ನವದೆಹಲಿ: ಕೋವಿಡ್​ ರೋಗಿಗಳು ಗುಣಮುಖರಾಗಲು.. ಸಾವಿನಿಂದ ಬಚಾವಾಗಲು ಪರಿಣಾಮಕಾರಿ ಎನ್ನಲಾಗಿದ್ದ ಪ್ಲಾಸ್ಮಾ ಥೆರಪಿಯನ್ನ ವೈದ್ಯಕೀಯ ನಿರ್ವಹಣಾ ಮಾರ್ಗಸೂಚಿಯಿಂದ ಹೊರಗಿಡಲು ಚಿಂತನೆ ನಡೆದಿದೆ. ಐಸಿಎಮ್​ಆರ್- ರಾಷ್ಟ್ರೀಯ ಟಾಸ್ಕ್​ ಫೋರ್ಸ್​ ಸಭೆಯಲ್ಲಿ ಎಲ್ಲ ಸದಸ್ಯರೂ ಸಹ ಪ್ಲಾಸ್ಮಾ ಥೆರಪಿಯಿಂದ ಹೊರಗಿಡಲು ಒಲವು ತೋರಿದ್ದಾರೆ ಎನ್ನಲಾಗಿದೆ. ಈ ಕುರಿತು ಸದ್ಯದಲ್ಲೇ ಐಸಿಎಮ್​ಆರ್ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಿದೆಯಂತೆ.

ಪ್ಲಾಸ್ಮಾ ಥೆರಪಿ ಬೇಡ ಎಂದ ವಿಜ್ಞಾನಿಗಳು, ವೈದ್ಯರು..

ಕೆಲವು ವಿಜ್ಞಾನಿಗಳು ಮತ್ತು ವೈದ್ಯರು ಪ್ರಿನ್ಸಿಪಲ್ ಸೈಂಟಿಫಿಕ್ ಅಡ್ವೈಸರ್ ಕೆ. ವಿಜಯ್​ರಾಘವನ್ ಅವರಿಗೆ ಪತ್ರ ಬರೆದು ಪ್ಲಾಸ್ಮಾ ಥೆರಪಿ ತರ್ಕಬದ್ಧವಲ್ಲದ ಮತ್ತು ಅವೈಜ್ಞಾನಿಕ ಬಳಕೆ ಎಂದು ಅಭಿಪ್ರಾಯ ತಿಳಿಸಿದ ಬೆನ್ನಲ್ಲೇ ಟಾಸ್ಕ್​ ಫೋರ್ಸ್​ ಕಮಿಟಿ ಈ ಕುರಿತು ಕೂಲಂಕುಶ ಚರ್ಚೆ ನಡೆಸಿದೆ ಎನ್ನಲಾಗಿದೆ.

ಇನ್ನು ಸಾರ್ವಜನಿಕ ಆರೋಗ್ಯ ತಜ್ಞರು, ಐಸಿಎಂಆರ್ ಮುಖ್ಯಸ್ಥ ಬಲರಾಮ್ ಭಾರ್ಗವ್, ಮತ್ತು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಸಹ ಗೈಡ್​​​ಲೈನ್ಸ್​​ನಲ್ಲಿ ಇರುವ ಪ್ಲಾಸ್ಮಾ ಥೆರಪಿ ಸದ್ಯದ ಸಾಕ್ಷ್ಯಗಳ ಆಧಾರದ ಮೇಲಿಲ್ಲ ಎಂದಿದ್ದಾರೆ.

ಪರೋಕ್ಷವಾಗಿ ಪ್ಲಾಸ್ಮಾ ಥೆರಪಿ ಸಾಂಕ್ರಾಮಿಕಕ್ಕೆ ಇಂಧನ ತುಂಬುತ್ತಿದೆ..

ಇನ್ನು ಈ ಪ್ಲಾಸ್ಮಾ ಥೆರಪಿಯಿಂದಲೇ ಹೆಚ್ಚಿನ ವೈರಸ್​​ನ ಸ್ಟ್ರೇನ್​ಗಳು ಉಂಟಾಗುತ್ತಿದ್ದು ಇದರಿಂದ ಸಾಂಕ್ರಮಿಕಕ್ಕೆ ಮತ್ತಷ್ಟು ಇಂಧನ ತುಂಬಿದಂತಾಗುತ್ತಿದೆ ಎಂದು ವ್ಯಾಕ್ಸಿನೊಲೊಜಿಸ್ಟ್ ಗಗನ್​ದೀಪ್ ಕಂಗ್ ಮತ್ತು ಸರ್ಜನ್ ಪ್ರಮೇಶ್ ಸಿ ಎಸ್ ಎಂಬುವವರು ಪತ್ರದ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ.

ಮಾರ್ಗಸೂಚಿಯಿಂದ ಹೊರಗಿಡಲು ಚಿಂತನೆ

ಮುಂದುವರೆದು 11,588 ಸೋಂಕಿತರ ಮೇಲೆ ನಡೆದ ಪ್ರಯೋಗದಲ್ಲಿ ಸಾವು ಅಥವಾ ಸೋಂಕಿತ ಡಿಸ್ಚಾರ್ಜ್ ಆಗುವ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ ಅಂತಲೂ ಹೇಳಲಾಗಿದೆ. ಹೀಗಾಗಿ ಪ್ಲಾಸ್ಮಾ ಥೆರಪಿಯಿಂದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಪ್ರಯೋಜನಗಳಾಗುತ್ತಿಲ್ಲ.. ಬದಲಿಗೆ ಹೆಚ್ಚಿನ ಸ್ಟ್ರೇನ್​ಗಳು ಬೆಳೆಯಲು ಕಾರಣವಾಗುತ್ತಿದೆ ಎಂಬುದನ್ನು ಗಮನಿಸಿ ಇದೀಗ ಪ್ಲಾಸ್ಮಾ ಥೆರಪಿಯನ್ನು ಕೈಬಿಡಲು ಟಾಸ್ಕ್​ಪೋರ್ಸ್​ ನಿರ್ಧರಿಸಲು ಮುಂದಾಗಿದೆ.

The post ಪ್ಲಾಸ್ಮಾ ಥೆರಪಿಯಿಂದ ಯಾವುದೇ ಪ್ರಯೋಜನವಿಲ್ಲ.. ಮಾರ್ಗಸೂಚಿಯಿಂದ ಹೊರಗಿಡಲು ಚಿಂತನೆ appeared first on News First Kannada.

Source: newsfirstlive.com

Source link