ನವದೆಹಲಿ: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆಂಧ್ರಪ್ರದೇಶದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 44ಕ್ಕೆ ಏರಿಕೆ ಆಗಿದೆ. ಇದುವರೆಗೂ 16 ಮಂದಿ ಕಣ್ಮರೆಯಾಗಿದ್ದು, 211 ಗ್ರಾಮಗಳು ಸಂಪೂರ್ಣ ಮುಳುಗಡೆ ಆಗಿವೆ ಎಂದು ಆಂಧ್ರ ಪ್ರದೇಶ ಸರ್ಕಾರ ತಿಳಿಸಿದೆ.
ಸರ್ಕಾರ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ.. ಕಡಪಾ, ಚಿತ್ತೂರ್, ಅನಂತಪುರ ಹಾಗೂ ನೆಲ್ಲೂರು ಜಿಲ್ಲೆಯ 1990 ಗ್ರಾಮಗಳು ಮುಳುಗಡೆ ಆಗಿವೆ. ಅವುಗಳಲ್ಲಿ 211 ಗ್ರಾಮಗಳು ಸಂಪೂರ್ಣ ಮುಳುಗಡೆ ಆಗಿವೆ. ಮೃತರ ಸಂಖ್ಯೆ 44ಕ್ಕೆ ಏರಿಕೆ ಆಗಿದೆ ಎಂದು ಮಾಹಿತಿ ನೀಡಿದೆ.
ಅಕ್ಟೋಬರ್ ಮೊದಲ ವಾರದಿಂದ ಮಳೆಯ ಆರ್ಭಟ ಶುರುವಾಗಿತ್ತು. ಈಗಲೂ ಕೂಡ ಮಳೆ ನಿರಂತರವಾಗಿ ಸುರಿಯುತ್ತಿದೆ. ತಿರುಪತಿಯ ತಿರುಮಲ ಪಟ್ಟಣ ಸಂಪೂರ್ಣ ಮಳೆ ನೀರಲ್ಲಿ ಮುಳುಗಡೆ ಆಗಿ, ಅಪಾರ ಹಾನಿಯಾಗಿದೆ ಎಂದು ಆಂಧ್ರ ಸರ್ಕಾರ ತಿಳಿಸಿದೆ.
ಇನ್ನು ಪ್ರವಾಹದಲ್ಲಿ 4 ಬಸ್ ಸಿಲುಕಿಕೊಂಡಿವೆ. ನಡಲೂರು ಬ್ರಿಡ್ಜ್ನಲ್ಲಿ ಬಸ್ವೊಂದು ಬಿದ್ದ ಪರಿಣಾಮ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಳೆಯಿಂದಾಗಿ 95,949 ಕುಟುಂಬ ಅತಂತ್ರಕ್ಕೆ ಸಿಲುಕಿದೆ. ಸದ್ಯ ಪ್ರತಿ ಕುಟುಂಬಕ್ಕೆ 25 ಕೆಜಿ ಅಕ್ಕಿ ಹಾಗೂ ಕಿಟ್ ನೀಡಲು ಆಂಧ್ರ ಸರ್ಕಾರ ನಿರ್ಧರಿಸಿದೆ.