ಪ್ರಿಯಾಂಕ್​ ಖರ್ಗೆಯನ್ನು ತನಿಖೆಗೆ ಒಳಪಡಿಸಬೇಕು; ಸಚಿವ ಸುನೀಲ್ ಕುಮಾರ್ ಆಗ್ರಹ | Minister Sunil Kumar has demanded an investigation into mla Priyank kharge


ಪ್ರಿಯಾಂಕ್​ ಖರ್ಗೆಯನ್ನು ತನಿಖೆಗೆ ಒಳಪಡಿಸಬೇಕು; ಸಚಿವ ಸುನೀಲ್ ಕುಮಾರ್ ಆಗ್ರಹ

ಸಚಿವ ಸುನೀಲ್ ಕುಮಾರ್

ಬೆಂಗಳೂರು: ಪಿಎಸ್ಐ ಅಕ್ರಮದ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್​​ ಖರ್ಗೆ (Priyanka Kharg) ನಿನ್ನೆ ಒಂದು ಆಡಿಯೋ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಈ ಅಕ್ರಮದ ಬಗ್ಗೆ ತನಿಖೆ ನಡೆಯಬೇಕು ಅಂತ ಒತ್ತಾಯಿಸಿದ್ದಾರೆ. ಸರ್ಕಾರಕ್ಕೆ ಮಾಹಿತಿ ನೀಡಿ ಈ ಅಕ್ರಮ ಎಸಗಿದ್ದಾರೆ ಅಂತ ಹೇಳಿದ್ದರು. ಇವರ ವಿರುದ್ಧವೇ ಬಿಜೆಪಿ (BJP) ಬಾಣ ಬೀಸಿದೆ. ಸಚಿವ ಸುನೀಲ್ ಕುಮಾರ್ ಪ್ರಿಯಾಂಕ ಖರ್ಗೆಯನ್ನೇ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ. ಈ ಪ್ರಕರಣದ ತನಿಖೆ ಪೂರ್ಣವಾಗಬೇಕಾದರೆ ಪ್ರಿಯಾಂಕ್​ ಖರ್ಗೆ ಅವರನ್ನು ತನಿಖೆಗೆ ಒಳಪಡಿಸಬೇಕು. ಇಲ್ಲವಾದರೆ ತನಿಖೆ ಪೂರ್ಣವಾಗುವುದಿಲ್ಲ ಅಂತ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಪಿಎಸ್ಐ ನೇಮಕದಲ್ಲಿ ನಡೆದಿದೆ ಎಂದು ಹೇಳಲಾದ ಅಕ್ರಮದಲ್ಲಿ ಕಾಂಗ್ರೆಸ್ ನಾಯಕರು ತಾನು ಕಳ್ಳ ಪರರ ನಂಬೆ ಎಂಬಂತೆ ವರ್ತಿಸುತ್ತಿದ್ದಾರೆ. ಇದೀಗ ಹೊರ ಬೀಳುತ್ತಿರುವ ದಾಖಲೆಗಳು, ಶಾಮೀಲಾದ ವ್ಯಕ್ತಿಗಳು, ಬಂಧನಕ್ಕೆ ಒಳಗಾದ ವ್ಯಕ್ತಿಗಳ ಹಿನ್ನೆಲೆಯೆಲ್ಲವೂ ಕಾಂಗ್ರೆಸ್ ಮಯವಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಮುಖಂಡರೇ ಈ ಜಾಲದಲ್ಲಿ ಸಕ್ರಿಯವಾಗಿರುವುದನ್ನು ನೋಡಿದರೆ ಇದರಲ್ಲಿ ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರು ಭಾಗಿಯಾಗಿರಬಹುದು ಎಂಬ ಅನುಮಾನ ದಟ್ಟವಾಗುತ್ತಿದೆ ಅಂತ ಸಚಿವರು ಹೇಳಿದರು.

ಕಾಂಗ್ರೆಸ್ ಶಾಸಕರು, ಮಾಜಿ ಸಚಿವರು ಆದ ಪ್ರಿಯಾಂಕ್ ಖರ್ಗೆಯವರು ಈ ಪ್ರಕರಣದಲ್ಲಿ ಆಡಿಯೋ ಬಾಂಬ್ ಸ್ಫೋಟಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಹಗರಣದಲ್ಲಿ ಸಿಕ್ಕಿ ಬೀಳುತ್ತಿರುವ ಆರೋಪಿಗಳೆಲ್ಲರೂ ಅವರ ಮನೆ ಸುತ್ತ ಗಿರಕಿ ಹೊಡೆಯುವವರೇ ಆಗಿದ್ದಾರೆ. ಮಹಾಂತೇಶ್ ಪಾಟೀಲ್ ಹಾಗೂ ಅವರ ಸೋದರ ಖರ್ಗೆ ಕುಟುಂಬ ಹಾಗೂ ಕಾಂಗ್ರೆಸ್ ಜತೆಗೆ ಹೊಂದಿರುವ ಸಾಂಗತ್ಯ ಎಂಥದ್ದು ಎಂದು ಪ್ರಿಯಾಂಕ ಖರ್ಗೆಯವರೇ ನಾಡಿಗೆ ಸ್ಪಷ್ಟಪಡಿಸಬೇಕು. ಇಲ್ಲವಾದರೆ ಬೀದರ್ – ಗುಲ್ಬರ್ಗ ಭಾಗದಲ್ಲಿ ಕೇಳಿ ಬರುತ್ತಿರುವ ಗಾಳಿ ಸುದ್ದಿಯನ್ನು ಜನ ನಿಜವೆಂದು ಭಾವಿಸಬೇಕಾಗುತ್ತದೆ ಎಂದರು.

ಈ ಪ್ರಕರಣವನ್ನು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಯಂ ಪ್ರೇರಣೆಯಿಂದ ತನಿಖೆಗೆ ಒಪ್ಪಿಸಿದ್ದಾರೆ. ಆರೋಪಿಗಳು ಯಾರೇ ಆದರೂ ಅವರು ಕಾನೂನು ಪರಿಧಿಗೆ ತರಲಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆದರೆ ಪ್ರಿಯಾಂಕ್ ಖರ್ಗೆ ಅವರು ಹೇಳುತ್ತಿರುವ ದಿನಕ್ಕೊಂದು ಸುಳ್ಳಿಗೆ ಯಾವುದೇ ಅರ್ಥವಿಲ್ಲ. ಪ್ರತಿ ದಿನವೂ ಅವರು ಮಾಡುತ್ತಿರುವ ಸದ್ದನ್ನು ಗಮನಿಸಿದರೆ ಇದು ಅಟೆನ್ಷನ್ ಡೈವರ್ಶನ್ ತಂತ್ರದಂತೆ ಕಾಣುತ್ತಿದೆ ಅಂತ ಸುನೀಲ್ ಕುಮಾರ್ ಅಭಿಪ್ರಾಯಪಟ್ಟರು.

ನಿಮ್ಮ ಆಪ್ತರ ಬಗ್ಗೆ ಮೊದಲು ದಾಖಲೆ ಕೊಡಿ. ಎಲ್ಲವೂ ಬುಕ್ ಆಗಿದೆ ಎಂದು ಉಡಾಫೆ ಹೇಳಿಕೆ ಬದಲು ದಾಖಲೆ ಒದಗಿಸುವುದು ಸೂಕ್ತ ಅಂತ ಸುನಿಲ್ ಕುಮಾರ್ ಆಗ್ರಹಿಸದ್ದಾರೆ.

TV9 Kannada


Leave a Reply

Your email address will not be published.