ಪ್ರೇಯಸಿಯನ್ನು ಕರೆಸಿಕೊಳ್ಳಲು ಪ್ರತಿ ಬಾರಿ ಖಾಸಗಿ ವಿಮಾನ ಕಳಿಸುತ್ತಿದ್ದ ವಂಚಕ ಸುಕೇಶ್​; ಕೊನೆಗೆ ಜೈಲುಪಾಲು | Conman Sukesh Chandrashekhar sent private jet for Jacqueline Fernandez


ಪ್ರೇಯಸಿಯನ್ನು ಕರೆಸಿಕೊಳ್ಳಲು ಪ್ರತಿ ಬಾರಿ ಖಾಸಗಿ ವಿಮಾನ ಕಳಿಸುತ್ತಿದ್ದ ವಂಚಕ ಸುಕೇಶ್​; ಕೊನೆಗೆ ಜೈಲುಪಾಲು

ಜಾಕ್ವೆಲಿನ್ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್

ವಂಚನೆ ಆರೋಪ ಹೊತ್ತಿರುವ ಸುಕೇಶ್​ ಚಂದ್ರಶೇಖರ್​ (Sukesh Chandrashekhar) ಮತ್ತು ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ನಡುವೆ ಯಾವ ರೀತಿ ಸಂಬಂಧ ಇತ್ತು ಎಂಬ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ಅವರಿಬ್ಬರ ನಡುವೆ ಏನೇ ಸಂಬಂಧ ಇದ್ದರೂ ಅದು ಅವರ ವೈಯಕ್ತಿಕ ವಿಚಾರ. ಆದರೆ ಜಾರಿ ನಿರ್ದೇಶನಾಯಲವು (Enforcement Directorate) ತನಿಖೆ ನಡೆಸುತ್ತಿರುವ ಉದ್ದೇಶವೇ ಬೇರೆ. ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚಿಸಿದ ಆರೋಪವನ್ನು ಸುಕೇಶ್​ ಚಂದ್ರಶೇಖರ್ ಎದುರಿಸುತ್ತಿದ್ದಾರೆ. ಆ ಹಣದಲ್ಲಿ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ (Jacqueline Fernandez) ಅವರಿಗೂ ಪಾಲು ಹೋಗಿದೆ ಎಂಬ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಈ ತನಿಖೆ ಜಾರಿಯಲ್ಲಿದೆ. ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸೇರಿದ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ಸುದ್ದಿ ಆಗಿದೆ. ಅದೇ ರೀತಿ ಸುಕೇಶ್​ ಚಂದ್ರಶೇಖರ್​ ಕಡೆಯಿಂದ ಜಾಕ್ವೆಲಿನ್​ ಪಡೆದ ಕೆಲವು ಐಷಾರಾಮಿ ಸೌಲಭ್ಯಗಳ ಬಗ್ಗೆಯೂ ವರದಿ ಆಗಿದೆ. ಇಬ್ಬರ ನಡುವೆ ಸಿಕ್ಕಾಪಟ್ಟೆ ಆಪ್ತತೆ ಇತ್ತು ಎಂಬುದಕ್ಕೆ ಸಾಕ್ಷಿಯಾಗಿ ಈಗಗಾಗಲೇ ಕೆಲವು ಫೋಟೋಗಳು ಲೀಕ್​ ಆಗಿವೆ. ಅಚ್ಚರಿ ಎಂದರೆ, ಪ್ರತಿ ಬಾರಿ ಜಾಕ್ವೆಲಿನ್​ ಅವರನ್ನು ಕರೆಸಿಕೊಳ್ಳುವಾಗ ಸುಕೇಶ್​ ಚಂದ್ರಶೇಖರ್​ ಖಾಸಗಿ ವಿಮಾನ ಕಳಿಸುತ್ತಿದ್ದರು! ಈ ವಿಷಯ ಕೂಡ ಈಗ ಬಯಲಾಗಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾಕ್ವೆಲಿನ್​ ಫರ್ನಾಂಡಿಸ್​ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಖಾಸಗಿ ವಿಮಾನದ ಕಥೆಯನ್ನು ಅವರು ಬಾಯಿ ಬಿಟ್ಟಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. 2021ರ ಜೂನ್​ನಲ್ಲಿ ಸುಕೇಶ್​ ಚಂದ್ರಶೇಖರ್​ ಮತ್ತು ಜಾಕ್ವೆಲಿನ್ ಅವರು ಮೊದಲ ಬಾರಿಗೆ ಭೇಟಿ ಆದರು. ಅದಕ್ಕೂ ಮುನ್ನ ಅವರು ಕೇವಲ ವಾಟ್ಸಪ್​ ಮೂಲಕ ಸಂಪರ್ಕದಲ್ಲಿ ಇದ್ದರು.

ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕಾಗಿ ಮುಂಬೈನಿಂದ ಚೆನ್ನೈಗೆ ಬರಲು ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸುಕೇಶ್​ ಚಂದ್ರಶೇಖರ್ ಪ್ರೈವೇಟ್​ ಜೆಟ್​ ಕಳಿಸಿದ್ದರು. ಚೆನ್ನೈ ವಿಮಾನ ನಿಲ್ದಾಣಕ್ಕೆ ಸಹಾಯಕರನ್ನು ಕಳಿಸಿ, ಜಾಕ್ವೆಲಿನ್ ಅವರನ್ನು ಬರಮಾಡಿಕೊಂಡಿದ್ದರು. ಅಂದು ಅವರು ಜೊತೆಯಾಗಿ ಕಾಲ ಕಳೆದರು. ಒಟ್ಟಿಗೆ ಊಟ ಸವಿದರು. ನಂತರ ವಾಪಸ್​ ಮುಂಬೈಗೆ ಹೋಗಲು ಖಾಸಗಿ ವಿಮಾನದ ವ್ಯವಸ್ಥೆ ಮಾಡಲಾಯಿತು. ಈ ಎಲ್ಲದರ ಖರ್ಚುಗಳನ್ನೂ ಸುಕೇಶ್​ ಭರಿಸಿದ್ದರು ಎಂದು ಜಾಕ್ವೆಲಿನ್​ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.

ಇಷ್ಟಕ್ಕೇ ಮುಗಿಯಲಿಲ್ಲ, ಜಾಕ್ವೆಲಿನ್​ ಫರ್ನಾಂಡಿಸ್​ ಎರಡು ಬಾರಿ ಕೇರಳಕ್ಕೆ ಭೇಟಿ ನೀಡಿದ್ದರು. ಆಗಲೂ ಕೂಡ ಖಾಸಗಿ ವಿಮಾನ ಕಳಿಸಿಕೊಟ್ಟಿದ್ದು ಇದೇ ಸುಕೇಶ್​ ಚಂದ್ರಶೇಖರ್​. ವಿಮಾನ ನಿಲ್ದಾಣದಿಂದ ಹೋಟೆಲ್​ ವರೆಗಿನ ಪ್ರಯಾಣಕ್ಕೆ ಹೆಲಿಕಾಪ್ಟರ್​ ಕಳಿಸಲಾಗಿತ್ತು! ಈ ವಿಮಾನ ಮತ್ತು ಹೆಲಿಕಾಪ್ಟರ್​ಗೆ ತಾನೇ ಒಡೆಯ ಒಂದು ಜಾಕ್ವಲಿನ್​ ಬಳಿ ಸುಕೇಶ್​ ಹೇಳಿಕೊಂಡಿದ್ದರಂತೆ.

ಇದಲ್ಲದೇ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಅನೇಕ ಬಗೆಯ ಉಡುಗೊರೆಗಳನ್ನು ಕೂಡ ಸುಕೇಶ್​ ಚಂದ್ರಶೇಖರ್​ ನೀಡಿದ್ದಾರೆ. ಮಿನಿ ಕೂಪರ್​ ಕಾರನ್ನು ನೀಡಲಾಗಿತ್ತು. ಆದರೆ ತಮಗೆ ಅದು ಬೇಡ ಎಂದು ವಾಸಪ್​ ನೀಡಿರುವುದಾಗಿ ಇಡಿ ಅಧಿಕಾರಿಗಳ ಎದುರು ಜಾಕ್ವೆಲಿನ್​ ಫರ್ನಾಂಡಿಸ್​ ಹೇಳಿರುವ ಬಗ್ಗೆ ವರದಿ ಆಗಿದೆ. ಒಟ್ಟಿನಲ್ಲಿ ಪ್ರೇಯಸಿಗಾಗಿ ಇಷ್ಟೆಲ್ಲ ಖರ್ಚು ಮಾಡಿದ ಸುಕೇಶ್​ ಚಂದ್ರಶೇಖರ್ ಜೈಲು ಪಾಲಾಗಬೇಕಾಯಿತು. ತನಿಖೆಯ ವ್ಯಾಪ್ತಿ ಹೆಚ್ಚಿದಂತೆಲ್ಲ ಅನೇಕ ವಿಚಾರಗಳು ಬಯಲಾಗುತ್ತಿವೆ. ಜಾಕ್ವೆಲಿನ್​ ಫರ್ನಾಂಡಿಸ್​ ಕೈಯಲ್ಲಿ ಹಲವು ಸಿನಿಮಾಗಳಿವೆ. ಕನ್ನಡದ ‘ವಿಕ್ರಾಂತ್ ರೋಣ’ ಚಿತ್ರದಲ್ಲೂ ಅವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *