ಮೈಸೂರು: ರಾಜ್ಯಾದ್ಯಂತ ಮೂರನೇ ಹಂತದಲ್ಲಿ ಲಾಕ್​ಡೌನ್​ ಸಡಿಲಿಕೆ ಮಾಡಿದ ಹಿನ್ನೆಲೆ ನಾಳೆಯಿಂದ ಮೈಸೂರು ಅರಮನೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಏಪ್ರಿಲ್ 24 ರಿಂದ ವಿಶ್ವ ವಿಖ್ಯಾತ ಮೈಸೂರು ಅರಮನೆ ಪ್ರವೇಶವನ್ನು ಪ್ರವಾಸಿಗರಿಗೆ ನಿರ್ಭಂಧಿಸಲಾಗಿತ್ತು.

ಅರಮನೆಯ ವೀಕ್ಷಣೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ಅವಕಾಶವಿರಲಿದೆ. ಅರಮನೆಯ ವೆಬ್‌ಸೈಟ್ www.mysorepalace.gov.in ನಲ್ಲಿ ಆನ್‌ಲೈನ್ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ.

ಅರಮನೆಯ ವರಾಹ ದ್ವಾರಗಳಲ್ಲಿರುವ ಟಿಕೆಟ್‌ ಕೌಂಟರ್‌ನಲ್ಲಿಯೂ ಸಹ ಟಿಕೆಟ್‌ಗಳು ಸಿಗಲಿವೆ.. ಪ್ರವಾಸಿಗರಿಗೆ ಅರಮನೆಯ ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಅರಮನೆಯ ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಇರಲಿದೆ.

ಟಿಕೆಟ್‌ ಕೌಂಟರ್‌ನಲ್ಲಿ ಪ್ರವಾಸಿಗರ ನಡುವೆ ಅಂತರ ಕಾಯ್ದುಕೊಳ್ಳಲು ಚೌಕಾಕಾರದ ಗುರುತು ಹಾಕಲಾಗಿದ್ದು. ಪ್ರವಾಸಿಗರು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ತಪ್ಪದೇ ಮಾಸ್ಕ್ ಧರಿಸಬೇಕು. ಇನ್ನು ಅರಮನೆಯ ಆವರಣದಲ್ಲಿ ಸೂಚನಾ ಫಲಕಗಳ ಮೂಲಕ ಜಾಗೃತಿ ಮೂಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ ಎಸ್ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.

ಅರಮನೆಯಷ್ಟೇ ಅಲ್ಲದೆ ನಾಳೆಯಿಂದ ಮೈಸೂರು ಮೃಗಾಲಯ, ಕಾರಂಜಿ ಕೆರೆ ವೀಕ್ಷಣೆಗೂ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಚಾಮರಾಜೇಂದ್ರ ಮೃಗಾಲಯವು, ʻಕೋವಿಡ್‌ ಕಾರಣದಿಂದಾಗಿ ಮೃಗಾಲಯ ಹಾಗೂ ಕಾರಂಜಿ ಕೆರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈಗ ಅನ್‌ಲಾಕ್‌ ಘೋಷಿಸಲಾಗಿದ್ದು, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ವಯ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದೆ.

The post ಪ್ರವಾಸಿಗರಿಗೆ ಗುಡ್​ನ್ಯೂಸ್​: ಮೈಸೂರು ಅರಮನೆ, ಮೃಗಾಲಯ, ಕಾರಂಜಿ ಕೆರೆ ವೀಕ್ಷಣೆಗೆ ಮುಕ್ತ appeared first on News First Kannada.

Source: newsfirstlive.com

Source link