ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ಕ್ಕೆ ಗಿರಿಜಾ ಸಿದ್ದಿ ಸಾತ್​; ಬರುತ್ತಿದೆ ಮತ್ತೊಂದು ಕೊಂಕಣಿ ಸಾಂಗ್ | Girija Siddi to Sung new Konkani Song for Priyanka Chopra Starrer Ugravatara Movie


ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ಕ್ಕೆ ಗಿರಿಜಾ ಸಿದ್ದಿ ಸಾತ್​; ಬರುತ್ತಿದೆ ಮತ್ತೊಂದು ಕೊಂಕಣಿ ಸಾಂಗ್

ಪ್ರಿಯಾಂಕ ಉಪೇಂದ್ರ ‘ಉಗ್ರಾವತಾರ’ಕ್ಕೆ ಗಿರಿಜಾ ಸಿದ್ದಿ ಸಾತ್

ದುನಿಯಾ ವಿಜಯ್​ (Duniya Vijay) ನಟನೆಯ ‘ಸಲಗ’ ಸಿನಿಮಾದ (Salaga Movie) ಪ್ರಮೋಷನಲ್​ ಸಾಂಗ್​ ‘ಟಿಣಿಂಗ ಮಿಣಿಂಗ ಟಿಶ್ಯಾ..’ ಹಾಡು ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿತ್ತು. ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಗೀತಾ ಸಿದ್ದಿ ಮತ್ತು ಗಿರಿಜಾ ಸಿದ್ದಿ ಈ ಹಾಡನ್ನು ಹಾಡಿದ್ದರು. ಅವರ ಧ್ವನಿ ಹಾಡಿಗೆ ಅದ್ಭುತವಾಗಿ ಒಪ್ಪಿತ್ತು. ಈಗ ಇದೇ ಸಹೋದರಿಯರಿಂದ ಮತ್ತೊಂದು ವಿಶೇಷ ಹಾಡು ಮೂಡಿ ಬರುತ್ತಿದೆ. ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಉಗ್ರಾವತಾರ’ ಚಿತ್ರದ ಪ್ರಮೋಷನಲ್​ ಸಾಂಗ್​ ಅನ್ನು ಗೀತಾ ಸಿದ್ದಿ ಹಾಗೂ ಗಿರಿಜಾ ಸಿದ್ದಿ ಬರೆದು ಹಾಡಿದ್ದಾರೆ.

‘ಉಗ್ರಾವತಾರ’ ಚಿತ್ರದಲ್ಲಿ ಖಡಕ್ ಪೋಲೀಸ್ ಇನ್ಸ್‌ಪೆಕ್ಟರ್ ಆಗಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ವಿಶೇಷ ಪ್ರಮೋಷನ್​ ಸಾಂಗ್​ ಒಂದನ್ನು ನಿರ್ದೇಶಕ ಗುರುಮೂರ್ತಿ ಪ್ಲ್ಯಾನ್​ ಮಾಡಿದ್ದಾರೆ. ಈ ಹಾಡನ್ನು ಗಿರಿಜಾ ಸಿದ್ದಿ ಅವರೇ ಬರೆದಿದ್ದು, ರಾಧಾಕೃಷ್ಣ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಕೊಂಕಣಿ, ಉರ್ದು ಹಾಗೂ ಕನ್ನಡ ಸಾಹಿತ್ಯವನ್ನು ಈ ಹಾಡು ಹೊಂದಿದೆ. ‘ಅಯ್ಯೋ ಮಾಜೋದೇವ, ಅಯ್ಯೋಯ್ಯೋ ಮಾಜೋದೇವ’ ಎಂಬ ಗೀತೆ ಇದಾಗಿದ್ದು, ‘ಅಯ್ಯೋ ನನ್ನ ದೇವರೆ, ನಾವು ಕಷ್ಟದಲ್ಲಿ ಇದ್ದೇವೆ ನಮ್ಮನ್ನು ಬಂದು ಕಾಪಾಡು..’ ಎನ್ನುವ ಅರ್ಥವನ್ನು ಈ ಹಾಡು ನೀಡುತ್ತದೆ.

‘ಎರಡು ದಿನಗಳ ಹಿಂದೆ ಈ ಹಾಡಿನ ರೆಕಾರ್ಡಿಂಗ್​ ಆಗಿದೆ. ‘ಸಲಗ’ ಹಾಡು ಹಿಟ್​ ಆದ ನಂತರ ನಮಗೂ ಒಂದು ಪ್ರಮೋಷನಲ್​ ಸಾಂಗ್​ ಮಾಡಿಕೊಡಬೇಕು ಎಂದು ಗಿರಿಜಾ ಸಿದ್ದಿ ಬಳಿ ಕೇಳಿಕೊಂಡೆವು. ಅವರಿಗೆ ನಮ್ಮ ಸಿನಿಮಾದ ಕಂಟೆಂಟ್​ ಇಷ್ಟ ಆಯಿತು. ಅವರು ಅದಕ್ಕೆ ಒಪ್ಪಿಕೊಂಡರು. ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಇದೇ ತಿಂಗಳಲ್ಲೇ ಶೂಟಿಂಗ್​ ನಡೆಯಲಿದೆ. ಇದಕ್ಕೆ ಸೆಟ್​ ಹಾಕಬೇಕು. ಮೂರು ದಿನ ಚಿತ್ರೀಕರಣ ಮಾಡುವ ಪ್ಲ್ಯಾನ್​ ಮಾಡಿದ್ದೇವೆ. ಸಿದ್ದಿ ತಂಡ ಮತ್ತು ಪ್ರಿಯಾಂಕಾ ಉಪೇಂದ್ರ ಅವರು ಈ ಹಾಡಿನಲ್ಲಿ ಇರುತ್ತಾರೆ. ಈ ಹಾಡು ಸಿನಿಮಾದಲ್ಲೂ ಬರಲಿದೆ’ ಎಂದಿದ್ದಾರೆ ನಿರ್ದೇಶಕ ಗುರುಮೂರ್ತಿ.

‘ಸಮಾಜ ಕೆಟ್ಟು ಹೋಗಿದೆ, ಬಂದು ಕಾಪಾಡು ಎಂದು ದೇವರ ಬಳಿ ಕೋರಿಕೊಳ್ಳುವ ಸಂದರ್ಭದಲ್ಲಿ ಈ ಹಾಡು ಬರುತ್ತದೆ. ಪ್ರಿಯಾಂಕಾ ಉಪೇಂದ್ರ ಅವರು ಈ ಹಾಡನ್ನು ತುಂಬಾನೇ ಇಷ್ಟಪಟ್ಟಿದ್ದಾರೆ. ಹಾಡಿನ ರೆಕಾರ್ಡಿಂಗ್​ ವೇಳೆ ಪ್ರಿಯಾಂಕಾ ಕೂಡ ಇನ್ವಾಲ್​ ಆಗಿಬಿಟ್ಟಿದ್ದರು. ಶೀಘ್ರದಲ್ಲೇ ಈ ಬಗ್ಗೆ ಅಪ್​ಡೇಟ್​ ನೀಡುತ್ತೇವೆ’ ಎಂದು ಹಾಡಿನ ಬಗ್ಗೆ ಮಾಹಿತಿ ನೀಡುತ್ತಾರೆ ಗುರುಮೂರ್ತಿ.

ತಾರಗಣದಲ್ಲಿ ಸುಮನ್, ಪವಿತ್ರಾ ಲೋಕೇಶ್, ಶೋಭ, ನಟರಾಜ್ ಮುಂತಾದವರು ಇದ್ದಾರೆ.  ನಂದಕುಮಾರ್ ಛಾಯಾಗ್ರಹಣ, ಕಿನ್ನಾಳ್‌ರಾಜ್ ಸಾಹಿತ್ಯ ಮತ್ತು ಸಂಭಾಷಣೆ, ವಿನೋಧ್-ಮಾಸ್‌ಮಾದ-ಅಶೋಕ್ ಸಾಹಸ, ವೆಂಕಿ.ಯುಡಿವಿ ಸಂಕಲನ ಚಿತ್ರಕ್ಕಿದೆ. ಸಿನಿಮಾದ ಬಹುತೇಕ ಶೂಟಿಂಗ್​ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾ ರಿಲೀಸ್​ ಮಾಡೋ ಆಲೋಚನೆ ಚಿತ್ರತಂಡದ್ದು.

TV9 Kannada


Leave a Reply

Your email address will not be published. Required fields are marked *