ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೆ 15 ಆಟಗಾರರ ತಂಡವನ್ನ ಪ್ರಕಟಿಸಿದ ದಿನವೇ ಅಂತಿಮ 11ರ ಬಳಗದಲ್ಲಿ ಆಡೋದ್ಯಾರು ಅನ್ನೋ ಚರ್ಚೆ ಜೋರಾಗಿ ನಡೆದಿತ್ತು. ಅದಾದ ಬಳಿಕ ಆರಂಭವಾದ ಪ್ಲೇಯಿಂಗ್​ ಇಲೆವೆನ್​ ಪ್ರಿಡಿಕ್ಷನ್​ಗಳು ಸಾಕಷ್ಟು ಕುತೂಹಲ ಮೂಡಿಸಿತ್ತು. ಐವರು ಆಟಗಾರರು ಬಹುತೇಕ ಎಲ್ಲರ ಪ್ರಿಡಿಕ್ಟೆಡ್​​ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯಲು ರೋಹಿತ್​ ಶರ್ಮಾ, ಅಜಿಂಕ್ಯಾ ರಹಾನೆ, ರವಿಂದ್ರ ಜಡೇಜಾ, ರಿಷಭ್​ ಪಂತ್​ ಹಾಗೂ ಇಶಾಂತ್​ ಶರ್ಮಾ ಯಶಸ್ವಿಯಾಗಿದ್ದಾರೆ.

ಆದ್ರೆ, ಇವರು ಮುಂಬರುವ ಇಂಗ್ಲೆಂಡ್​​ ವಿರುದ್ಧದ ಸರಣಿಯಲ್ಲೂ ಪ್ಲೇಯಿಂಗ್​ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಬೇಕಂದ್ರೆ, ಇಲ್ಲಿ ಸಾಮರ್ಥ್ಯ ಹೊರ ಹಾಕಬೇಕಾಗಿರೋದು ಅನಿವಾರ್ಯವಾಗಿದೆ. ಇವರೇನಾದ್ರೂ, ಕಿವೀಸ್​ ವಿರುದ್ಧ ವೈಫಲ್ಯ ಅನುಭವಿಸಿದ್ದೇ ಆದ್ರೆ, ಆಂಗ್ಲರ ವಿರುದ್ಧದ ಸರಣಿಯಲ್ಲಿ ಬೆಂಚ್​​ಗೆ ಸೀಮಿತವಾಗಬೇಕಾಗುತ್ತದೆ.

ಆರಂಭಿಕ ರೋಹಿತ್​ ಶರ್ಮಾ ಪಾಲಿಗೆ ಅಗ್ನಿಪರೀಕ್ಷೆಯ ಕಣ
ಕಳೆದ ಆಸ್ಟ್ರೇಲಿಯಾ ಸರಣಿ ಹಾಗೂ ಇಂಗ್ಲೆಂಡ್​ ಸರಣಿಗಳಲ್ಲಿ 47.40ರ ಸರಾಸರಿಯಲ್ಲಿ ರನ್​ ಕಲೆ ಹಾಕಿದ್ರೂ ರೋಹಿತ್ ಶರ್ಮಾಗೂ ಸ್ಥಾನದ ಅಭದ್ರತೆ ಇದೆ ಅಂದ್ರೆ ನಂಬಲೇಬೇಕು. ಓಪನರ್​​ ಸ್ಲಾಟ್​​ಗೆ ಕನ್ನಡಿಗ ಮಯಾಂಕ್​ ಅಗರ್​​ವಾಲ್​ ನೀಡ್ತಿರೋ ಟಫ್​ ಫೈಟ್​​ ಅಷ್ಟಿದೆ. ತವರಿನಲ್ಲಿ ನಡೆದ ಇಂಗ್ಲೆಂಡ್​​ ವಿರುದ್ಧದ ಸರಣಿಯಲ್ಲಿ ಬೆಂಚ್​​ಗೆ ಸೀಮಿತವಾಗಿದ್ದ ಮಯಾಂಕ್​, ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ನಲ್ಲೂ ಬೆಂಚ್ ಕಾಯುತ್ತಿದ್ದಾರೆ. ಆದ್ರೆ, ಕಿವೀಸ್​​ ವಿರುದ್ಧ ರೋಹಿತ್​ ಪ್ಲಾಫ್​ ಶೋ ನೀಡಿದ್ರೆ, ಮುಂಬರುವ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಮಯಾಂಕ್​ ಕಣಕ್ಕಿಳಿಯೋ ಸಾಧ್ಯತೆಯಿದೆ.

ಉಪನಾಯಕನ ಸ್ಥಾನಕ್ಕೇ ಬಂದಿದೆ ಕುತ್ತು
ಟೆಸ್ಟ್​ ತಂಡದ ನಾಯಕನಾಗಿ ಅಜೇಯ ಟ್ರ್ಯಾಕ್​ ರೆಕಾರ್ಡ್​​ ಹೊಂದಿರುವ ಅಜಿಂಕ್ಯಾ ರಹಾನೆ, ಬ್ಯಾಟ್ಸ್​ಮನ್​ ಆಗಿ ವೈಫಲ್ಯದ ಸುಳಿಗೆ ಸಿಲುಕಿದ್ದಾರೆ. ಕಳೆದ 10 ಇನ್ನಿಂಗ್ಸ್​​ಗಳಲ್ಲಿ ಮುಂಬೈಕರ್​ ಕೇವಲ 19.90 ಸರಾಸರಿಯಲ್ಲಿ ರನ್​ ಕಲೆ ಹಾಕಿದ್ದಾರೆ. ಹೀಗಾಗಿ ಫೈನಲ್​ ಪಂದ್ಯದಲ್ಲಿ ರಹಾನೆ, ಬಿಗ್​ ಇನ್ನಿಂಗ್ಸ್​​ ಕಟ್ಟಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಜೊತೆಗೆ ಕನ್ನಡಿಗ ಕೆಎಲ್​ ರಾಹುಲ್​, ರಹಾನೆ ಸ್ಥಾನಕ್ಕೆ ನೇರ ಸ್ಪರ್ಧಿಯಾಗಿರೋದು ಒತ್ತಡವನ್ನ ಹೆಚ್ಚಿಸಿದೆ. ಕಿವೀಸ್​ ವಿರುದ್ಧ ಮುಂಬೈಕರ್​​ ವೈಫಲ್ಯ ಅನುಭವಿಸಿದ್ದೇ ಆದ್ರೆ, ಇಂಗ್ಲೆಂಡ್​ ವಿರುದ್ಧ ಬೆಂಚ್​ ಕಾಯಬೇಕಾಗೋದು ಅನಿವಾರ್ಯವಾಗಲಿದೆ.

ರಿಷಭ್​ ಪಂತ್​ ಸ್ಥಾನಕ್ಕೆ ಸಾಹರಿಂದ ನೇರ ಪೈಪೋಟಿ​​
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​-ಗವಾಸ್ಕರ್​ ಸರಣಿಯಿಂದ ಈಚೆಗೆ ರಿಷಭ್​ ಪಂತ್​ ಟೀಮ್​ ಇಂಡಿಯಾ ಪ್ಲೇಯಿಂಗ್​ ಇಲೆವೆನ್​ನ ಅವಿಭಾಜ್ಯ ಅಂಗ ಎಂದೇ ಹೇಳಲಾಗ್ತಿದೆ. ಪಂತ್​ ನೀಡಿರುವ ಪ್ರದರ್ಶನವೂ ಅಸಾಧಾರಣವಾಗಿದೆ. ಆದ್ರೂ ನ್ಯೂಜಿಲೆಂಡ್​​ ವಿರುದ್ಧ ಏನಾದ್ರೂ ವೈಫಲ್ಯ ಕಂಡರೆ ಇಂಗ್ಲೆಂಡ್​​ ಸರಣಿಯಲ್ಲಿ ಸ್ಥಾನ ಸಿಗೋದು ಕಷ್ಟವಾಗಲಿದೆ. ಬ್ಯಾಟಿಂಗ್​ನಲ್ಲಿ ಅಬ್ಬರಿಸ್ತಿರೋ ಪಂತ್​, ಕೀಪಿಂಗ್​ನಲ್ಲಿ ಫೆಲ್ಯೂರ್​​ ಆಗಿದ್ದಾರೆ. ಅಲ್ಲದೇ ಈ ಹಿಂದೆಯೇ ಟೀಮ್​ ಮ್ಯಾನೇಜ್​ಮೆಂಟ್​​ ವಿದೇಶಿ ಪಿಚ್​ಗಳಲ್ಲಿ ವೃದ್ಧಿಮಾನ್​ ಸಾಹ ನಮ್ಮ ಆಯ್ಕೆ ಅನ್ನೋ ಮಾತುಗಳನ್ನಾಡಿದೆ. ಹೀಗಾಗಿ ಸೌತ್​ಹ್ಯಾಂಪ್ಟನ್​ನಲ್ಲಿ ಪಂತ್​ ಪರಾಕ್ರಮ ಮೆರಿಯದಿದ್ರೆ ಸ್ಥಾನಕ್ಕೆ ಕುತ್ತು ಬರಲಿದೆ.

ಆಲ್​ರೌಂಡರ್​ ಜಡೇಜಾ ಮೇಲೂ ತೂಗುಗತ್ತಿ
ಟೀಮ್ ​ಇಂಡಿಯಾದ ಬೆಸ್ಟ್​ ಆಲ್​ರೌಂಡರ್​ ಆಗಿ ಗುರುತಿಸಿಕೊಂಡಿರುವ ರವೀಂದ್ರ ಜಡೇಜಾ ಸ್ಥಾನವೂ ಅಭದ್ರವೇ. ಜಡ್ಡು ಅಲಭ್ಯತೆಯಲ್ಲಿ ತವರಿನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಪದಾರ್ಪಣೆ ಮಾಡಿ ಅಕ್ಷರ್​ ಪಟೇಲ್​ ಮಾಡಿದ ಕಮಾಲ್​ ಜಡೇಜಾ ಸ್ಥಾನಕ್ಕೆ ಕುತ್ತು ತಂದಿದೆ. ನ್ಯೂಜಿಲೆಂಡ್​ ವಿರುದ್ಧದ ಫೈನಲ್​ ಫೈಟ್​ನಲ್ಲಿ ಜಡೇಜಾ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದೇ ಇದ್ದಲ್ಲಿ, ಇಂಗ್ಲೆಂಡ್​​ ಸರಣಿಯಲ್ಲಿ ಅಕ್ಷರ್​​ ಪಟೇಲ್​ಗೆ ಸ್ಥಾನ ಎನ್ನಲಾಗ್ತಿದೆ. ಈಗಾಗಲೇ ಇಂಗ್ಲೆಂಡ್​​ ತಂಡದ ಬ್ಯಾಟ್ಸ್​ಮ್ಯಾನ್​ಗಳ ವಿರುದ್ಧ ಆಡಿದ ಅನುಭವವಿರೋದು ಅಕ್ಷರ್​ ಆಯ್ಕೆಗೆ ಪ್ಲಸ್​ ಪಾಯಿಂಟ್​​ ಆಗಲಿದೆ.

ಅನುಭವಿ ಇಶಾಂತ್​ Vs ಯಂಗ್​ ಸಿರಾಜ್​ 
ಟೆಸ್ಟ್​ ಚಾಂಪಿಯನ್​​ ಶಿಪ್​ ಫೈನಲ್​ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​​ ಪಾಲಿಗೆ ಕಗ್ಗಂಟಾಗಿರೋದೇ ಈ ವಿಚಾರ. ಅನುಭವಿ ಇಶಾಂತ್​ ಶರ್ಮಾರನ್ನ ಆಡಿಸಬೇಕೋ, ಯಂಗ್​ ಸಿರಾಜ್​ಗೆ ಮಣೆ ಹಾಕಬೇಕೋ ಅನ್ನೋ ಗೊಂದಲ ಮ್ಯಾನೇಜ್​ಮೆಂಟ್​​ ಎದುರಾಗಿತ್ತು. ಈ ನಡುವೆ ಅನುಭವಿ ಇಶಾಂತ್​​ಗೆ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಡೋ ಅವಕಾಶ ಸಿಕ್ಕಿದ್ದರೂ ಇದು ಅವರ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿದೆ. ಫೈನಲ್​ ಫೈಟ್​ನಲ್ಲಿ ಆಡೋ ಆಟದ ಮೇಲೆ ಇಂಗ್ಲೆಂಡ್​ ಸರಣಿಯ ಸ್ಥಾನ ನಿರ್ಧಾರವಾಗಲಿದೆ.

ಈಗಾಗಲೇ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಹಲವು ಕಾರಣಗಳಿಂದ ಕುತೂಹಲವನ್ನ ಹುಟ್ಟುಹಾಕಿದೆ. ಅದರ ಜೊತೆಗೆ ಇದೀಗ ಸ್ಥಾನಕ್ಕಾಗಿ ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿರೋದು ಕುತೂಹಲವನ್ನ ಇನ್ನಷ್ಟು ಹೆಚ್ಚಿಸಿದೆ. ಸೌತ್​​ಹ್ಯಾಂಪ್ಟನ್​ನಲ್ಲಿ ಯಾರು ಶೈನ್​ ಆಗ್ತಾರೆ..? ತನ್ನ ಸ್ಥಾನವನ್ನ ಭದ್ರಪಡಿಸಿಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. ಮಳೆ ಬಂದು ಮಹತ್ವದ ಪಂದ್ಯದ ಮೊದಲ ದಿನ ವಾಷ್​ಔಟ್​ ಆಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

The post ಪ್ರಮುಖ ಆಟಗಾರರಿಗೆ ಅಗ್ನಿಪರೀಕ್ಷೆ- ಕಿವೀಸ್​​ ವಿರುದ್ಧ ಫೇಲಾದ್ರೆ ಇಂಗ್ಲೆಂಡ್​​ ಸರಣಿಯಲ್ಲಿ ಕೊಕ್​ appeared first on News First Kannada.

Source: newsfirstlive.com

Source link