
ಬಾಂಗ್ಲಾದೇಶದಿಂದ ಭಾರತಕ್ಕೆ ಈಜಿ ಬಂದಿರುವ ಕೃಷ್ಣಾ ಮಂಡಲ್
ಈಕೆ ನದಿ ದಾಟಿದ ಹಾದಿಯಲ್ಲಿ ರಾಯಲ್ ಬೆಂಗಾಲ್ ಟೈಗರ್ಗಳಿಗೆ ಹೆಸರುವಾಸಿಯಾದ ಸುಂದರಬನದ ಕಾಡುಗಳಿದ್ದವು.
ಕೊಲ್ಕತ್ತಾ: ಬಾಂಗ್ಲಾದೇಶದ 22 ವರ್ಷದ ಯುವತಿಯೊಬ್ಬಳು ತನ್ನ ಪ್ರೀತಿಯ ಹುಡುಗನನ್ನು ಮದುವೆಯಾಗಲೆಂದು ಸುಮಾರು ಒಂದು ತಾಸು ನದಿ ಈಜಿ ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ. ಈಕೆ ನದಿ ದಾಟಿದ ಹಾದಿಯಲ್ಲಿ ರಾಯಲ್ ಬೆಂಗಾಲ್ ಟೈಗರ್ಗಳಿಗೆ ಹೆಸರುವಾಸಿಯಾದ ಸುಂದರಬನದ ಕಾಡುಗಳಿದ್ದವು. ಬಾಂಗ್ಲಾದೇಶದಿಂದ ಬಂದ ಮಹಿಳೆಯನ್ನು ಕೃಷ್ಣಾ ಮಂಡಲ್ ಎಂದು ಗುರುತಿಸಲಾಗಿದೆ. ಈಕೆ ಪಶ್ಚಿಮ ಬಂಗಾಳದ ಅಭಿಷೇಕ್ ಮಂಡಲ್ನನ್ನು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡಿದ್ದರು. ಆ ಪರಿಚಯವು ನಂತರದ ದಿನಗಳಲ್ಲಿ ಪ್ರೇಮಕ್ಕೆ ತಿರುಗಿತ್ತು. ಬಾಂಗ್ಲಾದ ಯುವತಿ ಕೃಷ್ಣಾ ಬಳಿ ಪಾಸ್ಪೋರ್ಟ್ ಇರಲಿಲ್ಲ. ಹೀಗಾಗಿ ಅವರು ಅಕ್ರಮವಾಗಿಯೇ ಭಾರತದ ಗಡಿ ಪ್ರವೇಶಿಸಲು ಆಕೆ ನಿರ್ಧರಿಸಿದರು.
ತನ್ನ ಪ್ರಿಯಕರನ ಮಡಿಲು ಸೇರುವಲ್ಲಿ ಕೃಷ್ಣಾ ಯಶಸ್ವಿಯಾದಳು. ಮೂರು ದಿನಗಳ ಹಿಂದೆ ಕೊಲ್ಕತ್ತಾದ ಕಾಳಿಘಾಟ್ ದೇಗುಲದಲ್ಲಿ ಅವರ ಮದುವೆಯೂ ಆಯಿತು. ಆದರೆ ದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ನಂತರ ಪೊಲೀಸರು ಅವರನ್ನು ಬಂಧಿಸಿದರು. ಬಾಂಗ್ಲಾದೇಶದ ಹೈಕಮಿಷನ್ ಕಚೇರಿಗೆ ಕೃಷ್ಣಾ ಅವರನ್ನು ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಬಾಂಗ್ಲಾದೇಶದ ಹದಿಹರೆಯದ ಯುವಕ ಇಮಾನ್ ಹುಸೇನ್ ತನ್ನಿಷ್ಟದ ಚಾಕೊಲೇಟ್ ಖರೀದಿಸಲೆಂದು ನದಿ ದಾಟಿ ಭಾರತಕ್ಕೆ ಬಂದಿದ್ದ. ನಂತರ ಈ ಯುವಕನನ್ನು ಬಂಧಿಸಿ, ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು. ನ್ಯಾಯಾಲಯವು ಈ ಯುವಕನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ತಂತಿಬೇಲಿಯಲ್ಲಿ ಇರುವ ಲೋಪವನ್ನು ಗುರುತಿಸಿಕೊಂಡಿರುವ ಬಾಂಗ್ಲಾದೇಶೀಯರು ಈ ಭಾರತಕ್ಕೆ ಹಲವು ಬಾರಿ ಬಂದಿದ್ದಾರೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ