– ಲವ್ ಸ್ಟೋರಿ ಬೆಳಕಿಗೆ ಬಂದಿದ್ದು ಹೇಗೆ..?

ಪಾಲಕ್ಕಾಡ್(ಕೇರಳ): ವ್ಯಕ್ತಿಯೊಬ್ಬ ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಪ್ರಿಯತಮೆಯನ್ನು ಬರೋಬ್ಬರಿ 10 ವರ್ಷಗಳ ಕಾಲ ಕೋಣೆಯಲ್ಲೇ ಬಂಧಿಸಿಟ್ಟಿದ್ದ ವಿಚಿತ್ರ ಹಾಗೂ ಅಪರೂಪದ ಘಟನೆಯೊಂದು ಕೇರಳದ ಪಾಲಕ್ಕಾಡ್ ನಲ್ಲಿ ಬೆಳಕಿಗೆ ಬಂದಿದೆ.

ಹೌದು, ಪಾಲಕ್ಕಾಡ್ ಜಿಲ್ಲೆಯ ಅಯಲೂರಿನ ನಿವಾಸಿ 18 ವರ್ಷದ ಸಂಜಿತಾ ತನ್ನ ಮನೆಯ ಪಕ್ಕದ ರೆಹಮಾನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದರಿಂದ ಇಬ್ಬರ ಪ್ರೀತಿ ಮನೆಯವರಿಗೆ ತಿಳಿದಿರಲಿಲ್ಲ. ಹೀಗಾಗಿ ತಮ್ಮಿಬ್ಬರ ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾದರೆ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಭಾವಿಸಿ ಹೇಗಾದರೂ ನಾವಿಬ್ಬರು ಒಂದಾಗಲೇ ಬೇಕು ಎಂದು ಒಂದು ದಿಟ್ಟ ನಿರ್ಧಾರಕ್ಕೆ ಬಂದಿದ್ದಾರೆ.

ಸುಮಾರು 10 ವರ್ಷಗಳ ಹಿಂದೆ ಒಂದು ದಿನ ಸಂಜಿತಾ ಮನೆಯಿಂದ ಇದ್ದಕ್ಕಿದದತೆ ನಾಪತ್ತೆಯಾಗಿದ್ದಳು. ಇತ್ತ ಮಗಳಿಗಾಗಿ ಮನೆ ಮಂದಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಸಂಜಿತಾ ಮಾತ್ರ ಪತ್ತೆಯಾಗಲೇ ಇಲ್ಲ. ಕೊನೆಗೆ ಅನುಮಾನಗೊಂಡ ಪೋಷಕರು ಆಕೆ ಯಾರದ್ದೋ ಜೊತೆ ಓಡಿ ಹೋಗಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದರು.

ವಿಭಿನ್ನ ಜಾತಿಯಾಗಿದ್ದರಿಂದ ಮನೆಯವರು ವಿರೋಧ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಸಂಜಿತಾ ಆಕೆಯ ಮನೆ ಪಕ್ಕದಲ್ಲಿರೋ ರೆಹಮಾನ್ ಮನೆಯ ಸಣ್ಣ ಕೋಣೆಯಲ್ಲಿ ಬಂಧಿಯಾಗಿದ್ದಳು. ಪೈಂಟರ್ ಕೆಲಸ ಮಾಡುತ್ತಿದ್ದ ರೆಹಮಾನ್ ಬೆಳಗ್ಗೆ ಹೋಗಿ ಸಂಜೆ ಮನೆಗೆ ವಾಪಸ್ಸಾಗುತ್ತಿದ್ದ. ಇದೇ ಮನೆಯಲ್ಲಿ ರೆಹಮಾನ್ ತಾಯಿ ಹಾಗೂ ಅಣ್ಣ ಇದ್ದು, ಅವರಿಗೂ ಸಂಜಿತಾ ಇರೋ ವಿಚಾರ ಗೊತ್ತೇ ಇರಲಿಲ್ಲ. ಯಾಕೆಂದರೆ ರೆಹಮಾನ್ ತುಂಬಾ ಕೋಪಿಷ್ಠನಾಗಿರುವುದರಿಂದ ಯಾರೂ ಆತನ ಕೋಣೆಗೆ ಹೋಗುತ್ತಿರಲಿಲ್ಲ. ಅಲ್ಲದೆ ನಿತ್ಯವೂ ಕೆಲಸಕ್ಕೆ ಹೋಗುವಾಗ ರೆಹಮಾನ್ ತನ್ನ ರೂಮ್ ಲಾಕ್ ಮಾಡಿಕೊಂಡು ಹೋಗುತ್ತಿದ್ದನು. ಹೀಗಾಗಿ ಮನೆಯವರಿಗೆ ಯಾವೊಂದು ವಿಚಾರವು ತಿಳಿದಿರಲಿಲ್ಲ.

ಇತ್ತ ರೆಹಮಾನ್ ತಾಯಿ ಹಾಗೂ ಅಣ್ಣ ಕೂಡ ಕೆಲಸಕ್ಕೆ ಹೋಗುತ್ತಿದ್ದರು. ಅವರು ಕೆಲಸಕ್ಕೆ ತೆರಳಿದ ಬಳಿಕ ಸಂಜಿತಾ ಕಿಟಕಿ ಸರಿಸಿ ಕೋಣೆಯಿಂದ ಹೊರಬಂದು ತನ್ನ ನಿತ್ಯ ಕರ್ಮಗಳನ್ನು ಮುಗಿಸುತ್ತಿದ್ದಳು. ಹೀಗೆ ಸುಮಾರು 10 ವರ್ಷಗಳ ಕಾಲ ಇಬ್ಬರ ಪ್ರೀತಿ ಸಣ್ಣ ರೂಮಿನಲ್ಲಿಯೇ ನಡೆಯುತ್ತಿತ್ತು. ಇದೀಗ ಸಂಜಿತಾಗೆ 29 ವರ್ಷವಾದ್ರೆ ರೆಹಮಾನ್ ಗೆ 34 ವರ್ಷ. 10 ವರ್ಷ ಸಂಜಿತಾ ತನ್ನ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿರೋ ರೆಹಮಾನ್ ಮನೆಯಲ್ಲಿರುವ ವಿಚಾರ ಆಕೆಯ ಪೋಷಕರಿಗೆ ಗೊತ್ತೇ ಆಗಿರಲಿಲ್ಲ.

ಬೆಳಕಿಗೆ ಬಂದಿದ್ದು ಹೇಗೆ..?
ಕಳೆದ ಮೂರು ತಿಂಗಳಿನಿಂದ ರೆಹಮಾನ್ ನಾಪತ್ತೆಯಾಗಿದ್ದನು. ಹೀಗಾಗಿ ರೆಹಮಾನ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಹುಡುಕಾಟ ನಡೆಸಿದಾಗ ರೆಹಮಾನ್ ಜೊತೆ ಸಂಜಿತಾ ಕೂಡ ಪತ್ತೆಯಾಗಿದ್ದಳು. ಸಂಜಿತಾ ನೋಡಿದ ಪೋಷಕರೇ ಒಂದು ಬಾರಿ ದಂಗಾದರು. ನಂತರ ಪೊಲೀಸರ ಮುಂದೆ ಇಬ್ಬರು ತಮ್ಮ ಪ್ರೇಮ ಕಥೆಯನ್ನು ಬಿಚ್ಚಿಟ್ಟರು.

ಸದ್ಯ ಪೊಲೀಸರು ಇಬ್ಬರನ್ನೂ ಜಡ್ಜ್ ಮುಂದೆ ತಂದು ನಿಲ್ಲಿಸಿದಾಗ 10 ವರ್ಷಗಳ ಕಾಲ ನಡೆದ ವಿಚಾರಗಳನ್ನು ತಿಳಿಸಿರುವ ಸಂಜಿತಾ, ತಾನು ರೆಹಮಾನ್ ನನ್ನು ಮದುವೆಯಾಗಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾಳೆ. ಈ ವಿಷಯ ಕೇಳುತ್ತಿದ್ದಂತೆಯೇ ಕೋರ್ಟ್ ನಲ್ಲಿದ್ದವರು ಕೂಡ ಶಾಕ್ ಆದರು. ಸುಮಾರು 11 ವರ್ಷಗಳ ಕಾಲ ಪುಟ್ಟ ಕೋಣೆಯನ್ನೇ ಪ್ರಪಂಚವನ್ನಾಗಿಸಿಕೊಂಡು ಬದುಕುತ್ತಿದ್ದ ಸಂಜಿತಾ ಪ್ರೀತಿ ಕಂಡು ಅಚ್ಚರಿಗೊಳಗಾಗಿದ್ದಾರೆ.

The post ಪ್ರೀತಿ ಉಳಿಸಿಕೊಳ್ಳಲು 10 ವರ್ಷ ಪ್ರಿಯತಮೆಯನ್ನು ಕೋಣೆಯಲ್ಲೇ ಬಚ್ಚಿಟ್ಟ ಪಾಗಲ್ ಪ್ರೇಮಿ..! appeared first on Public TV.

Source: publictv.in

Source link