ಪ್ರಿಯಾಂಕ್ ಖರ್ಗೆ ವಸೂಲಿ ಕಿಂಗ್, ಬಿಟ್ ಕಾಯಿನ್ ದಂಧೆ ಕುರಿತು ದಾಖಲೆಯಿದ್ದರೆ ಬಹಿರಂಗಪಡಿಸಲಿ; ಸಚಿವ ಈಶ್ವರಪ್ಪ ಸವಾಲ್ | Karnataka Crypto Scam KS Eshwarappa and Other BJP Leaders Hits Back to Priyank Kharge over Bitcoin Scam Allegation


ಪ್ರಿಯಾಂಕ್ ಖರ್ಗೆ ವಸೂಲಿ ಕಿಂಗ್, ಬಿಟ್ ಕಾಯಿನ್ ದಂಧೆ ಕುರಿತು ದಾಖಲೆಯಿದ್ದರೆ ಬಹಿರಂಗಪಡಿಸಲಿ; ಸಚಿವ ಈಶ್ವರಪ್ಪ ಸವಾಲ್

ಸಚಿವ ಕೆ.ಎಸ್.ಈಶ್ವರಪ್ಪ (ಸಂಗ್ರಹ ಚಿತ್ರ)

ಕೊಪ್ಪಳ: ಬಿಟ್ ಕಾಯಿನ್ ದಂಧೆಯ (Bitcoin Scam) ತನಿಖೆ ಪಾರದರ್ಶಕವಾಗಿ ನಡೆದರೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ. ಬಿಜೆಪಿಯಲ್ಲಿ ಮೂರನೇ ಹೊಸ ಮುಖ್ಯಮಂತ್ರಿ ನೇಮಕವಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa), ಕಾಂಗ್ರೆಸ್‌ನವರು ಬದುಕಿದ್ದೇವೆಂದು ತೋರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬಿಟ್ ಕಾಯಿನ್ ದಂಧೆ ಬಗ್ಗೆ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಸ್ಪರ್ಧಾತ್ಮಕವಾಗಿ ಮಾತನಾಡುತ್ತಿದ್ದಾರೆ. ನಾ ಮುಂದು ತಾ ಮುಂದು ಎಂದು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ (Siddaramaiah), ಡಿಕೆಶಿ (DK Shivakumar) ಬಳಿಕ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಮಾತಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಬೇಜವ್ದಾರಿಯಾಗಿ ಮಾತನಾಡಿದ್ದಾರೆ. ಬಿಟ್ ಕಾಯಿನ್ ದಂಧೆ ಬಗ್ಗೆ ಚೂರು ಪೇಪರ್ ಇದ್ರೂ ಬಹಿರಂಗಪಡಿಸಲಿ. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆ ಭಾಗದಲ್ಲಿ ವಸೂಲಿ ಕಿಂಗ್ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಹ್ಯಾಕರ್ ಶ್ರೀಕಿಯಿಂದ ಜಪ್ತಿ ಮಾಡಿದ ಬಿಟ್‌ ಕಾಯಿನ್ ಎಲ್ಲಿ? 35 ಬಿಟ್ ಕಾಯಿನ್‌ಗಳನ್ನು ಜಪ್ತಿ ಮಾಡಿದ್ದಾಗಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಈ ಹಗರಣದ ತನಿಖೆಯನ್ನು ಉನ್ನತ ಮಟ್ಟದ ಸಮಿತಿಗೆ ವಹಿಸಲು ವಿಳಂಬವೇಕೆ? ಈ ಹಗರಣದಲ್ಲಿ ಸಿಎಂ ಭಾಗಿಯಾಗಿದ್ದಾರೆ ಎಂದು ಹೇಳುತ್ತಿಲ್ಲ. ಈ ಹಗರಣದ ಪಾರದರ್ಶಕ ತನಿಖೆಯಾದರೆರಾಜ್ಯದಲ್ಲಿ ಮತ್ತೆ ಬಿಜೆಪಿಯ 3ನೇ ಮುಖ್ಯಮಂತ್ರಿಯನ್ನು ನೋಡುತ್ತೇವೆ. ಇದರಲ್ಲಿ ಯಾಱರು ಇದ್ದಾರೆಂದು ತನಿಖಾಧಿಕಾರಿಗಳಿಗೆ ಗೊತ್ತಿದೆ. ಸರಿಯಾದ ತನಿಖಾ ಏಜೆನ್ಸಿಗೆ ನೀಡಿದರೆ ಪ್ರಕರಣ ಬಯಲಾಗುತ್ತದೆ. ಈ ಹಗರಣದಲ್ಲಿ ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಇದು ಕೇವಲ 200-300 ಕೋಟಿ ರೂಪಾಯಿಯ ಹಗರಣವಲ್ಲ. ಬಿಜೆಪಿಯವರು ಕ್ರಿಪ್ಟೋ ಕರೆನ್ಸಿಯಲ್ಲಿ ಲಂಚ ತೆಗೆದುಕೊಂಡಿದ್ದಾರೆ. ಡ್ರಗ್ಸ್ ಕೇಸ್ ಸೇರಿ ಎಲ್ಲ ಕೇಸ್ ಮುಚ್ಚಿಹಾಕಲು ಲಂಚ ಪಡೆದಿದ್ದಾರೆ ಎಂದು ಟಿವಿ9ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದರು.

ಈ ಕುರಿತು ಕೊಪ್ಪಳದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕೂಡ ಪ್ರತಿಕ್ರಿಯಿಸಿದ್ದು, ಬಿಟ್ ಕಾಯಿನ್ ದಂಧೆಯಲ್ಲಿ ಯಾರೇ ಇದ್ರೂ ಕಿತ್ತೆಸೆಯುತ್ತೇವೆ. ಮಂತ್ರಿಗಳು ಯಾರೇ ಇದ್ರೂ ಒಂದು ಕ್ಷಣವೂ ಅವರನ್ನು ನಮ್ಮ ಸರ್ಕಾರದಲ್ಲಿ ಇಟ್ಟುಕೊಳ್ಳುವುದಿಲ್ಲ. ಪ್ರಿಯಾಂಕ್ ಖರ್ಗೆ ವಸೂಲಿ ಕಿಂಗ್ ಹೊರತೂ ಬಿಜೆಪಿ ನಾಯಕರಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಯಾವ ವಸೂಲಿಯನ್ನೂ ಮಾಡಲ್ಲ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾಗಲ್ಲ. ಬಸವರಾಜ ಬೊಮ್ಮಾಯಿಯವರೇ ಸಿಎಂ ಆಗಿ ಇರುತ್ತಾರೆ ಎಂದು ಹೇಳಿದ್ದಾರೆ.

ದಾಖಲೆ ಬಿಡುಗಡೆಗೆ ಡಿಕೆಶಿ ಒತ್ತಾಯ:

ಪ್ರಿಯಾಂಕ್ ಖರ್ಗೆ ಆರೋಪದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದು, ಪ್ರಿಯಾಂಕ್ ಖರ್ಗೆ ಹೇಳಿಕೆಯ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಪಕ್ಷದ ನಿಲುವು ಏನೆಂಬುದನ್ನು ನಾನು ಈಗಾಗಲೇ ತಿಳಿಸಿದ್ದೇನೆ. ಬಿಟ್ ಕಾಯಿನ್ ದಂಧೆ ಪ್ರಕರಣದ ಕುರಿತು ಸರ್ಕಾರ ದಾಖಲೆ ಬಿಡುಗಡೆ ಮಾಡಲಿ ಎಂದು ಡಿಕೆಶಿ ಒತ್ತಾಯಿಸಿದ್ದಾರೆ.

ಬಿಟ್ ಕಾಯಿನ್​​ ಹಗರಣದಲ್ಲಿ ಪ್ರಿಯಾಂಕ್​​ ಆರೋಪ ವಿಚಾರವಾಗಿ ಬೆಂಗಳೂರಿನಲ್ಲಿ ವಸತಿ ಇಲಾಖೆ ಸಚಿವ ವಿ. ಸೋಮಣ್ಣ ಹೇಳಿಕೆ ನೀಡಿದ್ದು, ಪ್ರಿಯಾಂಕ್​​ ಖರ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಗ. ಅವರು ಈ ಹಗರಣದ ಬಗ್ಗೆ ಮಾಹಿತಿ ತಿಳಿದುಕೊಂಡು ಮಾತನಾಡಲಿ. ತಮ್ಮ ಗೌರವ, ಗಾಂಭೀರ್ಯತೆ ಅರ್ಥ ಮಾಡಿಕೊಂಡು ಮಾತಾಡಲಿ. ಈ ಆರೋಪದಲ್ಲಿ ಸುಳ್ಳು, ಷಡ್ಯಂತ್ರ ಅಪಪ್ರಚಾರ ಇದೆ ಎಂದು ಆರೋಪಿಸಿದ್ದಾರೆ.

ಬಿಟ್ ಕಾಯಿನ್ ಅಂದ್ರೆ ಏನು ಅಂತ ನೀವೇ ಹೇಳಬೇಕು. ನನಗೆ ರಿಸರ್ವ್ ಬ್ಯಾಂಕ್ ಕಾಯಿನ್ ಮಾತ್ರ ಗೊತ್ತು. ಬಿಟ್ ಕಾಯಿನ್ ಅಂದ್ರೆ ಏನು ಅಂತ ಗೊತ್ತಿಲ್ಲ. ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಾಯಿ ಚಪಲಕ್ಕೆ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ದೊಡ್ಡವರ ಹೆಸರು ಹೇಳಿ ಪ್ರಚಾರ ಪಡೆಯೋದು ನಿಲ್ಲಿಸಲಿ ಎಂದು ಬೆಂಗಳೂರಿನಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ ಸಿಎಂ ಬಲಿ ಪಡೆಯುತ್ತೆ; ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ

ಬಿಟ್ ಕಾಯಿನ್ ದಂಧೆ: ಸಿದ್ದರಾಮಯ್ಯ, ಸೋಮಣ್ಣ ಆರೋಪ ಪ್ರತ್ಯಾರೋಪ

TV9 Kannada


Leave a Reply

Your email address will not be published. Required fields are marked *