‘ಸೆಕೆಂಡ್ ಹಾಫ್’ ಸಿನಿಮಾದಲ್ಲಿ ಕಾನ್ಸ್ಟೇಬಲ್ ಆಗಿದ್ದವರು ‘ಉಗ್ರಾವತಾರ’ ಚಿತ್ರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮಿಂಚು ಹರಿಸುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ. ಆ್ಯಕ್ಷನ್ ಕ್ವೀನ್ ಆಗೋ ಎಲ್ಲಾ ಲಕ್ಷಣಗಳನ್ನ ‘ಉಗ್ರಾವತಾರ’ ಚಿತ್ರದಲ್ಲಿ ತೋರುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ.. ಈಗ ಉಪ್ಪಿ ಅವರ ಮಡದಿಯ ‘ಉಗ್ರಾವತಾರ’ಕ್ಕೆ ಸಲಗ ಸಿನಿಮಾ ಖ್ಯಾತಿಯ ‘‘ಟಿಣಿಂಗ ಮಿಣಿಂಗ ಟಿಶ್ಯಾ’’ ಸಾಂಗ್ನ ಸಿದ್ಧಿ ಸಿಸ್ಟರ್ಸ್ ಸಾಥ್ ನೀಡಿದ್ದಾರೆ.
ದುನಿಯಾ ವಿಜಯ್ ಹಂಗೆ ಸುಮ್ನೆ ಯಲ್ಲಾಪುರದ ಮಂಚಿಕೇರೆ ಗ್ರಾಮಕ್ಕೆ ಹೋದಾಗ ಗೀತಾ ಸಿದ್ಧಿ, ಗಿರಿಜಾ ಸಿದ್ದಿ ಗಾಯನವನ್ನ ಕೇಳಿ ಫಿದಾ ಆದ್ರು.. ಇವ್ರ ಹಾಡನ್ನ ಯಾಕೆ ನಮ್ಮ ಸಲಗ ಸಿನಿಮಾದಲ್ಲಿ ಬಳಸ ಬಾರದು ಅಂತ ಸ್ಕೆಚ್ ಹಾಕಿ ಮಂಚಿಕೇರೆ ಗ್ರಾಮದಿಂದ ಬೆಂಗಳೂರಿನ ಚರಣ್ ರಾಜ್ ಸ್ಟುಡಿಯೋಗೆ ಸಿದ್ಧಿ ಸಿಸ್ಟರ್ಸ್ರನ್ನ ಕರೆಸಿ ಹಾಡಿಸಿಯೇ ಬಿಟ್ಟರು. ಅಲ್ಲಿಗೆ ಸಲಗ ಸಿನಿಮಾದ ದೆಸೆಯೆ ಬದಲಾಗಿ ಹೋಯ್ತು. ‘‘ಟಿಣಿಂಗ ಮಿಣಿಂಗ ಟಿಶ್ಯಾ’’ ಹಾಡು ಸ್ಟಾರ್ಗಳಿಂದ ಸಾಮಾನ್ಯರ ತನಕ ಇಷ್ಟ ಪಟ್ಟು ಕುಣಿಯೊಂಗೆ ಆಯ್ತು. ಇದೇ ಸಿದ್ಧಿ ಸಿಸ್ಟರ್ಸ್ ಸದ್ಯ ಪ್ರಿಯಾಂಕಾ ಉಪೇಂದ್ರ ಅವರ ಪರ ನಿಂತಿದ್ದಾರೆ.
ಈ ಹಾಡು ಬಸೋಬಿ ಸಾಹಿತ್ಯದ ಕೊಂಕಣಿ ಭಾಷೆಯಲ್ಲಿ ಇರುವ ಹಾಡು. ‘ಅಯ್ಯೋ ಮಾಜೋದೇವ, ಅಯ್ಯೋಯ್ಯೋ ಮಾಜೋದೇವ’ ಕೊಂಕಣಿಯ ಈ ಸಾಲು ಕನ್ನಡದಲ್ಲಿ ಅಯ್ಯೋ ನನ್ನ ದೇವರೆ, ನಾವು ಕಷ್ಟದಲ್ಲಿ ಇದ್ದೇವೆ ನಮ್ಮನ್ನು ಬಂದು ಕಾಪಾಡಿ’ ಎಂದು ಅರ್ಥ ಕೊಡುತ್ತದೆ. ಈ ಹಾಡನ್ನ ಸಿದ್ಧಿ ಸಿಸ್ಟರ್ಸ್ ಸೊಗಸಾಗಿ ತಮ್ಮದೆ ಶೈಲಿಯಲ್ಲಿ ಹಾಡಿ ಮುಗಿಸಿದ್ದಾರೆ.
ರಾಧಾಕೃಷ್ಣ ಬಸ್ರೂರು ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ ಈ ಹಾಡಿನ ರೆಕಾರ್ಡಿಂಗ್ ಕಾರ್ಯ ಕೆಲ ದಿನಗಳ ಹಿಂದೆ ಆಗಿದೆ. ಗುರುಮೂರ್ತಿ ನಿರ್ದೇಶನದ ಉಗ್ರಾವತಾರ ಚಿತ್ರವನ್ನ ಎಸ್.ಜಿ.ಸತೀಶ್ ನಿರ್ಮಾಣ ಮಾಡ್ತಿದ್ದಾರೆ. ಉಗ್ರಾವತಾರ ಚಿತ್ರದ ತಾರಾಂಗಣದಲ್ಲಿ ಸುಮನ್, ಪವಿತ್ರಾ ಲೋಕೇಶ್, ಶೋಭಾ, ನಟರಾಜ್ ಮುಂತಾದವರು ಅಭಿನಯಿಸಿದ್ದಾರೆ. ಕೊನೆಯ ಹಂತದ ಶೂಟಿಂಗ್ನ್ನು ಸದ್ಯದಲ್ಲೆ ಶುರು ಮಾಡಿ ಇನ್ನೆರಡು ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಉಗ್ರಾವತಾರ ತಂಡ ಪ್ಲಾನ್ ಮಾಡಿಕೊಂಡಿದೆ.