ಬ್ಯೂನಸ್‌ ಐರೆಸ್‌: ಒಲಿಂಪಿಕ್‌ ಚಾಂಪಿಯನ್‌ ಆರ್ಜೆಂಟೀನಾ ಮೇಲೆ ಅವರದೇ ನಾಡಿನಲ್ಲಿ ದಂಡೆತ್ತಿ ಹೋದ ಭಾರತ ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯ ದ್ವಿತೀಯ ಪಂದ್ಯದಲ್ಲಿ 3-0 ಗೋಲುಗಳ ಜಯಭೇರಿ ಮೊಳಗಿಸಿದೆ. ಈ ಸಾಧನೆಯಿಂದ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ನೆಗೆದಿದೆ.

ಪಂದ್ಯದ 11ನೇ ನಿಮಿಷದಲ್ಲೇ ಹರ್ಮನ್‌ಪ್ರೀತ್‌ ಸಿಂಗ್‌ ಗೋಲಿನ ಖಾತೆ ತೆರೆದರು. ಬಳಿಕ 25ನೇ ನಿಮಿಷದಲ್ಲಿ ಲಲಿತ್‌ ಉಪಾಧ್ಯಾಯ ಅವರಿಂದ ದ್ವಿತೀಯ ಗೋಲು ಸಿಡಿಯಿತು. ಅಂತಿಮ ಗೋಲನ್ನು ಪಂದ್ಯದ ಮುಕ್ತಾಯಕ್ಕೆ ಕೇವಲ 2 ನಿಮಿಷ ಇರುವಾಗ ಮನ್‌ದೀಪ್‌ ಸಿಂಗ್‌ ಬಾರಿಸಿದರು.

ಪಾಠಕ್‌ ಅಮೋಘ ರಕ್ಷಣೆ
ಆರ್ಜೆಂಟೀನಾ ಕೂಡ ಉತ್ತಮ ಹೋರಾಟವನ್ನೇ ಸಂಘಟಿಸಿತ್ತು. ಆದರೆ ಗೋಲ್‌ ಕೀಪರ್‌ ಕೃಷ್ಣ ಬಹಾದೂರ್‌ ಪಾಠಕ್‌ ಅಮೋಘ ಪ್ರದರ್ಶನ ನೀಡಿ ಭಾರತದ ಪಾಲಿನ ಆಪತಾºಂಧವರಾದರು. ಮಾರ್ಟಿನ್‌ ಫೆರೆರೊ ಅವರ ಎರಡು ಹೊಡೆತಗಳನ್ನು ಅದ್ಭುತ ರೀತಿಯಲ್ಲಿ ತಡೆದರು. ಶನಿವಾರದ ಪಂದ್ಯವನ್ನು ಭಾರತ ಶೂಟೌಟ್‌ನಲ್ಲಿ ಗೆದ್ದಿತ್ತು.

ಈ ಜಯದಿಂದ ಭಾರತ 8 ಪಂದ್ಯಗಳಿಂದ ಒಟ್ಟು 15 ಅಂಕ ಸಂಪಾದಿಸಿತು. ಆಸ್ಟ್ರೇಲಿಯವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಏರಿತು. ಆಸ್ಟ್ರೇಲಿಯ ಇಷ್ಟೇ ಪಂದ್ಯಗಳಿಂದ 14 ಅಂಕ ಗಳಿಸಿದೆ. ಆರ್ಜೆಂಟೀನಾ 6ನೇ ಸ್ಥಾನಕ್ಕೆ ಕುಸಿದಿದೆ (12 ಪಂದ್ಯ, 11 ಅಂಕ). ಭಾರತವಿನ್ನು ಗ್ರೇಟ್‌ ಬ್ರಿಟನ್‌ ಪ್ರವಾಸಕ್ಕೆ ತೆರಳಿ ಮೇ 8 ಮತ್ತು 9ರಂದು ಎರಡು ಪಂದ್ಯಗಳನ್ನು ಆಡಲಿದೆ.

ಕ್ರೀಡೆ – Udayavani – ಉದಯವಾಣಿ
Read More