ಬಿಗ್‍ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಚಕ್ರವರ್ತಿ ಚಂದ್ರಚೂಡ್ ಕೊಂಚ ಡಿಫರೆಂಟ್ ಆಗಿದ್ದಾರೆ. ಆದರೆ ಈ ಬಾರಿ ಚಕ್ರವರ್ತಿ ಮಾಡಿರುವ ಒಂದು ಸನ್ನೆಯಿಂದ ಬಿಗ್‍ಬಾಸ್ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಿಗ್‍ಬಾಸ್‍ನಲ್ಲಿ ಚಕ್ರವರ್ತಿ ಚಂದ್ರಚೂಡ್ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಅವರು ಅಶ್ಲೀಲ ಪದ ಬಳಕೆ ಮಾಡಿದ್ದರಿಂದ ಬೀಪ್ ಸೌಂಡ್ ಹಾಕಲಾಗಿತ್ತು. ಇದಕ್ಕೆ ಕಿಚ್ಚ ಸುದೀಪ್ ಅಸಮಾಧಾನ ಹೊರ ಹಾಕಿದ್ದರು. ಚಕ್ರವರ್ತಿ ಅವರೇ ನಿಮಗೆ ಇರುವ ಜ್ಞಾನಕ್ಕೆ ಇದು ಸಲ್ಲುವುದಿಲ್ಲ ಎಂದಿದ್ದರು. ಅದಾದ ನಂತರದಲ್ಲಿ ನಾನು ತಪ್ಪನ್ನು ತಿದ್ದಿಕೊಳ್ಳುತ್ತೇನೆ ಎಂದಿದ್ದರು ಚಕ್ರವರ್ತಿ. ಇದಾದ ಒಂದೇ ವಾರದಲ್ಲಿ ಅವರು ಮತ್ತೆ ಅದೇ ತಪ್ಪನ್ನು ಮಾಡಿದ್ದಾರೆ.

ಪ್ರಿಯಾಂಕಾ ಹಾಗೂ ಚಕ್ರವರ್ತಿ ನಡುವೆ ಒಂದು ಗೆಳೆತನ ಬೆಳೆದಿತ್ತು. ಆದರೆ ಬಿಗ್‍ಬಾಸ್ ಮನೆಯಲ್ಲಿ ಅದು ದಿಕ್ಕು ಬದಲಿಸಿಕೊಂಡಿತ್ತು. ಪ್ರಿಯಾಂಕಾ, ಶಮಂತ್ ಅನ್ಯೋನ್ಯವಾಗಿದ್ದಾರೆ ಎನ್ನುವುದೇ ಚಕ್ರವರ್ತಿ ಬೇಸರಕ್ಕೆ ಕಾರಣವಾಗಿತ್ತು. ಈ ಘಟನೆ ನಂತರದಲ್ಲಿ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡುತ್ತಿರಲಿಲ್ಲ. ಈ ಜಗಳ ವಿಚಾರ ಸುದೀಪ್ ಮುಂದೆ ಕೂಡಾ ಪ್ರಸ್ತಾಪವಾಗಿತ್ತು. ಸುದೀಪ್ ಅವರು ಇಬ್ಬರಿಗೂ ಬುದ್ಧವಾದವನ್ನು ಹೇಳಿ ರಾಜಿ ಮಾಡಿಸಿದ್ದರು. ಆದರೆ ಮತ್ತೆ ಅದೇ ಮುನಿಸು, ಜಗಳ ಮತ್ತೆ ಮಂದುವರಿದಿತ್ತು.

ಪ್ರಿಯಾಂಕಾ ತಿಮ್ಮೇಶ್ ಔಟ್ ಆಗಿದ್ದು ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅವರಿಗೆ ಬಿಗ್‍ಬಾಸ್ ವಿಶೇಷ ಅಧಿಕಾರ ಒಂದನ್ನು ನೀಡಿದ್ದರು. ಅದರನ್ವಯ ಒಬ್ಬರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಬೇಕು. ಆಗ ಪ್ರಿಯಾಂಕಾ ತೆಗೆದುಕೊಂಡ ಹೆಸರು ಚಕ್ರವರ್ತಿ ಚಂದ್ರಚೂಡ್ ಅವರದ್ದು. ಇದು ಚಕ್ರವರ್ತಿ ಚಂದ್ರಚೂಡ್‍ಗೆ ಅಸಮಾಧಾನ ತರಿಸಿದೆ. ಹೀಗಾಗಿ ಪ್ರಿಯಾಂಕಾಗೆ ಅವರು ಮಧ್ಯದ ಬೆರಳು ತೋರಿಸಿ ಅಶ್ಲೀಲ ಸನ್ನೆ ಮಾಡಿದ್ದಾರೆ.

ಚಕ್ರವರ್ತಿ ಚಂದ್ರಚೂಡ್ ಎಷ್ಟೇ ಹೇಳಿದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುವಂತೆ ಕಾಣುತ್ತಿಲ್ಲ. ಪದೇ ಪದೇ ಬಿಗ್‍ಬಾಸ್ ಚೌಕಟ್ಟನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೆ ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಈ ಬಾರಿ ಬಿಗ್‍ಬಾಸ್ ನಿಯಮವನ್ನು ಮತ್ತೆ ಮೀರಿದ್ದಾರೆ. ಅಷ್ಟೇ ಅಲ್ಲ ವೀಕ್ಷಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಈ ವಾರದ ವೀಕೆಂಡ್‍ನಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ.

The post ಪ್ರಿಯಾಂಕಾಗೆ ಅಶ್ಲೀಲ ಸನ್ನೆ – ಚಕ್ರವರ್ತಿ ವಿರುದ್ಧ ವೀಕ್ಷಕರು ಗರಂ appeared first on Public TV.

Source: publictv.in

Source link