ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ. ರಾಜ್​-ಪುನೀತ್​ ಜೀವನ ಚರಿತ್ರೆ; ಇಲ್ಲಿದೆ ಅಭಿಮಾನಿಗಳಿಗೆ ಸಿಹಿ ಸುದ್ದಿ | Lalbagh Flower Show 2021 will have Puneeth Rajkumar and Dr Rajkumar theme


ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ. ರಾಜ್​-ಪುನೀತ್​ ಜೀವನ ಚರಿತ್ರೆ; ಇಲ್ಲಿದೆ ಅಭಿಮಾನಿಗಳಿಗೆ ಸಿಹಿ ಸುದ್ದಿ

ಡಾ. ರಾಜ್​ಕುಮಾರ್, ಪುನೀತ್​ ರಾಜ್​ಕುಮಾರ್

ನಟ ಪುನೀತ್​ ರಾಜ್​ಕುಮಾರ್ (Puneeth Rajkumar) ಅವರು ಕರುನಾಡಿಗೆ ನೀಡಿದ ಕೊಡುಗೆ ಅಪಾರ. ಸಿನಿಮಾ ಮೂಲಕ ಕೋಟ್ಯಂತರ ಜನರನ್ನು ರಂಜಿಸಿದ್ದು ಮಾತ್ರವಲ್ಲದೇ, ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಅವರು ಅಪಾರ ಸಂಖ್ಯೆಯ ಜನರಿಗೆ ನೆರವಾಗಿದ್ದರು. ಅಂಥ ವ್ಯಕ್ತಿಗೆ ಸೂಕ್ತ ರೀತಿಯಲ್ಲಿ ನಮನ ಸಲ್ಲಿಸಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್​ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಈಗ ಅಭಿಮಾನಿಗಳಿಗೆ ಖುಷಿ ನೀಡುವಂತಹ ಇನ್ನೊಂದು ಸುದ್ದಿ ಸಿಕ್ಕಿದೆ. ಮುಂಬರುವ ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನದಲ್ಲಿ ಡಾ. ರಾಜ್​ಕುಮಾರ್ (Dr Rajkumar)​ ಮತ್ತು ಪುನೀತ್​ ರಾಜ್​ಕುಮಾರ್​ ಅವರ ಜೀವನ ಚರಿತ್ರೆಯನ್ನು ಅನಾವರಣಗೊಳಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಈ ಇಬ್ಬರು ಕಲಾವಿದರಿಗೆ ವಿಶೇಷ ರೀತಿಯಲ್ಲಿ ಪುಷ್ಪ ನಮನ ಸಲ್ಲಿಕೆ ಆಗಲಿದೆ. 2022ರ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show) ಈಗಾಗಲೇ ಸಿದ್ಧತೆ ಆರಂಭ ಆಗಿದೆ. ಈ ಸುದ್ದಿ ಕೇಳಿದ ಬಳಿಕ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಕಾತರದಿಂದ ಕಾಯುವಂತಾಗಿದೆ.

ಲಾಲ್​ಬಾಗ್​ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಪ್ರತಿಬಾರಿಯೂ ಒಂದೊಂದು ಥೀಮ್​ನಲ್ಲಿ ಈ ಪ್ರದರ್ಶನ ಆಯೋಜನೆಗೊಳ್ಳುತ್ತದೆ. ಈ ಬಾರಿ ಪುನೀತ್​ ರಾಜ್​ಕುಮಾರ್​ ಮತ್ತು ಡಾ. ರಾಜ್​ಕುಮಾರ್​ ಅವರ ಜೀವನ ಚರಿತ್ರೆಯನ್ನು ಫಲಪುಷ್ಪಗಳಿಂದ ಅನಾವರಣ ಮಾಡಲಿರುವುದು ವಿಶೇಷ. ಆ ಕಾರಣದಿಂದ 2022ರ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನ ವಿಶೇಷ ಎನಿಸಿಕೊಳ್ಳಲಿದೆ.

ಈ ಕುರಿತಂತೆ ತೋಟಗಾರಿಕಾ ಇಲಾಖೆ ತೀರ್ಮಾನ ತೆಗೆದುಕೊಂಡಿದೆ. ಮೈಸೂರು ಉದ್ಯಾನಕಲಾ ಸಂಘದ ಪದಾಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಲಾಗಿದೆ. ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಜೀವನ ಚರಿತ್ರೆಯನ್ನು ಹೂವುಗಳಿಂದ ಅಲಂಕರಿಸಿ ಸಾರ್ವಜನಿಕರಿಗೆ ವಿವರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮುಂದಿನ ಹೆಜ್ಜೆ ಇಟ್ಟ ಪಿಆರ್​ಕೆ ಪ್ರೊಡಕ್ಷನ್ಸ್​

ಪುನೀತ್​ ರಾಜ್​ಕುಮಾರ್​ ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಭೇಷ್​ ಎನಿಸಿಕೊಂಡಿದ್ದಾರೆ. ಅವರು ಪಿಆರ್​ಕೆ ಪ್ರೊಡಕ್ಷನ್ಸ್​ ಆರಂಭಿಸುವ ಮೂಲಕ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದರು. ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ಅವರು ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದರು. ಆದರೆ, ಅವರಿಲ್ಲದೆ ಪಿಆರ್​ಕೆ ಪ್ರೊಡಕ್ಷನ್ಸ್​​ ಬಡವಾಗಿದೆ. ಆದರೆ, ಅವರು ಇಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡು ಮುಂದೆ ಸಾಗಲೇಬೇಕಿದೆ. ಇದೇ ಮಾತು ಪಿಆರ್​ಕೆ ಪ್ರೊಡಕ್ಷನ್ಸ್ ​​ ಕಡೆಯಿಂದಲೂ ಬಂದಿದೆ.

‘ನಮಗೆ ಹಿಂದಿನದನ್ನು ಬದಲಿಸುವುದು ಅಸಾಧ್ಯ. ಆದರೆ ಪುನೀತ್ ರಾಜ್‌ಕುಮಾರ್ ಅವರು ನಮಗೆ ನೀಡಿರುವ ಉತ್ಸಾಹ ಮತ್ತು ಸ್ಫೂರ್ತಿಯೊಂದಿಗೆ ಪಿ.ಆರ್.ಕೆ ಪ್ರೊಡಕ್ಷನ್ಸ್ ಮತ್ತು ಪಿ.ಆರ್.ಕೆ ಆಡಿಯೋದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸಲು ಎದುರು ನೋಡುತ್ತೇವೆ. ನಮ್ಮ ಈ ಪ್ರಯಾಣವನ್ನು ಪುನರಾರಂಭಿಸುತ್ತ ಅವರ ಕನಸುಗಳನ್ನು ನನಸಾಗಿಸುವಲ್ಲಿ ನಿಮ್ಮ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ’ಎಂದು ಪಿಆರ್​ಕೆ ಪ್ರೊಡಕ್ಷನ್ಸ್​ ಹೇಳಿಕೆ ಪ್ರಕಟಿಸಿದೆ.

ಇದನ್ನೂ ಓದಿ:

‘ಅಪ್ಪು ಸರ್​ ಜತೆ ನಾನು ವರ್ಕೌಟ್​ ಮಾಡ್ತಿದ್ದೆ’; ಪುನೀತ್​ ಜತೆಗಿನ ನೆನಪು ಹಂಚಿಕೊಂಡ ಮನುರಂಜನ್​

ಮೈತುಂಬ ಅಪ್ಪು ಚಿತ್ರ, 300 ಕಿಮೀ ಸೈಕಲ್​ ಸವಾರಿ; ಪುನೀತ್​ ಸಮಾಧಿಗೆ ಅಪರೂಪದ ಅಭಿಮಾನಿ ಭೇಟಿ

TV9 Kannada


Leave a Reply

Your email address will not be published. Required fields are marked *