ಮಡಿಕೇರಿ: ಹಿಂದೂ ಸಂಘಟನೆ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದಲ್ಲಿ ಕೊಡಗು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದ್ದು, ಪ್ರಕರಣದ ಒಂಭತ್ತು ಮಂದಿ ಆರೋಪಿಗಳು ಆರೋಪ ಮುಕ್ತಗೊಳಿಸಿ ತೀರ್ಪು ನೀಡಿದೆ.
2016ರ ಆ.14 ರಂದು ನಡೆದಿದ್ದ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸಿದ್ದ ತುಫೈಲ್, ನಯಾಜ್, ಅಫ್ರಿನ್, ಮಹಮ್ಮದ್, ಮುಸ್ತಾಫ, ಇಲಿಯಾಸ್, ಇರ್ಫಾನ್, ಮಝೀದ್, ಹ್ಯಾರಿಸ್ ಅವರನ್ನು ಕೋರ್ಟ್ ಖುಲಾಸೆಗೊಳಿಸಿದೆ.
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನಾಗಿದ್ದ, ಆಟೋ ಚಾಲಕ ಪ್ರವೀಣ್ ಪೂಜಾರಿಯನ್ನು ಆ.14 ರಾತ್ರಿ ಕೊಲೆ ಮಾಡಲಾಗಿತ್ತು. ಅಂದು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರವೀಣ್ನನ್ನು ರಿಕ್ಷಾ ಬಾಡಿಗೆ ಪಡೆದು ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈಗಿನ ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮದಲ್ಲಿ ಘಟನೆ ನಡೆದಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ 9 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟ ಮಾಡಿದೆ. ಇಂದು ಪ್ರಕರಣದ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ ನಿಯೋಜನೆ ಮಾಡಲಾಗಿತ್ತು.