ಪ್ರಶಾಂತ್​ ನೀಲ್​ರನ್ನು ‘ನನ್ನ ನಿರ್ದೇಶಕ’ ಎಂದು ಕರೆದ ನಟ ಪ್ರಭಾಸ್ | KGF Chapter 2 Not pressurizing us Prashanth Neel is My director Says Prabhas


ಪ್ರಶಾಂತ್​ ನೀಲ್​ರನ್ನು ‘ನನ್ನ ನಿರ್ದೇಶಕ’ ಎಂದು ಕರೆದ ನಟ ಪ್ರಭಾಸ್

ಪ್ರಭಾಸ್​-ಪ್ರಶಾಂತ್​ ನೀಲ್​

‘ಕೆಜಿಎಫ್​ 2’ (KGF Chapter 2) ಯಶಸ್ಸಿನ ನಂತರದಲ್ಲಿ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ‘ಸಲಾರ್’ ಸಿನಿಮಾ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ. ಈ ಸಿನಿಮಾ ಸೆಟ್ಟೇರಿ ವರ್ಷವೇ ಕಳೆದಿದೆ. ಆದರೆ, ‘ಕೆಜಿಎಫ್ 2’ ಕೆಲಸಗಳಿಂದ ಈ ಚಿತ್ರದ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿದ್ದವು. ಈಗ ಪ್ರಶಾಂತ್ ನೀಲ್ ಹೆಗಲಮೇಲಿದ್ದ ಒಂದು ಭಾರ ಕಡಿಮೆ ಆಗಿದ್ದು, ಅವರು ಸಂಪೂರ್ಣವಾಗಿ ‘ಸಲಾರ್’ (Salaar Movie) ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ಪ್ರಭಾಸ್​ಗೆ ‘ಕೆಜಿಎಫ್ 2’ ಗೆಲುವಿನ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ಈ ಯಶಸ್ಸಿನಿಂದ ನಿಮಗೆ ಏನಾದರೂ ಒತ್ತಡದ ಫೀಲ್ ಆಗುತ್ತಿದೆಯೇ’ ಎಂದು ಕೇಳಲಾಗಿದೆ. ಇದಕ್ಕೆ ಪ್ರಭಾಸ್ ಕೂಲ್ ಆಗಿಯೇ ಉತ್ತರಿಸಿದ್ದಾರೆ.

‘ಬಾಹುಬಲಿ 2’ ಬಳಿಕ ಪ್ರಭಾಸ್ ಅಭಿನಯದ ಎರಡು ಬಿಗ್ ಬಜೆಟ್ ಚಿತ್ರಗಳಾದ ‘ಸಾಹೋ’ ಹಾಗೂ ‘ರಾಧೆ ಶ್ಯಾಮ್’ ಚಿತ್ರಗಳು ನೆಲಕಚ್ಚಿದವು. ಈ ಎರಡೂ ಚಿತ್ರಗಳಿಂದ ಪ್ರಭಾಸ್​ ವೃತ್ತಿಜೀವನಕ್ಕೆ ಹಿನ್ನಡೆ ಆಗಿದೆ. ಈಗ ಅವರೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಚಿಂತೆ ಶುರುವಾಗೋದು ಸಹಜ. ‘ಕೆಜಿಎಫ್ 2’ ಯಶಸ್ಸು ಸಹಜವಾಗಿಯೇ ‘ಸಲಾರ್’ ಚಿತ್ರದ ಮೇಲೆ, ಚಿತ್ರತಂಡದ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಆರೀತಿ ಇಲ್ಲ ಅನ್ನೋದು ಪ್ರಭಾಸ್ ಮಾತು.

‘ಒತ್ತಡವೇ?ಪ್ರಶಾಂತ್ ನೀಲ್  ನನ್ನ ನಿರ್ದೇಶಕ. ಅವರು ಬ್ಲಾಕ್​​ಬಸ್ಟರ್ ಕೊಡುತ್ತಿದ್ದಾರೆ ಎಂದರೆ ಅದು ಖುಷಿಯ ವಿಚಾರ ಅಲ್ಲವೇ? ‘ಕೆಜಿಎಫ್ 2’ ಗೆದ್ದಿದ್ದು ಇಡೀ ತಂಡಕ್ಕೆ ಖುಷಿಯ ಸುದ್ದಿ. ನಾವು ಈಗಾಗಲೇ ‘ಸಲಾರ್’ ಶೂಟಿಂಗ್ ಆರಂಭಿಸಿದ್ದೇವೆ. ಒಂದು ದೊಡ್ಡ ನಿರ್ದೇಶಕನ ಜತೆ ಕೆಲಸ ಮಾಡುತ್ತಿರುವ ಖುಷಿ ಇದೆ. ಇಷ್ಟೊಂದು ಖುಷಿಯ ಸುದ್ದಿ ಸಿಕ್ಕಿರುವಾಗ ಮತ್ತೆ ಒತ್ತಡ ಏಕೆ?’ ಎಂದು ಪ್ರಶ್ನೆ ಮಾಡಿದ್ದಾರೆ ಪ್ರಭಾಸ್.

‘ಕೆಜಿಎಫ್ 2’ ರಿಲೀಸ್ ಸಮಯದಲ್ಲೇ ‘ಸಲಾರ್’ ಚಿತ್ರದ ಟೀಸರ್ ಬರಲಿದೆ ಎನ್ನಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಬಾಲಿವುಡ್ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್​ ಅವರು ‘ಸಲಾರ್’ ಟೀಸರ್ ಬಗ್ಗೆ ಅಪ್​ಡೇಟ್​ ನೀಡಿದ್ದರು. ಮೇ ತಿಂಗಳ ಅಂತ್ಯದ ವೇಳೆಗೆ ‘ಸಲಾರ್’ ಟೀಸರ್ ರಿಲೀಸ್ ಆಗಲಿದೆ ಎಂದು ಹೇಳಿದ್ದರು. ಈ ಟೀಸರ್ ಮೂಲಕ ‘ಸಲಾರ್’ ಸಿನಿಮಾ ಹೇಗಿರಲಿದೆ ಎಂಬ ಝಲಕ್ ಸಿಗಲಿದೆ. ಈ ವರೆಗೆ ಚಿತ್ರದ ಪೋಸ್ಟರ್​​ಗಳು ಮಾತ್ರ ರಿಲೀಸ್ ಆಗಿವೆ.

TV9 Kannada


Leave a Reply

Your email address will not be published.