ಪ್ರೇಕ್ಷಕರ ಸನಿಹಕೆ ಧನ್ಯಾ-ಸೂರಜ್ ಗೌಡ ಕಹಾನಿ.. ಈ ಸಿನಿಮಾದಲ್ಲಿ ಅಡಗಿರೋದೇನು..?

ಪ್ರೇಕ್ಷಕರ ಸನಿಹಕೆ ‘‘ನಿನ್ನ ಸನಿಹಕೆ’’ ಸಿನಿಮಾ ಬಂದು ನಿಂತಿದೆ. ಇಷ್ಟು ದಿನ ಇಷ್ಟ ಕಷ್ಟ ಪಟ್ಟು ಕನಸು ಕಟ್ಟಿಕೊಂಡು ಕಾದಿದ್ದಕ್ಕೂ ಪ್ರೇಕ್ಷಕ ಪ್ರಭುವಿನ ಫಲಿತಾಂಶ ಸಿಗಲಾರಂಭಿಸಿದೆ. ಎರಡನೇ ಲಾಕ್ ಡೌನ್ ನಂತರ ಅದ್ಧೂರಿಯಾಗಿ ಬಿಡುಗಡೆಯಾದ ಸಿನಿಮಾ ‘‘ನಿನ್ನ ಸನಿಹಕೆ’’. ಹೇಗಿದೆ..? ಪ್ರೇಕ್ಷಕರ ನಿರೀಕ್ಷಿತ ರಂಜನೆಯ ಲೋಕದ ಸನಿಹಕೆ ಬಂದಿದ್ಯಾ ‘ನಿನ್ನ ಸನಿಹಕೆ’ ಸಿನಿಮಾ..? ‘‘ನಿನ್ನ ಸನಿಹಕೆ’’ ಸಿನಿಮಾದ ಹಾನೆಸ್ಟ್ ರಿವ್ಯೂ ರಿಪೋರ್ಟ್ ಚಿತ್ರಪ್ರೇಮಿಗಳಿಗಾಗಿ.

ವಂಡರ್​​ಫುಲ್ ಸಾಂಗ್ಸ್​​​​​.. ಬ್ಯೂಟಿಫುಲ್ ವಿಶ್ಯುವಲ್ಸ್​​​​​​​​​ನಿಂದ ಗಮನ ಸೆಳೆದಿದ್ದ ನಿನ್ನ ಸನಿಹಕೆ ಸಿನಿಮಾ ಪ್ರೇಕ್ಷಕರ ಸನಿಹಕ್ಕೆ ಬಂದು ನಿಂತಿದೆ. ಆ ಸಿನಿಮಾ ಹೇಗಿರಬಹುದು ? ಹಾಗೆ ಇರಬಹುದು ಅನ್ನೋ ಅಂದದ ಕುತೂಹಲ ತಣಿಸೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.. ಸಿನಿಮಾ ಹಾಗಿದೆ, ಹೀಗಿದೆ, ನಂಗೆ ಇಷ್ಟವಾಯ್ತು, ಪೈಸಾ ವಸೂಲ್, ಸಿನಿಮಾ ನೋಡಿ ಮನಸು ಆಯ್ತು ಚಿಲ್ ಅನ್ನೋ ಉತ್ತರಗಳು ಸಿಗೋ ಕಾಲ ಸನಿಹವಾಗಿದೆ.. ‘‘ನಿನ್ನ ಸನಿಹಕೆ’’ ಸಿನಿಮಾವನ್ನ ನೋಡಿದ ಪ್ರೇಕ್ಷಕರು, ಸಿನಿ ರಂಗದ ಪ್ರವೀಣರು ಹಾಗೂ ನಾವು ಕಂಡಂತೆ ಹೇಂಗಿದೆ ಅನ್ನೋದನ್ನ ಹೇಳ್ತಿವಿ ಕೇಳಿ.

ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಟನೆಯ ಸೂರಜ್ ಗೌಡ ನಟನೆ ಪ್ಲಸ್ ನಿರ್ದೇಶನದ ನಿನ್ನ ಸನಿಹಕೆ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ.. ಸಿರಿಗನ್ನಡ ಸಿನಿ ಪ್ರೇಕ್ಷಕರು ನಿನ್ನ ಸನಿಹಕೆ ಸಿನಿಮಾಗಾಗಿ ಥಿಯೇಟರ್​ ಸನಿಹಕೆ ಬರುತ್ತಿದ್ದಾರೆ.. ಪಕ್ಕಾ ಯೂಥ್ ಫುಲ್ ಕಲರ್​ಫುಲ್ ಸಿನಿಮಾದ ಒನ್ ಲೈನ್ ಸ್ಟೋರಿಯೇನು..?

ನಿನ್ನ ಸನಿಹಕೆ ಚಿತ್ರದ ಒನ್ ಲೈನ್ ಸ್ಟೋರಿ ಏನು..?

ಮದುವೆಯಾಗದೆ ಪ್ರೇಮಿಗಳು ದಂಪತಿಯಂತೆ ಬದುಕುವಾಗ ಎಷ್ಟು ಕಷ್ಟ ನಷ್ಟಗಳು ಎದುರಾಗುತ್ತವೆ. ಜೀವನದಲ್ಲಿ ಶಿಸ್ತು ಸಂಯಮ ಸಹನೆ ಎಷ್ಟು ಮುಖ್ಯ. ಎಲ್ಲದಕ್ಕೂ ಮುಖ್ಯವಾಗಿ ಪ್ರೀತಿಯ ಮೇಲಿನ ನಂಬಿಕೆ ಎಷ್ಟರ ಮಟ್ಟಿಗೆ ಇಟ್ಕೊಳ್ಳಬೇಕು, ಪ್ರೀತಿಯನ್ನ ಎಷ್ಟು ಜೋಪಾನ ಮಾಡಿಕೊಂಡು ಬಾಳ್ವೆ ಮಾಡಬೇಕು ಅನ್ನೋದನ್ನ ಇವತ್ತಿನ ಜಮಾನಕ್ಕೆ ಅರ್ಥವಾಗುವ ಹಾಗೆ ಹೇಳೋ ಸ್ಟೋರಿ ನಿನ್ನ ಸನಿಹಕೆ.

ಸ್ನೇಹಿತೆಯೊಬ್ಬಳ ಬ್ಯಾಚುಲರ್ ಪಾರ್ಟಿಗೆ ಕಥೆಯ ನಾಯಕಿ ಪಾತ್ರದ ಅಮೃತಾ ಅಲಿಯಾಸ್ ಡಿಂಪಿ ಹೋಗಿರ್ತಾರೆ. ಅಚಾನಕ್ ಆಗಿ ನಾಯಕ ಪಾತ್ರದಾರಿ ಆದಿತ್ಯ ಆ ಹೋಟೆಲ್​​ಗೆ ಬಂದಾಗ ಆದಿಯನ್ನ ಡಿಂಪಿ ಬಕ್ರಾ ಮಾಡಲು ಹೋದಾಗ ನಾಯಕ ನಾಯಕಿ ಪರಿಚಯವಾಗುತ್ತೆ. ಈ ಪರಿಚಯ ಪ್ರೀತಿ ಪ್ರೇಮ ಪ್ರಣಯದ ತನಕ ಹೇಗೆ ಹೋಗುತ್ತೆ. ಮದುವೆಯಾಗದೆ ಹುಡ್ಗ ಹುಡ್ಗಿ ಒಟ್ಟಿಗೆ ಹೇಗಿರುತ್ತಾರೆ. ಅದ್ಯಾಕೆ ದೂರ ಆಗ್ತಾರೆ, ವಿರಹ ವೇದನೆಯಲ್ಲಿ ವಿಲ ವಿಲ ಒದ್ದಾಡಿ ಮತ್ತೆ ಹೇಗೆ ಒಂದಾಗುತ್ತಾರೆ ಅನ್ನೋದು ಸಿನಿಮಾದ ಒನ್ ಲೈನ್ ಸ್ಟೋರಿ. ನಾವ್ಯಾಕೆ ಈ ರೀತಿ ಒಗಟಾಗಿ ನಿನ್ನ ಸನಿಹಕೆ ಸಿನಿಮಾದ ಒಂದೊಳ್ಳೆ ಕಥೆಯನ್ನ ಹೇಳ್ತಿದ್ದೀವಿ ಅಂದ್ರೆ ಕಥೆ ಈ ಸಿನಿಮಾ ಜೀವಾಳ.

ನಿನ್ನ ಸನಿಹಕೆ ಚಿತ್ರದ ಪ್ಲಸ್ ಪಾಯಿಂಟ್ ಏನು?

ನಿನ್ನ ಸನಿಹಕೆ ಸಿನಿಮಾ ವಿಶೇಷತೆಗಳ ಬಗ್ಗೆ ಟಾಪ್ ಫೈವ್ ಅಂತ ಪಟ್ಟಿ ಮಾಡಿ ಬಣ್ಣಿಸೋದಾದ್ರೆ ಮೊದಲ ಸ್ಥಾನವನ್ನ ಗಳಿಸಿಕೊಳ್ಳೋದು ರಘು ದೀಕ್ಷಿತ್ ಅವರ ಮ್ಯೂಸಿಕ್​​. ನಿನ್ನ ಸನಿಹಕೆ ಚಿತ್ರದ ಹಾಡುಗಳಿಂದ ಮನ ಗೆದ್ದಿದ್ದ ರಘು ದೀಕ್ಷಿತ್ ಈ ಸಿನಿಮಾದ ಬ್ಯಾಕ್ ಗ್ರೌಂಡ್ ಮ್ಯೂಸಿಕ್​​ನಿಂದಲೂ ದಿಲ್ ಖುಷ್ ಮಾಡ್ತಾರೆ. ಇನ್ನು ಸಿನಿಮಾದ ಕ್ಯಾಮೆರಾ ವರ್ಕ್ ಮತ್ತು ಲೊಕೇಷನ್ ಅದ್ಭುತ. ಲೊಕೇಷನ್ ಆದ ನಂತರ ಕಲಾವಿದರ ಅಭಿನಯ ವಂಡರ್ ಫುಲ್​. ಧನ್ಯಾ ರಾಮ್ ಕುಮಾರ್ ಅವರ ಅಭಿನಯ ನೋಡಿದ್ರೆ ಪಕ್ಕಾ ಇವ್ರು ಅಣ್ಣಾವ್ರಿಗೆ ತಕ್ಕ ಮೊಮ್ಮಗಳು ಎಂದು ಬಣ್ಣಿಸಬಹುದು. ಧನ್ಯಾ ಅವರಂತೆ ಸೂರಜ್ ಗೌಡ ಮತ್ತು ಸಹಾ ಕಲಾವಿದರ ಫರ್ಫಾರ್ಮೆನ್ಸ್ ಬೊಂಬಾಟ್​. ಇನ್ನು ಕೊನೆಯದಾಗಿ ಡೈರೆಕ್ಷನ್.. ಸೂರಜ್ ಗೌಡ ನಟನೆಯ ಜೊತೆ ಡೈರೆಕ್ಷನ್ ಕೆಲಸವನ್ನು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ.

ನಿನ್ನ ಸನಿಹಕೆ ಸಿನಿಮಾ ಮೈನಸ್ ಪಾಯಿಂಟ್ ಏನು..?

ಇದು ಫೈವ್ ಜಿ ಜಮಾನ.. ಐ ಸ್ಪೀಡ್ ಇಂಟರ್​​ನೆಟ್​​ನಲ್ಲಿ ಬೇಜಾನ್ ಮನರಂಜನೆಯನ್ನ ಅಂಗೈನಲ್ಲೇ ಪಡೆಯುತ್ತಿದ್ದಾನೆ. ಪ್ರೇಕ್ಷಕ ಥಿಯೇಟರ್​​​ಗೆ ಬಂದು ಕೂರಬೇಕು ಅಂದ್ರೆ ಬಿಗ್ ಕಂಟೆಂಟೇ ಕೊಡಬೇಕು.. ಗೊತ್ತಿಲ್ಲದ ಕಥೆಯನ್ನೇ ಹೇಳಬೇಕು ಅನ್ನೋ ಪರಿಸ್ಥಿತಿ ಉಂಟಾಗಿದೆ. ನಿನ್ನ ಸನಿಹಕೆ ಸಿನಿಮಾದ ಕಥೆ ಇನ್ನೂ ಸ್ಟ್ರಾಂಗ್ ಆಗಬೇಕಿತ್ತು. ಸಿನಿಮಾದ ಲೆಂತ್ ಕೊಂಚ ಕಟ್ ಆದ್ರೆ ಅರಾಮ್ಸೆ ವಾಚೆಬಲ್ ಮೂವಿ.

ನಿನ್ನ ಸನಿಹಕೆ ಸಿನಿಮಾ ನೋಡಿದ ಸ್ಟಾರ್ಸ್ ಏನೆಂದ್ರು..?

ನಿನ್ನ ಸನಿಹಕೆ ಸಿನಿಮಾ ರಿಲೀಸ್ ಆಗೋ ಒಂದು ದಿನ ಮುಂಚಿತವಾಗಿಯೇ ಸಿನಿಮಾ ಪ್ರೀಮಿಯರ್ ಶೋ ಆಯೋಜನೆ ಮಾಡಿತ್ತು. ಡಾ.ರಾಜ್ ಕುಮಾರ್ ಫ್ಯಾಮಿಲಿ ಬಹುದಿನಗಳ ನಂತರ ತಮ್ಮ ಕುಟುಂಬದ ಕಲಾವಿದೆಯ ಸಿನಿಮಾವನ್ನ ಒಟ್ಟಿಗೆ ಕಣ್ತುಂಬಿಕೊಳ್ತು.. ಅಣ್ಣಾವ್ರ ಫ್ಯಾಮಿಲಿಯಂತೆ ಸಿನಿಮಾ ರಂಗದ ಅನೇಕ ಕಲಾ ಕುಟುಂಬಗಳು ನಿನ್ನ ಸನಿಹಕೆ ಚಿತ್ರಕ್ಕಾಗಿ ಥಿಯೇಟರ್ ಸನಿಹ ಬಂದಿದ್ದರು.

ಈ ವೇಳೆ ಮಾತನಾಡಿದ ನಟ ಡಾ.ಶಿವರಾಜ್ ಕುಮಾರ್, ಧನ್ಯಾರ ಅಭಿನಯ ಹಾಗೂ ಸೂರಜ್ ಗೌಡರ ನಟನೆ ಪ್ಲಸ್​ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್​ ನೀಡಿದ್ರು. ಅಷ್ಟೇ ಅಲ್ಲದೇ, ರಘು ದೀಕ್ಷಿತ್ ಮ್ಯೂಸಿಕ್​ ಬಗ್ಗೆ ಮಾತನಾಡೋದಿಕ್ಕೂ ಸಹ ಈ ವೇಳೆ ಶಿವಣ್ಣ ಮರೀಲಿಲ್ಲ. ಇನ್ನು ಪ್ರೀಮಿಯರ್ ಶೋ ನೋಡಿದ ರಾಘಣ್ಣ ಮತ್ತು ಅಪ್ಪು, ಸಿನಿಮಾವನ್ನು ನಾವು ಮೆಚ್ಚಿದ್ದೇವೆ ಆದ್ರೆ ಜನ ನೋಡಿ ಮೆಚ್ಚಿಕೊಳ್ಳಬೇಕು ಅದೇ ನಿಜವಾದ ಗೆಲುವು ಅಂತಾ ಆಶೀರ್ವಾದ ಮಾಡಿದ್ದಾರೆ.

ಒಟ್ಟಿನಲ್ಲಿ ನಿನ್ನ ಸನಿಹಕೆ ಸಿನಿಮಾ ಮತ್ತೆ ಥಿಯೇಟರ್ ಅಂಗಳಲ್ಲಿ ಹಬ್ಬದ ವಾತಾವರಣವನ್ನ ಕ್ರಿಯೆಟ್ ಮಾಡಿದೆ. ಥಿಯೇಟರ್​ ಕಡೆ ಮುಖ ಮಾಡದೆ ಇದ್ದ ಪ್ರೇಕ್ಷಕ ಪ್ರಭುಗಳು ಚಿತ್ರಮಂದಿರಗಳ ಕಡೆ ಪಾದ ಬೆಳೆಸಿದ್ದಾರೆ. ನೀವು ಯಾಕೆ ತಡ ಮಾಡ್ತಿದ್ದಿರಿ ಥಿಯೇಟರ್​​ಗೆ ಹೋಗಿ ಕನ್ನಡ ಸಿನಿಮಾಗಳನ್ನ ನೋಡಿ ಬೆಳೆಸಿ ಉಳಿಸಿ ಹಾರೈಸಿ.

News First Live Kannada

Leave a comment

Your email address will not be published. Required fields are marked *