಮಾಡಿ ಫೋಟೋ ಹಂಚಿಕೊಂಡ ಅವರು,  ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ತುಂಬ ಸಂತೋಷವಾಯಿತು. ಈ ದೇಶಕ್ಕಾಗಿ, ದೇಶದ ಜನರಿಗಾಗಿ ನೀವು ಹಗಲಿರುಳು ಶ್ರಮಿಸುತ್ತಿದ್ದೀರಿ. ನಿಮ್ಮ ರಕ್ಷಣೆಗೆ ಇರಲಿ ಎಂದು ನನ್ನ ತಾಯಿ ಈ ರುದ್ರಾಕ್ಷಿ ಹಾರವನ್ನು ಕಳಿಸಿಕೊಟ್ಟಿದ್ದರು. ಅದನ್ನು ನೀವು ಸ್ವೀಕರಿಸಿದ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ. ಜೈ ಹೋ, ಜೈ ಹಿಂದ್​ ಎಂದು ಬರೆದಿದ್ದಾರೆ. 

ಅನುಪಮ್ ಖೇರ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿ ಮೋದಿ, ಧನ್ಯವಾದಗಳು ಅನುಪಮ್​ ಖೇರ್​. ನನಗೆ ಮಾತಾಜಿಯವರ ಆಶೀರ್ವಾದ ಸಿಕ್ಕಂತಾಯಿತು. ಈ ದೇಶಕ್ಕೆ ನಿರಂತರವಾಗಿ ಸೇವೆ ಸಲ್ಲಿಸಲು ಶಕ್ತಿ, ಸ್ಫೂರ್ತಿ ನೀಡುತ್ತಿರುವುದೇ ಈ ದೇಶದ ಜನರು ಎಂದು ಹೇಳಿದ್ದಾರೆ.  ಇತ್ತೀಚೆಗೆ ತೆರೆಕಂಡು, ದೇಶಾದ್ಯಂತ ಸಂಚಲನ ಮೂಡಿಸಿದ್ದ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಶ್ಲಾಘಿಸಿದ್ದರು. ಅದರಲ್ಲಿ ಅನುಪಮ್​ ಖೇರ್​ ತುಂಬ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

TV9 Kannada


Leave a Reply

Your email address will not be published.