ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ 1,100 ಕೋಟಿ ವೆಚ್ಚದ ವಿವಿಧ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ಒಂದೊಂದು ಯೋಜನೆಯೂ ಬೇರೆಯದೇ ಲೋಕಕ್ಕೆ ಕರೆದೊಯ್ಯುವಂತಿವೆ. ನೋಡ್ತಾ ನಿಂತರೆ ಮಂತ್ರಮುಗ್ಧರನ್ನಾಗಿಸುತ್ತವೆ. ಅಷ್ಟಕ್ಕೂ ಆ ಯೋಜನೆಗಳು ಏನು? ಅದರ ವಿಶೇಷ ಏನು?

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ನಂತರ ಐದು ವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆಗಳಿಗೆ ಭೂಮಿ ಪೂಜೆ ಮಾಡಿರುತ್ತಾರೆ. ಆ ನಂತರ 2019ರಲ್ಲಿ ನಡೆದ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ಸಾಧಿಸುತ್ತೆ. ನರೇಂದ್ರ ಮೋದಿ ಪ್ರಧಾನಿಯಾಗಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸುತ್ತಾರೆ. ಮೊದಲನೇ ಅವಧಿಯಲ್ಲಿ ಭೂಮಿ ಪೂಜೆ ಮಾಡಿದ್ದ ನರೇಂದ್ರ ಮೋದಿ ಅವರು ಇದೀಗ ಆ ಎಲ್ಲಾ ಯೋಜನೆಗಳಿಗೂ ಲೋಕಾರ್ಪಣೆ ಮಾಡುತ್ತಿದ್ದಾರೆ. ಗುರುವಾರ ಅಷ್ಟೇ ಅವರು ಪ್ರತಿನಿಧಿಸುವ ವಾರಣಾಸಿಯಲ್ಲಿ 1500 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯವನ್ನು ಲೋಕಾಪರ್ಣೆಗೊಳಿಸಿದ್ದರು. ರುದ್ರಾಕ್ಷ ಅನ್ವೆಕ್ಷನ್‌ ಹಾಲ್‌ನ ಹಲವು ವಿಶೇಷತೆಗಳನ್ನು ನೋಡಿ ಅಚ್ಚರಿಗೊಂಡಿದ್ದೇವೆ. ಶನಿವಾರ ತಮ್ಮ ಸ್ವಂತ ರಾಜ್ಯವಾಗಿರೋ ಗುಜರಾತ್‌ನಲ್ಲಿ 1100 ಕೋಟಿ ವೆಚ್ಚದ ವಿವಿಧ ಯೋಜನೆ ಲೋಕಾರ್ಪಣಗೊಳಿಸಿದ್ದಾರೆ. ಒಂದೊಂದು ಯೋಜನೆಯೂ ರೋಮಾಂಚನಗೊಳಿಸುತ್ತೆ. ಜೀವನದಲ್ಲಿ ಒಮ್ಮೆಯಾದ್ರೂ ಹೋಗಿ ನೋಡಿಬರಬೇಕು ಅನ್ನೋ ಬಯಕೆಯನ್ನು ಹುಟ್ಟಿಸುತ್ತಿವೆ.

1100 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆ ಲೋಕಾರ್ಪಣೆ
ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ ಮೋದಿ

ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ್ದಾಗಿನಿಂದ ಗುಜರಾತ್‌ನಲ್ಲಿ ದೊಡ್ಡ ದೊಡ್ಡ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. 2018 ರಲ್ಲಿ ಸರ್ದಾರ್‌ ವಲಭಭಾಯ್‌ ಪಟೇಲ್‌ ಅವರ ಏಕತಾ ಪ್ರತಿಮೆ ಲೋಕಾರ್ಪಣೆ ಮಾಡಲಾಗಿತ್ತು. ಅದು ವಿಶ್ವದಲ್ಲಿಯೇ ಅತಿ ಎತ್ತರದ ಪ್ರತಿಮೆ ಎಂಬ ಗರಿಮೆಯನ್ನು ಪಡೆದಿತ್ತು. ಇದೀಗ ಲೋಕಾರ್ಪಣೆಗೊಳಿಸಲಾಗಿರೋ ಯೋಜನೆಗಳು ಇಡೀ ವಿಶ್ವದ ಪ್ರವಾಸಿಗರನ್ನೇ ಸೆಳೆಯುವ ರೀತಿಯಲ್ಲಿವೆ. ಗಾಂಧಿನಗರದ ರೈಲ್ವೆ ನಿಲ್ದಾಣದ ಮೇಲೆ ನಿರ್ಮಾಣವಾದ ಐಷಾರಾಮಿ ಹೋಟೆಲ್‌, ಸೈನ್ಸ್‌ ಸಿಟಿಯಲ್ಲಿ ನಿರ್ಮಾಣವಾಗಿರೋ ಅಕ್ವಾಟಿಕ್‌ ಗ್ಯಾಲರಿ, ರೋಬೋಟ್‌ ಗ್ಯಾಲರಿ, ನೇಚರ್‌ ಪಾರ್ಕ್‌, ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಆದ್ರೆ, ಆ ಎಲ್ಲಾ ಯೋಜನೆಗಳು ಪ್ರವಾಸಿಗರನ್ನು ಸೂಚಿಗಲ್ಲಿನಂತೆ ಆಕರ್ಷಿಸುತ್ತವೆ ಅನ್ನೋದು ಮಾತ್ರ ಸತ್ಯ.

ಏರ್‌ಪೋರ್ಟ್‌ ಮಾದರಿಯಲ್ಲಿ ನಿರ್ಮಾಣವಾದ ರೈಲ್ವೆ ನಿಲ್ದಾಣ
ರೈಲ್ವೆ ನಿಲ್ದಾಣದ ಮೇಲೆ ಐಷಾರಾಮಿ ಹೋಟೆಲ್‌

ಒಮ್ಮೆ ಥಟ್‌ ಅಂತ ನೋಡಿದ್ರೆ ಗುಜರಾತ್‌ನ ಗಾಂಧಿನಗರದಲ್ಲಿರೋ ರೈಲ್ವೆ ನಿಲ್ದಾಣ ಏರ್‌ಪೋರ್ಟ್‌ ಆಗಿ ಬದಲಾಗಿ ಬಿಡ್ತಾ? ಹೌದು, ಖಂಡಿತ ಇಂತಹವೊಂದು ಅನುಮಾನ ಒಂದೇ ಬರುತ್ತೆ. ಅಷ್ಟೊಂದು ಆಶ್ಚರ್ಯ ಚಕಿತರನ್ನಾಗಿ ಮಾಡಿ ಬಿಡುತ್ತೆ. ನೋಡಲು ಏರ್‌ಪೋರ್ಟ್‌ನಂತೆ ಕಾಣುವ ಈ ನಿಲ್ದಾಣದಲ್ಲಿ ಪ್ರಾಥನಾ ಕೋಣೆ, ಮಗುವಿಗೆ ಹಾಲುಣಿಸುವ ಕೊಠಡಿ, 318 ಕೋಣೆಯನ್ನು ಹೊಂದಿರೋ ಪಂಚತಾರಾ ಹೋಟೆಲ್‌ ನಿರ್ಮಾಣ ಮಾಡಲಾಗಿದೆ. ರೈಲ್ವೆ ನಿಲ್ದಾಣದ ಮೇಲೆ ಪಂಚರಾತಾ ಹೋಟೆಲ್‌ ನಿರ್ಮಾಣವಾಗಿರೋದು ದೇಶದಲ್ಲಿಯೇ ಇದೇ ಮೊದಲನೆಯದಾಗಿದೆ.

ಸೈನ್ಸ್‌ ಸಿಟಿಯಲ್ಲಿ ನಿರ್ಮಾಣವಾಯ್ತು ಅಕ್ವಾಟಿಕ್‌ ಗ್ಯಾಲರಿ
260 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನಿರ್ಮಾಣ
ಅಕ್ವಾಟಿಕ್‌ನಲ್ಲಿವೆ 11600 ಬಗೆಯ ಮೀನುಗಳು
ವಿಶೇಷ ಅನುಭವ ನೀಡುತ್ತೆ ಶಾರ್ಕ್‌ ವೀಕ್ಷಣೆಯ ಸುರಂಗ ಮಾರ್ಗ

ಅಹಮದಾಬಾದ್‌ ಏರ್‌ಪೋರ್ಟ್‌ನಿಂದ 16 ಕಿಲೋ ಮೀಟರ್‌ ಪ್ರಯಾಣಿಸಿದ್ರೆ ಸೈನ್ಸ್‌ ಸಿಟಿ ಸಿಗುತ್ತೆ. ಅಲ್ಲಿ ನಿರ್ಮಾಣವಾಗಿರೋ ಅತ್ಯಾಧುನಿಕ ಅಕ್ವಾಟಿಕ್‌ ಗ್ಯಾಲರಿಗೂ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಅದರ ವಿಶೇಷ ಅಂದ್ರೆ, 11600 ಬಗೆಯ ಜಲಚರಗಳನ್ನು ನೋಡಬಹುದು. ಸುಮಾರು 28 ಮೀಟರ್‌ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ಸುರಂಗ ಮಾರ್ಗದಲ್ಲಿ ಹೋಗುವಾಗ ಕಾಣುವ ಶಾರ್ಕ್‌ ಮೀನುಗಳು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ. ದೇಶದಲ್ಲಿ ಇಲ್ಲಿಯವರೆಗೂ ನಿರ್ಮಾಣವಾಗಿರೋ ಅಕ್ವಾಟಿಕ್‌ ಗ್ಯಾಲರಿ ಇಷ್ಟೊಂದು ಐಷಾರಾಮಿಯಾಗಿ, ಅತ್ಯಾಕರ್ಷಕವಾಗಿ ನಿರ್ಮಾಣವಾಗಿರಲೇ ಇಲ್ಲ. ಇದರ ನಿರ್ಮಾಣಕ್ಕೆ 260 ಕೋಟಿ.

ರೋಬೋಟ್‌ ಗ್ಯಾಲರಿ ಲೋಕಾರ್ಪಣೆ
ಇಲ್ಲಿವೆ 200ಕ್ಕೂ ಹೆಚ್ಚು ರೋಬೋಗಳು
ನೃತ್ಯ ಮಾಡಿ ರಂಜಿಸುತ್ತವೆ, ಊಟ, ತಿಂಡಿ ಸಪ್ಲೈ ಮಾಡುತ್ತವೆ
ಮಾನವನಾಕೃತಿಯ ರೋಬೋ ಪ್ರೇಕ್ಷಕರ ಜೊತೆ ಸಂವಹನ ನಡೆಸುತ್ತೆ

ಸೈನ್ಸ್‌ ಸಿಟಿಯಲ್ಲಿಯೇ ನಿರ್ಮಿಸಲಾಗಿರೋ ರೋಬೋಟ್‌ ಗ್ಯಾಲರಿಗೂ ಚಾಲನೆ ನೀಡಲಾಗಿದೆ. 141 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಈ ಗ್ಯಾಲರಿ ಪ್ರವಾಸಿಗರನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತೆ. ಇಲ್ಲಿ ಸ್ವಾಗತ ಮಾಡುವುದರಿಂದ ಹಿಡಿದು, ಊಟ ತಿಂಡಿ ಸಪ್ಲೈ ಮಾಡುವುದು ಕೂಡ ರೋಬೋಗಳೇ ಆಗಿರುತ್ತವೆ. 200ಕ್ಕೂ ಹೆಚ್ಚು ರೋಬೋಗಳು ಈ ಗ್ಯಾಲರಿಯಲ್ಲಿವೆ. ಡ್ಯಾನ್ಸ್‌ ಮಾಡಿ ಪ್ರವಾಸಿಗರನ್ನು ರಂಜಿಸೋ ಕೆಲಸವನ್ನು ಮಾಡುತ್ತವೆ. ವಿಶೇಷ ಅಂದ್ರೆ ಸ್ವಾಗತ ಮೇಜಿನಲ್ಲಿರೋ ಮಾನವನಾಕೃತಿಯ ರೋಬೋ ಪ್ರೇಕ್ಷಕರ ಜೊತೆ ಸಂವಹನ ನಡೆಸುತ್ತದೆ. ಅದರೆ ತಲೆ ಮುಟ್ಟಿದರೆ ಪ್ರತಿಕ್ರಿಯೆ ನೀಡುತ್ತದೆ. ಒಮ್ಮೆ ಒಳಹೋಗಿ ಒಂದು ಸುತ್ತು ಬಂದ್ರೆ ಎಂಥವರನ್ನಾದರೂ ಮಂತ್ರಮುಗ್ಧರಾಗಿಸಿ ಬಿಡುತ್ತೆ.

ನೇಚರ್‌ ಪಾರ್ಕ್‌ನಲ್ಲಿದೆ ಹಲವು ವೈಶಿಷ್ಟ್ಯ
20 ಎಕರೆ ಪ್ರದೇಶದಲ್ಲಿ ನೇಚರ್‌ ಪಾರ್ಕ್‌ ನಿರ್ಮಾಣ
14 ಕೋಟಿ ವೆಚ್ಚದಲ್ಲಿ ನಿರ್ಮಾಣವಾಯ್ತು ಆಕರ್ಷಕ ಪಾರ್ಕ್‌

ಸೈನ್ಸ್‌ ಸಿಟಿಯಲ್ಲಿ ನಿರ್ಮಾಣವಾಗಿರೋ ನೇಚರ್‌ ಪಾರ್ಕ್‌ ವಿಶಿಷ್ಟತೆಯಿಂದ ಕೂಡಿದೆ. ಕುಟುಂಬ ಸಮೇತರಾಗಿ ಭೇಟಿ ನೀಡಿದ್ರೆ ವಾಪಸ್‌ ಬರುವ ಮನಸ್ಸೆ ಆಗದು. ಅಷ್ಟೊಂದು ಕಣ್‌ ಮನ ಸೆಯುವ ಸಾಮರ್ಥ್ಯ ನೇಚರ್‌ ಪಾರ್ಕ್‌ಗೆ ಇದೆ. 20 ಎಕರೆ ಪ್ರದೇಶದಲ್ಲಿ ಸುಮಾರು 14 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಕರ್ಷಕವಾಗಿ ನಿರ್ಮಿಸಲಾಗಿದೆ. ಇಲ್ಲಿ ಚೆಸ್‌ ಗಾರ್ಡನ್‌, ಇಬ್ಬನಿಯ ಗಾರ್ಡನ್‌, ಶಿಲ್ಪಕಲೆಯ ಗಾರ್ಡನ್‌, ಸೆಲ್ಫೀ ಪಾಯಿಂಟ್‌ಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಶಿಲ್ಪಕಲೆಯ ಗಾರ್ಡನ್‌ನಲ್ಲಿ ದೇಶದ ವಿವಿಧ ರೀತಿಯ ಶಿಲ್ಪ ಕಲೆ ವೀಕ್ಷಿಸಬಹುದು. ವಿವಿಧ ರೀತಿಯ ಪ್ರಾಣಿ, ಪಕ್ಷಿಗಳ ಕಲಾಕೃತಿಗಳು ನಿರ್ಮಾಣವಾಗಿದ್ದು, ಅವುಗಳ ಬಗ್ಗೆ ಮಾಹಿತಿಯನ್ನು ಅಲ್ಲಿಯೇ ಹಾಕಲಾಗಿದೆ. ವಿಶೇಷವಾಗಿ ಮಕ್ಕಳಿಗಾಗಿಯೇ ಚಕ್ರವ್ಯೂಹ ರೀತಿಯಲ್ಲಿ ಗಾರ್ಡನ್‌ ನಿರ್ಮಿಸಲಾಗಿದೆ.

ಗಾಂಧಿನಗರ-ವಾರಣಾಸಿ ಸಂಪರ್ಕಿಸೋ ರೈಲಿಗೆ ಚಾಲನೆ

ನರೇಂದ್ರ ಮೋದಿ 15 ವರ್ಷದಳ ಕಾಲ ಗುಜರಾತ್‌ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದವರು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿರುತ್ತೆ. ಆ ಸಂದರ್ಭದಲ್ಲಿ ನರೇಂದ್ರ ಮೋದಿ ಎಲ್ಲಿಂದ ಸ್ಪರ್ಧಿಸುತ್ತಾರೆ ಅನ್ನೋ ಚರ್ಚೆ ತಾರಕಕ್ಕೇರಿಬಿಡುತ್ತೆ. ಹಿಂದುಗಳ ಪವಿತ್ರ ಕ್ಷೇತ್ರವಾಗಿರೋ ಕಾಶಿ ದೇವಾಲಯವನ್ನು ಹೊಂದಿರೋ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧರಾಗುತ್ತಾರೆ. ಕಳೆದು ಎರಡೂ ಲೋಕಸಭೆಯಲ್ಲಿಯೂ ವಾರಣಾಸಿ ಕ್ಷೇತ್ರದಿಂದಲೇ ಭರ್ಜರಿ ಗೆಲುವು ಸಾಧಿಸಿ ಪ್ರಧಾನಿಯಾಗಿದ್ದಾರೆ. ಗಾಂಧಿನಗರದಿಂದ ವಾರಣಾಸಿಗೆ ಏಕ್ಸ್‌ಪ್ರೆಸ್‌ ರೈಲು ಸೇವೆ ನೀಡಲು ಮೋದಿ ಉತ್ಸುಕರಾಗಿದ್ರು. ಶುಕ್ರವಾರ ಆ ಕೆಲಸವೂ ಆಗಿದೆ. ಅಂದ್ರೆ, ಗಾಂಧಿನಗರ, ವಾರಣಾಸಿ ನಡುವಿನ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ್ದಾರೆ.

ಪ್ರವಾಸಿಗರನ್ನು ಸೆಳೆಯುತ್ತಿದೆ ಗಾಂಧಿ ನಾಡು
ಬದಲಾಗುತ್ತಿದೆ ಗುಜರಾತ್‌ ಚಿತ್ರಣ

ಇತ್ತೀಚಿನ ವರ್ಷದವರೆಗೊ ಗುಜರಾತ್‌ಗೆ ಭೇಟಿ ನೀಡಿ ಒಮ್ಮೆಯಾದ್ರೂ ಕಚ್‌ ಮರುಭೂಮಿ, ಕೃಷ್ಣನ ದ್ವಾರಕ ಮಂದಿರ, ಸೋಮನಾಥ ಮಂದಿರ, ಗಿರ್‌ ಜಂಗಲ್‌ ನೋಡಬೇಕು ಅನ್ನೋದು ಪ್ರವಾಸಿಗರ ಕನಸಾಗಿತ್ತು. ಆದ್ರೆ, ಈಗ ಗುಜರಾತ್‌ ಬದಲಾಗಿದೆ. ಅವುಗಳ ಜೊತೆ ಹೊಸದಾಗಿ ನಿರ್ಮಾಣವಾಗಿರೋ ಏಕತಾ ಪ್ರತಿಮೆ ಜನರನ್ನು ಆಕರ್ಷಿಸುತ್ತಿದೆ. ಇದೀಗ ಲೋಕಾರ್ಪಣೆಗೊಂಡಿರೋ ನೇಚರ್‌ ಪಾರ್ಕ್‌, ಅಕ್ವೆಟಿಕ್‌ ಗ್ಯಾಲರಿ, ರೋಬೋಟಿಕ್ಸ್‌ ಗ್ಯಾಲರಿ, ಅತ್ಯಾಕರ್ಷಕವಾಗಿ ನಿರ್ಮಾಣವಾಗಿರೋ ಗಾಂಧಿನಗರದ ರೈಲ್ವೆ ನಿಲ್ದಾಣ ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿವೆ.

ಇಲ್ಲಿಯವರೆಗೆ ಗುಜರಾತ್‌ಗೆ ಭೇಟಿ ನೀಡಿದ್ರೆ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಾಗುತ್ತಿತ್ತು. ಈಗ ಐತಿಹಾಸಿಕ ಸ್ಥಳಗಳ ಜೊತೆಗೆ ಅತ್ಯಾಕರ್ಷಕ ನೇಚರ್‌ ಪಾರ್ಕ್‌, ಅಕ್ವೆಟಿಕ್‌ ಗ್ಯಾಲರಿ, ರೋಬೋಟಿಕ್ಸ್‌ ಗ್ಯಾಲರಿ, ರೈಲ್ವೆ ನಿಲ್ದಾಣ ಪ್ರವಾಸಿಗರನ್ನು ಸೆಳೆಯುತ್ತೆ.

The post ಪ್ರವಾಸಿಗರನ್ನು ಸೆಳೆಯುತ್ತಿದೆ ಗಾಂಧಿ ನಾಡು.. ಬದಲಾಗುತ್ತಿದೆ ಗುಜರಾತ್‌ ಚಿತ್ರಣ appeared first on News First Kannada.

Source: newsfirstlive.com

Source link