ಪ್ರೀತಿ ಮಾಯೆ ಹುಷಾರು ಅಂದ್ರೂ ಕೇಳದ ಯುವಕ.. ಕಿಡ್ನಿ ದಾನ ಮಾಡಿದವನಿಗೆ ಯುವತಿ ಕೈಕೊಟ್ಟಿದ್ದೇಕೆ?


ಪ್ರೀತಿ ಮಾಯೆ ಹುಷಾರು ಅನ್ನೋ ಮಾತಿದೆ ಗೊತ್ತಾ? ಅದನ್ನು ಪ್ರೀತಿಯಲ್ಲಿ ಬಿದ್ದವರೂ ಕೇಳಿರ್ತಾರೆ. ತಾವು ಜಾಗೃತರಾಗಿಬೇಕು ಅಂದುಕೊಳ್ಳುತ್ತಾರೆ. ಆದ್ರೆ, ಅದನ್ನು ಪಾಲನೆ ಮಾತ್ರ ಮಾಡೋದಿಲ್ಲ. ಈ ಮಾತು ಯಾಕೆ ಅಂದ್ರೆ, ಮೆಕ್ಸಿಕೋದಲ್ಲಿ ಒಬ್ಬ ಮಹಾನ್‌ ದಾನಶೂರ ಪ್ರೇಮಿ ಕಾಣಿಸಿಕೊಂಡಿದ್ದಾನೆ. ಆತ ತನ್ನ ಪ್ರಿಯತಮೆಗಾಗಿ ಕಿಡ್ನಿಯನ್ನೇ ದಾನ ಮಾಡಿ ತಾನೊಬ್ಬ ಶ್ರೇಷ್ಠ ಪ್ರೇಮಿ ಅಂತ ಸಾಬೀತು ಮಾಡಿದ್ದಾನೆ. ಹಾಗಾದ್ರೆ, ಅದು ಖುಷಿಪಡೋ ವಿಚಾರ ಅಂತ ನೀವು ಅಂದುಕೊಳ್ಳಬಹುದು. ಆದ್ರೆ, ಅಲ್ಲಿಯೇ ಒಂದು ಕಣ್ಣೀರಿನ ಕಥೆ ಅಡಗಿದೆ.

ಕನ್ನಡದ ದುನಿಯಾ ಸಿನಿಮಾದಲ್ಲಿ ಈ ಹಾಡನ್ನು ನೀವು ಕೇಳಿಯೇ ಇರ್ತೀರಿ. ಅದನ್ನು ನೋಡಿ ಆನಂದಿಸಿರುತ್ತೀರಿ. ಹಾಗೇ ಒಮ್ಮೆ ನೀವು ಪ್ರೀತಿಯಲ್ಲಿ ಇದ್ದವರಾಗಿದ್ರೆ ಸ್ವಲ್ಪ ಜಾಗೃತರಾಗಿ ಇರಬೇಕು ಅಂತ ಯೋಚಿಸುತ್ತೀರಿ. ಆದ್ರೆ, ಪ್ರೀತಿ ಅನ್ನೋದು ಮಾಯೆ, ಒಮ್ಮೆ ಅದಕ್ಕೆ ಶರಣಾಗಿ ಬಿಟ್ರೆ ಮುಗಿಯಿತು. ಈ ಲೋಕವನ್ನೇ ಮರೆತು ಬಿಡಿಸುತ್ತೆ. ಪರಸ್ಪರರು ಪ್ರಾಣಕೊಡಲು ಸಿದ್ಧರಾಗಿ ಬಿಡ್ತಾರೆ. ಆದ್ರೆ, ಒಂದು ವಿಷ್ಯ, ಅದು ಇಬ್ಬರಲ್ಲಿಯೂ ಪರಿಶುದ್ಧ ಪ್ರೀತಿ ಇದ್ರೆ ಮಾತ್ರ. ಒಮ್ಮೆ ಒಬ್ಬರಲ್ಲಿ ಮಾತ್ರ ಶುದ್ಧ ಪ್ರೀತಿ ಇದ್ದು ಮತ್ತೊಬ್ಬರಲ್ಲಿ ತೋರಿಕೆಯ ಪ್ರೀತಿಯಿದ್ರೆ ಏನಾಗುತ್ತೆ? ಅದನ್ನು ನಾವು ಹೇಳ್ತ್ತೇವೆ ನೋಡಿ.

ಮೆಕ್ಸಿಕೋದಲ್ಲಿರೋ ಪಾರ್ಕ್‌ಗಳಲ್ಲಿ, ವಿವಾಹವಾದ ಜೋಡಿಗಳು, ಪ್ರೀತಿಯಲ್ಲಿರೋ ಜೋಡಿಗಳು ಬರ್ತಾರೆ. ಸ್ವಚ್ಛಂದವಾಗಿ ಹಕ್ಕಿಗಳು ಹಾರಾಡುವಂತೆ ಪಾರ್ಕ್‌ ತುಂಬಾ ಓಡಾಡುತ್ತಾರೆ. ಕೈ ಕೈ ಹಿಡಿದು ಸುತ್ತಾಡುತ್ತಾರೆ. ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಾರೆ. ಇದನ್ನು ಯಾಕೆ ಹೇಳಿದ್ವಿ ಅಂದ್ರೆ, ನಾವು ಹೇಳ್ತಾ ಇರೋ ದಾನಸೂರ ಕರ್ಣ ಕೂಡ ಹೀಗೆ ತನ್ನ ಪ್ರಿಯತಮೆ ಜೊತೆ ಮೆಕ್ಸಿಕೋದ ಪಾರ್ಕ್‌ಗಳಲ್ಲಿ ಸುತ್ತಾಡಿದ್ದ. ತುಂಬಾ ಖುಷಿ ಖುಷಿಯಾಗಿ ಹಾರಾಡಿದ್ದ. ಆಷ್ಟಕ್ಕೂ ಆತ ಯಾರು ಗೊತ್ತಾ?
ಯೆಸ್‌, ನಾವು ಹೇಳಲು ಹೊರಟಿರೋದು ಇದೇ ಪ್ರೇಮಿಯ ಬಗ್ಗೆ, ಈತನ ಹೆಸರು ಉಜಿಯೆಲ್‌ ಮಾರ್ಟಿನೆಜ್‌. ಶಿಕ್ಷಕನಾಗಿರೋ ಈತ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದವನು. ಹದಿಹರೇಯದ ವಯಸ್ಸಾಗಿರೋದ್ರಿಂದ ಒಬ್ಬ ಸುಂದರಿಯ ಬಲೆಗೆ ಬಿದಿದ್ದ. ಆಕೆಗೆ ಪ್ರಪೋಸ್‌ ಮಾಡಿದ್ದ. ಆಕೆ ಕೂಡ ಒಪ್ಪಿಗೆ ನೀಡಿದ್ಲು. ಇನ್ನೇನು ಸ್ವರ್ಗಕ್ಕೆ ಮೂರು ಗೇಣು ಅನ್ನುವಂತೆ ಖುಷಿಪಟ್ಟ. ಇಬ್ಬರು ಜೊತೆ ಜೊತೆಯಾಗಿ ಸುತ್ತಾಡಿದ್ರು. ಮನಸೋಇಚ್ಛೆ ಖರ್ಚು ಮಾಡಿದ್ದ. ಆದ್ರೆ, ಇದೇ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು.

ಆಘಾತ ತಂದ ಸುದ್ದಿ

ಹೌದು, ಖುಷಿ ಖುಷಿಯಾಗಿ ಇದ್ದ ಪ್ರೇಮಿಗಳ ಜೀವನಲ್ಲಿ ಬರಸಿಡಿಲಿನಂತೆ ಸುದ್ದಿಯೊಂದು ಬಂದು ಅಪ್ಪಳಿಸುತ್ತೆ. ಅದೇನು ಅಂದ್ರೆ ಪ್ರಿಯತಮೆಯ ತಾಯಿಗೆ ಕಿಡ್ನಿ ವೈಫಲ್ಯ ಅನ್ನೋ ಸುದ್ದಿ. ಆ ಸಂದರ್ಭದಲ್ಲಿ ಮಾರ್ಟಿನೆಜ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಶ್ರಮವಹಿಸುತ್ತಾನೆ. ಕಿಡ್ನಿ ಸಿಗುತ್ತಾ ಅಂತಾ ಹುಡುಕಾಡುತ್ತಾರೆ. ಆದ್ರೆ, ಎಲ್ಲಿಯೂ ಸಿಗಲ್ಲ, ಒಂದು ರೀತಿಯಲ್ಲಿ ಪ್ರೇಮಿಗಳು ದಿಕ್ಕೇ ತೋಚದಂತೆ ಆಗಿ ಬಿಡ್ತಾರೆ.

ಮಾರ್ಟಿನೆಜ್‌ ಒಬ್ಬ ಪ್ರೇಮಿಯಾಗಿ ಏನು ಸಹಾಯ ಮಾಡಲು ಸಾಧ್ಯನೋ ಆ ಕೆಲಸವನ್ನು ಮಾಡಿದ್ದ. ಆತನ ಜಾಗದಲ್ಲಿ ಯಾರೇ ಇದ್ರೂ ಆ ಕೆಲಸ ಮಾಡುವುದು ಮಾನವೀಯತೆ. ಆತ ತನ್ನ ಕೈಲಾದ ಮಟ್ಟಿಗೆ ಶ್ರಮ ವಹಿಸಿದ್ದ. ಆದ್ರೆ, ದುರಾದೃಷ್ಟಕ್ಕೆ ಸಕಾಲಕ್ಕೆ ಕಿಡ್ನಿ ಸಿಗಲೇ ಇಲ್ಲ. ಹಾಗೇ ಬಿಟ್ರೆ ಪ್ರಿಯತಮೆಯ ತಾಯಿ ಸಾಯುತ್ತಾಳೆ. ಇನ್ನೇನು ಮಾಡೋದು ಅಂತ ಯೋಚಿಸುತ್ತಾನೆ. ಆಗಲೇ ನೋಡಿ, ಈತ ಮಹಾನ್‌ ದಾನಿಯಾಗಲು ತೀರ್ಮಾನಿಸುತ್ತಾನೆ.

ತನ್ನದೇ ಕಿಡ್ನಿ ದಾನ ಮಾಡಲು ಮುಂದಾದ ಮಾರ್ಟಿನೆಜ್‌

ಸಕಾಲಕ್ಕೆ ಎಲ್ಲಿಯೂ ಕಿಡ್ನಿ ಸಿಗದಿದ್ದಾಗ ಮಾರ್ಟಿನೆಜ್‌ ತಾನೇ ಕಿಡ್ನಿ ದಾನ ಮಾಡಲು ಮುಂದಾಗುತ್ತಾನೆ. ಯಾವುದೇ ಸಹಾಯ ಮಾಡಬೇಕಾದ್ರೂ ಒಂದು ಮಿತಿ ಅನ್ನೋದು ಇರುತ್ತೆ. ಆದ್ರೆ ಅಂದು ಮಾರ್ಟಿನೆಜ್‌ ತನ್ನ ಮಿತಿಯನ್ನು ದಾಟಿದ್ದ ಅನಿಸುತ್ತೆ. ಆತನ ತೀರ್ಮಾನಕ್ಕೆ ಪ್ರಿಯತಮೆ ಫುಲ್‌ ಖುಷಿಯಾಗಿದ್ಲು, ಹೇಗಾದ್ರೂ ತನ್ನ ತಾಯಿಯನ್ನು ಉಳಿಸಿಕೊಂಡಂತೆ ಆಯ್ತು ಅಂತ ಖುಷಿಪಟ್ಟಿದ್ಲು. ಹಾಗೇ ಒಂದು ದಿನ ವೈದ್ಯರು ಮಾರ್ಟಿನೆಜ್‌ ಕಿಡ್ನಿಯನ್ನು ತೆಗೆದು ಪ್ರಿಯತಮೆಯ ತಾಯಿಗೆ ಅಳವಡಿಕೆ ಮಾಡುತ್ತಾರೆ. ಒಂದು ಕಿಡ್ನಿ ಹೋದ್ರು ಪರವಾಗಿಲ್ಲ, ತಾನು ಪ್ರಿಯತಮೆಯ ಮನಸ್ಸು ಗೆದ್ದೆ ಅಂತ ಖುಷಿಪಡುತ್ತಾನೆ. ಈ ಜಗತ್ತಿನಲ್ಲಿಯೇ ತಾನು ಶ್ರೇಷ್ಠ ಪ್ರೇಮಿ ಅಂತ ಬೀಗುತ್ತಾನೆ.

ಹೌದು, ಮಾರ್ಟಿನೆಜ್‌ ಪ್ರೀತಿಯಲ್ಲಿ ಬಿದ್ದಿದ್ದ. ಪ್ರಿಯತಮೆಗಾಗಿ ಏನು ಬೇಕಾದ್ರೂ ಮಾಡಲು ಸಿದ್ಧನಾಗಿದ್ದ. ಅದೇ ಕಾರಣಕ್ಕೆ ತನ್ನ ಕಿಡ್ನಿಯನ್ನೇ ದಾನ ಮಾಡುತ್ತಾನೆ. ನಿಜಕ್ಕೂ ಇದು ಕೂಡ ಮಾನವೀಯತೆಯ ಕೆಲಸ. ಅದರಲ್ಲಿ ಯಾವುದೇ ಡೌಟ್‌ ಇಲ್ಲ. ಒಬ್ಬ ಶ್ರೇಷ್ಠ ಪ್ರೇಮಿಗೆ ಮಾತ್ರ ಅಂತಹ ದಾನ ಸಾಧ್ಯ. ತೋರಿಕೆಯ ಪ್ರೀತಿ ಇದ್ರೆ ಆತ ಪಲಾಯನ ಮಾಡಿ ಬಿಡ್ತಾ ಇದ್ದ. ಮಾರ್ಟಿನೆಜ್‌ ಹಾಗೇ ಮಾಡಲೇ ಇಲ್ಲ. ಆದ್ರೆ, ಆ ಖುಷಿ ಆತನಲ್ಲಿ ಬಹಳ ದಿನ ಉಳಿಯಲೇ ಇಲ್ಲ.

ಕೆಲವೇ ತಿಂಗಳಲ್ಲಿ ನಡೆಯಿತು ಬ್ರೇಕ್‌ ಅಪ್‌
ಜಗಳವಾಡಿಕೊಂಡು ಬೇರೆಯಾದ ಪ್ರೇಮಿಗಳು

ಪ್ರೀತಿಯಲ್ಲಿ ಜಗಳ ಕಾಮನ್‌. ಯಾರ ಪ್ರೀತಿಯಲ್ಲಿ ಇರಲ್ಲ ಹೇಳಿ ಜಗಳ? ಅದೇ ರೀತಿ ಮಾರ್ಟಿನೆಜ್‌ ಪ್ರೀತಿಯಲ್ಲಿಯೂ ಜಗಳವಾಗಿದೆ. ದುರಾದೃಷ್ಟ ಅಂದ್ರೆ ಅದೇ ಜಗಳದ ನೆವವನ್ನು ಇಟ್ಟುಕೊಂಡು ಹುಡುಗಿ ಈತನನ್ನು ದೂರ ಮಾಡಿ ಬಿಟ್ಟಿದ್ದಾಳೆ. ಮಾರ್ಟಿನೆಜ್‌ ತೋರಿದ ಪ್ರೀತಿಯನ್ನು ನೆನಪಿಸಿಕೊಂಡಿದ್ರೆ, ಆತ ಮಾಡಿದ ಕಿಡ್ನಿ ದಾನವನ್ನು ನೆನಪಿಸಿಕೊಂಡಿದ್ರೆ ಆಕೆ ಮಾರ್ಟಿನೆಜ್‌ ಬಳಿ ಬರ್ತಾ ಇದ್ಲು. ಜಗಳವನ್ನು ಮರೆಯುತ್ತಾ ಇದ್ಲು. ಬಟ್‌ ಆ ಕೆಲಸ ಆಗಲೇ ಇಲ್ಲ. ಪ್ರೀತಿಯ ಬಲೆಯಲ್ಲಿ ಬಿದ್ದ ಮಾರ್ಟಿನೆಜ್‌ ತನ್ನ ಪ್ರಿಯತಮೆಯ ಕರೆಗಾಗಿ ಕಾದು ಕುಳಿತ್ತಿದ್ದ. ಇಂದಲ್ಲ ನಾಳೆ ತಮ್ಮ ಪ್ರೀತಿ ಸರಿ ಹೋಗುತ್ತೆ, ತನ್ನ ದಾನವನ್ನು ಪ್ರಿಯತಮೆ ನೆನಪಿಸಿಕೊಳ್ಳುತ್ತಾಳೆ ಅಂತ ತೀರ್ಮಾನಿಸಿದ್ದ. ಆದ್ರೆ, ಒಂದು ದಿನ ಆತನಿಗೆ ಬರಸಿಡಿಲಿನಂತ ಸುದ್ದಿ ಬಂತು.

ಕೈಕೊಟ್ಟ ಪ್ರಿಯತಮೆ

ಅದ್ಯಾವಾಗ ಜಗಳವಾಗುತ್ತೋ ಆಗಲೇ ಪ್ರಿಯತಮೆ ಬೇರೊಬ್ಬನನ್ನು ಮದುವೆಯಾಗಲು ತೀರ್ಮಾನ ಮಾಡ್ತಾಳೆ. ಮಾರ್ಟಿನೆಜ್‌ ತನಗೆ ಸರಿಯಾಗಿ ಹೊಂದಾಣಿಕೆಯಾಗುವುದಿಲ್ಲ ಅಂದುಕೊಳ್ಳುತ್ತಾಳೆ. ಕಿಡ್ನಿ ದಾನ ಮಾಡಿ ಒಂದೇ ತಿಂಗಳಲ್ಲಿ ಇಂತಹ ಒಂದು ಸುದ್ದಿ ಮಾರ್ಟಿನೆಜ್‌ ಕಿವಿಗೆ ಬೀಳುತ್ತದೆ. ಸುದ್ದಿ ಬಂದ ಕೆಲವೇ ದಿನದಲ್ಲಿ ಆಕೆ ಬೇರೊಬ್ಬನನ್ನು ವಿವಾಹವಾಗಿಯೇ ಬಿಡುತ್ತಾಳೆ. ಆ ಸುದ್ದಿ ಕೇಳಿ ಮಾರ್ಟಿನೆಜ್‌ ಆಘಾತಕ್ಕೆ ಒಳಗಾಗುತ್ತಾನೆ, ಕಣ್ಣೀರು ಸುರಿಸುತ್ತಾನೆ.

ಎಂತಹ ಪ್ರೇಮಿಗೆ ಆದ್ರೂ ಅದು ಆಘಾತದ ವಿಷಯವೇ ಆಗಿತ್ತು. ತನ್ನ ಪ್ರೇಮಿಗೋಸ್ಕರ ಆತ ತನ್ನ ಕಿಡ್ನಿಯನ್ನೇ ದಾನ ಮಾಡಿ ಪ್ರಿಯತಮೆಯ ತಾಯಿಯನ್ನು ಬದುಕಿಸಿದ್ದ. ಆದ್ರೆ ಆಕೆ, ಜಗಳವಾಡಿಕೊಂಡು ದೂರವಾಗಿ ಬಿಟ್ಲು. ಮತ್ತೊಬ್ಬನನ್ನು ಮದುವೆಯೂ ಆಗಿ ಬಿಟ್ಲು. ಅದನ್ನು ನೋಡಿ ತಾನು ಪ್ರೀತಿಯಲ್ಲಿ ಮೋಸ ಹೋದೆ ಅಂತ ಅಂದುಕೊಳ್ಳುತ್ತಾನೆ. ಆದ್ರೂ, ತನ್ನ ಮುಗ್ಧ ಪ್ರೇಮದ ಬಗ್ಗೆ ಹೆಮ್ಮೆ ಪಡುತ್ತಾನೆ.

ನಾನು ಆಕೆಯನ್ನು ತುಂಬಾನೆ ಪ್ರೀತಿಸುತ್ತಿದ್ದೆ. ಇದೇ ಕಾರಣಕ್ಕೆ ಆಕೆಯ ತಾಯಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಕಿಡ್ನಿ ದಾನ ಮಾಡಿದ್ದೇನೆ. ಆದ್ರೆ, ಆಕೆ, ನನ್ನನ್ನು ದೂರ ಮಾಡಿದ್ದಾಳೆ, ಬೇರೊಬ್ಬನನ್ನು ಮದುವೆಯಾಗಿದ್ದಾಳೆ. ಹಾಗಂತ ಆಕೆಯನ್ನು ನಾನು ದ್ವೇಷಿಸುತ್ತಿಲ್ಲ, ನಾವು ಸ್ನೇಹಿತರೂ ಅಲ್ಲ, ಶತ್ರುಗಳು ಅಲ್ಲ ಎಂದರು ಉಜಿಯೆಲ್‌ ಮಾರ್ಟಿನೆಜ್‌.

ಟಿಕ್‌ಟಾಕ್‌ನಲ್ಲಿ ಮಾರ್ಟಿನೆಜ್‌ ವಿಡಿಯೋ ವೈರಲ್‌

ಮಾರ್ಟಿನೆಜ್‌ ತನ್ನ ಪ್ರೇಮದ ವಿಷಯವನ್ನು ಯಾವಾಗ ಟಿಕ್‌ಟಾಕ್‌ನಲ್ಲಿ ಹೇಳಿಕೊಳ್ಳುತ್ತಾನೋ, ಆವಾಗ ವೈರಲ್‌ ಆಗಿ ಬಿಡುತ್ತದೆ. ಲಕ್ಷಾಂತರ ಜನ ಅದನ್ನು ಶೇರ್‌ ಮಾಡುತ್ತಾರೆ. ಹಾಗೇ ಸಾಂತ್ವನದ ನುಡಿಗಳನ್ನು ಹೇಳುತ್ತಾರೆ. ನೀವು ದುಃಖಿಸಬೇಡಿ, ನಿಮ್ಮಂತಹ ಒಬ್ಬ ಶ್ರೇಷ್ಠ ಪ್ರೇಮಿಯನ್ನು ಆಕೆ ಕಳೆದುಕೊಂಡಿದ್ದಾಳೆ. ನಿಜಕ್ಕೂ ಆಕೆ ದುರಾದೃಷ್ಟವಂತೆ. ನಿಮಗೆ ಖಂಡಿತ ದೇವರು ಒಳ್ಳೆಯದನ್ನು ಮಾಡಿಯೇ ಮಾಡುತ್ತಾನೆ. ತಾಳ್ಮೆಯಿಂದ ಇರಿ, ದುಃಖಿಸಬೇಡಿ ಅಂತ ನೆಟ್ಟಿಗರು ಹೇಳುತ್ತಾರೆ. ಇದನ್ನು ನೋಡಿ ಮಾರ್ಟಿನೆಜ್‌ ಸ್ವಲ್ಪ ಸಮಾಧಾನ ಮಾಡಿಕೊಳ್ಳುತ್ತಾನೆ.

ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತು ಕಾಣಿಸಲ್ಲ ಅನ್ನುತ್ತಾರೆ. ಅದು ಸತ್ಯನೋ ಸುಳ್ಳೋ ಆದ್ರೆ, ಒಬ್ಬ ಪ್ರೇಮಿಯಾಗಿ ಮಾರ್ಟಿನೆಜ್‌ ತನ್ನ ಕರ್ತವ್ಯವನ್ನು ಮಾಡಿದ್ದ. ಯಾವ ಪ್ರೇಮಿಯೂ ತೋರಿಸದ ಪ್ರೀತಿಯನ್ನು ತೋರಿಸಿದ್ದ. ಆದ್ರೆ, ಆಕೆ ದ್ರೋಹ ಮಾಡಿಬಿಟ್ಲು. ಏನೇ ಹೇಳಿ, ಪ್ರೀತಿ ಅನ್ನೋದು ಮಾಯೆ ಹುಷಾರು.

News First Live Kannada


Leave a Reply

Your email address will not be published. Required fields are marked *